ಮಂಗಳವಾರ, ಫೆಬ್ರವರಿ 18, 2020
30 °C
ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಿಂದ ಆಯೋಜನೆ

ಒಣಮೆಣಸಿನಕಾಯಿ ಮೇಳ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರಮಠದ ಪ್ರೌಢ‌‌‌ಶಾಲಾ ಮೈದಾನದಲ್ಲಿ ಫೆ.8ರಿಂದ 10ರ ವರಗೆ 10ನೇ ವರ್ಷದ ಒಣಮೆಣಸಿನಕಾಯಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪುರ ತಿಳಿಸಿದರು.

ಮೇಳದಲ್ಲಿ 110 ಮಳಿಗೆಗಳನ್ನು ತೆರೆಯಲಾಗಿದ್ದು, ಸುಮಾರು 600 ಬೆಳೆಗಾರರು ಭಾಗವಹಿಸುವ ನಿರೀಕ್ಷೆ ಇದೆ. ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರ ವರೆಗೆ ಮೇಳ ನಡೆಯಲಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಒಣಮೆಣಸಿನಕಾಯಿ ನೇರ ಮಾರಾಟವನ್ನು ಪ್ರೋತ್ಸಾಹಿಸುವುದು, ಬೆಳೆಗಾರರ ಮತ್ತು ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವುದು, ಬೆಳೆಗಾರರು, ಗ್ರಾಹಕರು, ವಿಜ್ಞಾನಿಗಳು ಹಾಗೂ ಸಂಸ್ಕರಣಾದಾರರನ್ನು ಒಂದೇ ವೇದಿಕೆಗೆ ತರುವುದು, ಒಣಮೆಣಸಿನಕಾಯಿ ಬೇಸಾಯದಲ್ಲಿನ ಇತ್ತೀಚಿನ ಸಂಶೋಧನಾ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸುವುದು ಹಾಗೂ ವಿವಿಧ ತಳಿಗಳು ಮತ್ತು ಸಂಸ್ಕರಿಸಿದ ಪದಾರ್ಥಗಳನ್ನು ಪರಿಚಯಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು.

ಹೆಸರು ನೋಂದಾಯಿಸಲು ಅವಕಾಶ:

ಆಸಕ್ತ ರೈತರು ತಮ್ಮ ಹೆಸರನ್ನು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಕಾರ್ಯಾಲಯದ ದೂರವಾಣಿ ಸಂಖ್ಯೆ 0836–2375030, ತೋಟಗಾರಿಕೆ ಇಲಾಖೆ ಹುಬ್ಬಳ್ಳಿ 0836–2355138, ತೋಟಗಾರಿಕೆ ಇಲಾಖೆ ಧಾರವಾಡ 0836–2746334, ತೋಟಗಾರಿಕೆ ಇಲಾಖೆ ನವಲಗುಂದ 08380–229170, ಕುಂದಗೋಳ ತಾಲ್ಲೂಕಿನ ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ 08304–296297 ಮತ್ತು ಅಮರಗೋಳದ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆ 0836–2225446 ಕಾರ್ಯಾಲಯಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದರು.

ಮೇಳದಲ್ಲಿ ಹೆಸರು ನೋಂದಾಯಿಸಲು ಇಚ್ಛಿಸುವ ರೈತರು ತಮ್ಮ ಆಧಾರ್‌ ಕಾರ್ಡ್‌ ಅಥವಾ ಚುನಾವಣಾ ಗುರುತಿನ ಚೀಟಿಯ ಝೆರಾಕ್ಸ್‌ ಪ್ರತಿಯನ್ನು ಹಾಜರು ಪಡಿಸಬೇಕು ಎಂದು ಹೇಳಿದರು.

ಮೇಳ ಉದ್ಘಾಟನೆ:

ಫೆ. 8ರಂದು ಬೆಳಿಗ್ಗೆ 11ಕ್ಕೆ ಆರಂಭವಾಗುವ ಮೇಳವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಸಚಿವ ಜಗದೀಶ ಶೆಟ್ಟರ್‌ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ತೋಟಗಾರಿಕಾ ಸಚಿವ ವಿ.ಸೋಮಣ್ಣ ‘ಕಿರುಹೊತ್ತಿಗೆ’ ಬಿಡುಗಡೆ ಮಾಡುವರು. ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಫೆಬ್ರುವರಿ ಅಂತ್ಯಕ್ಕೆ ಮೈಸೂರಿನಲ್ಲಿ ಸಾಂಬಾರು ಪದಾರ್ಥಗಳ ಮಾರಾಟಗಾರರು ಮತ್ತು ಗ್ರಾಹಕರ ಸಭೆ, ಮಾರ್ಚ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ‘ಆಹಾರ ಸುರಕ್ಷತಾ ಜಾಗೃತಿ ಮೇಳ’ ಆಯೋಜಿಸಲಾಗಿದೆ ಎಂದರು.

ಮಂಡಳಿಯ ಪ್ರಧಾನ ವ್ಯವಸ್ಥಾಪಕ ಚಿದಾನಂದಪ್ಪ ಪಿ.ಜಿ., ತೋಟಗಾರಿಕೆ ಉಪನಿರ್ದೇಶಕ ಡಾ.ರಾಮಚಂದ್ರ ಮಡಿವಾಳರ, ಕೆಸಿಸಿಐ ಕೃಷಿ ಮತ್ತು ತೋಟಗಾರಿಕೆ ಘಟಕದ ಅಧ್ಯಕ್ಷ ಬಿ.ಬಿ.ಪಾಟೀಲ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)