ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳನ್ನೂ ಬಿಡದ ಐಎಂಎ ‘ಫ್ರಂಟ್‌ಲೈನ್‌’ ಪಂಗನಾಮ!

ಔಷಧಿ ಅಂಗಡಿಗಳಿಗೆ ಬೀಗ* ವಿತರಕರಿಗೆ ಕೋಟ್ಯಂತರ ಬಾಕಿ
Last Updated 18 ಜೂನ್ 2019, 19:45 IST
ಅಕ್ಷರ ಗಾತ್ರ

ಸಾ ವಿರಾರು ಜನ ಹೂಡಿಕೆದಾರರಿಗೆ ದೊಡ್ಡ ‘ಶಾಕ್‌‘ ನೀಡಿ ಪರಾರಿಯಾದಐಎಂಎ ಜುವೆಲ್ಸ್‌ನ ಮಹಮ್ಮದ್‌ ಮನ್ಸೂರ್‌ ಖಾನ್‌ ನಗರದ ವಿವಿಧೆಡೆ ತೆರೆದಿದ್ದ ‘ಫ್ರಂಟ್‌ಲೈನ್‌ ಫಾರ್ಮಾ’ ಔಷಧ ಅಂಗಡಿಗಳ ಮೂಲಕವೂ ನೂರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದ!

ಐಎಂಎ ಜುವೆಲ್ಸ್‌ನಲ್ಲಿ ಹೂಡಿಕೆ ಮಾಡಿದ್ದ ಭಿಕ್ಷುಕರಿಂದ ಕೋಟ್ಯಧಿಪತಿಗಳವರೆಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದ ಮನ್ಸೂರ್ ಖಾನ್‌ ತನ್ನ ಫ್ರಂಟ್‌ಲೈನ್‌ ಔಷಧ ಅಂಗಡಿಗಳಿಗೆ ಔಷಧಿ ಖರೀದಿಸಲು ಬರುತ್ತಿದ್ದ ರೋಗಿಗಳು ಮತ್ತು ಔಷಧ ಪೂರೈಸುತ್ತಿದ್ದ ವಿತರಕರನ್ನೂ ಸುಲಿಗೆ ಮಾಡಿದ್ದಾನೆ ಎನ್ನುವ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ.

ಮುಸ್ಲಿಮರೇ ಹೆಚ್ಚಾಗಿ ವಾಸವಾಗಿರುವ ನಗರದ 20 ಕಡೆ ‘ಐಎಂಎ ಮಾನಿಟರಿ ಅಡ್ವೈಸರಿ ಕೌನ್ಸಿಲ್‌’ ಸಂಸ್ಥೆಯಿಂದ ‘ಫ್ರಂಟ್‌ಲೈನ್‌ ಫಾರ್ಮಾ’ ಮಳಿಗೆಗಳನ್ನು ತೆರೆದಿದ್ದ. ಲಕ್ಷಾಂತರ ರೂಪಾಯಿ ನೀಡಿ ಹೊಸ ವಾಣಿಜ್ಯ ಮಳಿಗೆ ಮತ್ತು ಭವ್ಯ ಕಟ್ಟಡಗಳನ್ನು ಬಾಡಿಗೆ ಪಡೆದಿದ್ದ.

ಶಿವಾಜಿನಗರ, ಶಾಂತಿನಗರ, ಬಿಟಿಎಂ ಮೊದಲ ಹಂತ, ಕಾವೇರಿ ನಗರ, ಎಚ್‌ಎಸ್‌ಆರ್‌ ಲೇಔಟ್‌, ವಸಂತ ನಗರ, ಮಾರುತಿ ಸೇವಾನಗರ, ಕಾವಲ್‌ ಭೈರಸಂಧ್ರ, ಫ್ರೇಜರ್‌ ಟೌನ್‌, ಕ್ವೀನ್ಸ್‌ ರೋಡ್‌, ಸೆಪ್ಪಿಂಗ್ಸ್‌ ರೋಡ್, ಜಯನಗರ, ನೀಲಸಂದ್ರಗಳಲ್ಲಿ ಕಣ್ಣು ಕುಕ್ಕುವಂತೆ ಭರ್ಜರಿಯಾಗಿ ಫ್ರಂಟ್‌ಲೈನ್‌ ಫಾರ್ಮಾಗಳು ತೆಲೆ ಎತ್ತಿದ್ದವು.

ಔಷಧಿ ಚೀಟಿಗಳಲ್ಲಿರುವ ಔಷಧಗಳನ್ನು ಮಾತ್ರ ನೀಡುವುದು ನಮ್ಮ ಧ್ಯೇಯವಲ್ಲ, ಜನರ ನೆಮ್ಮದಿ ಕೂಡ ನಮಗೆ ಮುಖ್ಯ ಎಂಬ ಧ್ಯೇಯ ವಾಕ್ಯಗಳು ಅಂಗಡಿಗಳ ಮೇಲೆ ರಾಜಾಜಿಸುತ್ತಿದ್ದವು.ಮೊದಲ ದಿನದಿಂದಲೇ ಎಲ್ಲ ಔಷಧ, ವೈದ್ಯಕೀಯ ಉಪಕರಣಗಳ ಮೇಲೆ ಶೇ 20ರಷ್ಟು ರಿಯಾಯ್ತಿ ಕೂಡ ನೀಡಲಾಗುತಿತ್ತು.ಮೂರು ವರ್ಷಗಳ ಹಿಂದೆ ಫ್ರೇಜರ್‌ ಟೌನ್‌ನಲ್ಲಿ ಐಎಂಎ ತನ್ನ ಮೊದಲ ಫಾರ್ಮಸಿ ಆರಂಭಿಸಿತ್ತು. ಉಚಿತವಾಗಿ ಔಷಧಿಗಳನ್ನು ಮನೆಗೆ ತಲುಪಿಸುತ್ತಿತ್ತು.

ರಿಯಾಯ್ತಿಗೆ ಮಾರುಹೋದರು

ಆಕರ್ಷಕ ರಿಯಾಯ್ತಿಗಾಗಿ ಮಾರುಹೋದ ಜನರು ಫ್ರಂಟ್‌ಲೈನ್‌ಫಾರ್ಮಾ ಮಳಿಗೆಗಳಿಗೆ ಮುಗಿಬಿದ್ದರು. ಕೆಲವೊಮ್ಮೆ ಗ್ರಾಹಕರಿಗೆ ಔಷಧ ಪೂರೈಸುವುದು ಸಿಬ್ಬಂದಿಗೆ ಕಷ್ಟವಾಗುತ್ತಿತ್ತು.ಇದರಿಂದ ಕೆಲವೇ ತಿಂಗಳಲ್ಲಿ ಅಕ್ಕಪಕ್ಕದ ಇತರ ಔಷಧ ಅಂಗಡಿಗಳ ವ್ಯಾಪಾರಕ್ಕೆ ಪೆಟ್ಟು ಬೀಳತೊಡಗಿತ್ತು. ಗ್ರಾಹಕರನ್ನು ಸೆಳೆಯಲು ಪೈಪೋಟಿಗೆ ಬಿದ್ದವರಂತೆ ಕೆಲವು ಔಷಧ ಅಂಗಡಿಗಳು ಶೇ 10ರಷ್ಟು ರಿಯಾಯ್ತಿ ಘೋಷಿಸಿದರೂ ಪ್ರಯೋಜನವಾಗಲಿಲ್ಲ. ಫಾರ್ಮಾ ಅಂಗಡಿಗಳಿಗೆ ಗ್ರಾಹಕರು ಮುಗಿಬಿದ್ದು ಔಷಧ ಖರೀದಿಸುತ್ತಿದ್ದರು.

ಮುಸ್ಲಿಮರು ಸೇರಿದಂತೆ ಎಲ್ಲ ಜಾತಿ, ಜನಾಂಗದವರೂ ಫ್ರಂಟ್‌ಲೈನ್‌ ಫಾರ್ಮಾ ಮಳಿಗೆಗಳಿಗೆ ಖಾಯಂ ಗಿರಾಕಿಗಳಾದರು. ಮಧುಮೇಹ, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಕಾಲುನೋವು, ಕ್ಯಾನ್ಸರ್‌ ಹೀಗೆ ಪ್ರತಿತಿಂಗಳು ದುಬಾರಿ ಔಷಧಿ ಖರೀದಿಸುವವರು ಅಂಗಡಿಯವರಿಗೆ ಪರಿಚಿತರಾಗಿದ್ದರು.

ಇದನ್ನೇ ಬಂಡವಾಳ ಮಾಡಿಕೊಂಡ ಫಾರ್ಮಾ ಸಿಬ್ಬಂದಿ, ಪ್ರತಿ ತಿಂಗಳು ಔಷಧಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ನಮ್ಮಲ್ಲಿ ಹಣ ಹೂಡಿ. ಅದಕ್ಕೆ ಪ್ರತಿಯಾಗಿ ನಾವು ನೀಡುವ ದುಡ್ಡಿನಲ್ಲಿ ಔಷಧ ಖರ್ಚು ನೀಗುತ್ತದೆ ಎಂದು ಕಾಯಂ ಗ್ರಾಹಕರಿಗೆ ಬಲೆ ಬೀಸಿದ್ದರು.

ಇದೇ ರೀತಿ 15 ಫ್ರಂಟ್‌ಲೈನ್‌ ಫಾರ್ಮಾ ಮಳಿಗೆಗಳ ಸಾವಿರಾರು ಕಾಯಂ ಗಿರಾಕಿಗಳು ಕೂಡ ಲಕ್ಷಾಂತರ ರೂಪಾಯಿ ಹಣ ಹೂಡಿದ್ದರು. ಕೇವಲ ಗ್ರಾಹಕರಿಗೆ ಮಾತ್ರವಲ್ಲ ಔಷಧ ಪೂರೈಸುವ ಸಂಸ್ಥೆಗಳಿಂದಲೂ ಕೋಟ್ಯಂತರ ರೂಪಾಯಿ ಹಣ ಹೂಡಿಸುವಲ್ಲಿ ಮನ್ಸೂರ್‌ ಖಾನ್‌ ಯಶಸ್ವಿಯಾಗಿದ್ದ ಎಂಬ ಮಾಹಿತಿ ಇದೆ.

ಕೋಟ್ಯಂತರ ರೂಪಾಯಿ ಬಾಕಿ

ಫ್ರಂಟ್‌ಲೈನ್‌ ಫಾರ್ಮಾ ಮಳಿಗೆಗಳಿಗೆ ಔಷಧ ಪೂರೈಸಿದ್ದ ಡಿಸ್ಟ್ರಿಬ್ಯೂಟರ್‌ಗಳಿಗೆ ಕೆಲವು ತಿಂಗಳಿಂದ ಹಣ ನೀಡಿರಲಿಲ್ಲ. ಔಷಧ ಪೂರೈಸಿದ ಕಂಪನಿಗಳಿಗೆ ₹10 ಕೋಟಿಗೂ ಹೆಚ್ಚು ಬಾಕಿ ಹಣ ನೀಡಬೇಕಿದೆ. ಮನ್ಸೂರ್‌ ಖಾನ್‌ ಪರಾರಿಯಾದ ಸುದ್ದಿ ತಿಳಿದ ಔಷಧ ಪೂರೈಸಿದ ಕಂಪನಿ ಫ್ರಂಟ್‌ಲೈನ್‌ ಔಷಧ ದಾಸ್ತಾನು ಉಗ್ರಾಣಕ್ಕೆ ತೆರಳಿ ₹1 ಕೋಟಿ ರೂಪಾಯಿ ಮೊತ್ತದ ಔಷಧ ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಹೊಸದಾಗಿ ಮಾರುಕಟ್ಟೆಗೆ ಬಂದ ಕೆಲವು ಔಷಧ ಅಂಗಡಿಗಳು ಶೇ 10ರಷ್ಟು ರಿಯಾಯ್ತಿ ನೀಡುತ್ತಿವೆ. ಪೈಪೋಟಿ ಎದುರಿಸಲು ನಾವು ಶೇ 5ರಿಂದ ಶೇ10ರಷ್ಟು ರಿಯಾಯ್ತಿ ನೀಡಲು ಆರಂಭಿಸಿದ್ದೆವು.ತಲೆ ತಲಾಂತರಗಳಿಂದ ಈ ವಹಿವಾಟು ನಡೆಸುತ್ತಿರುವ ನಮಗೆ ಇದು ಕಷ್ಟವಾಗುತ್ತಿತ್ತು. ಆದರೆ, ಹೊಸದಾಗಿ ಈ ವಹಿವಾಟು ಆರಂಭಿಸಿದ ಸಂಸ್ಥೆ ಶೇ 20ರಷ್ಟು ರಿಯಾಯ್ತಿ ನೀಡುತ್ತದೆ ಎಂದಾಗ ಆಶ್ಚರ್ಯವಾಗಿತ್ತು.ಅವಧಿ ಮುಗಿದಹಳೆಯ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಮಗೆಲ್ಲಾ ಗುಮಾನಿ ಇತ್ತು ಎನ್ನುತ್ತಾರೆ ಹೆಸರು ಹೇಳಲು ಬಯಸದ ಔಷಧ ಅಂಗಡಿ ಮಾಲೀಕರೊಬ್ಬರು.

ಅಗ್ಗದಲ್ಲಿ ಸಿಗುತ್ತದೆ ಎಂದು ಮಲ್ಲೇಶ್ವರದ ಫ್ರಂಟ್‌ಲೈನ್‌ ಮಳಿಗೆಯಿಂದ ಮಧುಮೇಹ, ರಕ್ತದೊತ್ತಡ ಮತ್ತು ಥೈರಾಯ್ಡ್‌ ರೋಗಕ್ಕೆ ಪ್ರತಿ ತಿಂಗಳೂ ಔಷಧಿ ಖರೀದಿಸುತ್ತಿದ್ದೆ. ಪ್ರತಿ ತಿಂಗಳು ಔಷಧಿಗೆ ಸಾವಿರಾರು ರೂಪಾಯಿ ಖರ್ಚಾಗುತ್ತಿತ್ತು. ಅಂಗಡಿ ಸಿಬ್ಬಂದಿ ಹೇಳಿದ್ದರಿಂದ ಡಿಸೆಂಬರ್‌ನಲ್ಲಿ ಮೂರು ಲಕ್ಷ ರೂಪಾಯಿ ಹೂಡಿದ್ದೆ. ಅಂಗಡಿಯವರು ನೀಡುತ್ತಿದ್ದ ಬಡ್ಡಿ ಹಣ ಔಷಧದ ಖರ್ಚಿಗೆ ಸಾಕಾಗುತ್ತಿತ್ತು. ಈಗ ನೋಡಿದರೆ ಯಾರೂ ಕೈಗೆ ಸಿಗುತ್ತಿಲ್ಲ. ಮೊಬೈಲ್‌ ಬಂದ್‌ ಆಗಿವೆ. ಯಾರನ್ನು ಕೇಳುವುದು ಎಂದು ಗ್ರಾಹಕರೊಬ್ಬರು ಗೋಳು ತೋಡಿಕೊಂಡರು.ಹಣ ಹೂಡಿದ್ದಕ್ಕೆ ನನ್ನ ಬಳಿ ದಾಖಲೆಗಳೂ ಇಲ್ಲ. ಹೀಗಾಗಿ ಹಣ ಮರಳಿ ದೊರೆಯುತ್ತದೆ ಎಂಬ ಬಗ್ಗೆ ಭರವಸೆಯೂ ಉಳಿದಿಲ್ಲ ಎಂದರು.

ನಗರದ ಎಲ್ಲ ಫ್ರಂಟ್‌ಲೈನ್‌ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ. ಗ್ರಾಹಕರಿಂದ ಹಣ ಸಂಗ್ರಹಿಸಿದ ಔಷಧ ಮಳಿಗೆ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಯಾರೂ ಕೈಗೆ ಸಿಗದ ಕಾರಣ ಫ್ರಂಟ್‌ಲೈನ್‌ ಫಾರ್ಮಾಗಳಿಗೆ ಮಳಿಗೆಗಳನ್ನು ಬಾಡಿಗೆ ನೀಡಿದ ಮಾಲೀಕರು ಪರಿತಪಿಸುತ್ತಿದ್ದಾರೆ. ಒಳಗೆ ಔಷಧ ಇದೆಯೋ ಅಥವಾ ಇಲ್ಲವೋ ಎನ್ನುವುದೂ ಕಟ್ಟಡಗಳ ಮಾಲೀಕರಿಗೆ ಗೊತ್ತಿಲ್ಲ.ಗ್ರಾಹಕರು ಹಳೆಯ ಗಂಡನ ಪಾದವೇ ಗತಿ ಎಂಬಂತೆ ಶೇ10ರಷ್ಟು ರಿಯಾಯ್ತಿ ನೀಡುತ್ತಿರುವ ಮೊದಲಿನ ಔಷಧ ಅಂಗಡಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.

ಉತ್ತರ ಸಿಗದ ಪ್ರಶ್ನೆಗಳು

ಐಎಂಎ ಜುವೆಲ್ಸ್‌ ಮಳಿಗೆಗಳಲ್ಲಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣ, ವಜ್ರಾಭರಣಗಳನ್ನು ಮನ್ಸೂರ್‌ ಖಾನ್‌, ಪೊಲೀಸರು ಮತ್ತು ಕಸ್ಟಮ್ಸ್‌ ಅಧಿಕಾರಿಗಳ ಕಣ್ಣು ತಪ್ಪಿಸಿ ಹೇಗೆ ದೇಶದಿಂದ ಪರಾರಿಯಾದ ಎನ್ನುವುದು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಇನ್ನೂ ಸಮರ್ಪಕ ಉತ್ತರ ಸಿಗುತ್ತಿಲ್ಲ.

ಹೂಡಿಕೆದಾರರ ಕೋಟ್ಯಂತರ ರೂಪಾಯಿ ಹಣವನ್ನು ಹವಾಲಾ ಮೂಲಕ ವಿದೇಶಗಳಲ್ಲಿ ತೊಡಗಿಸಿರಬಹುದು. ಆದರೆ, ಆಭರಣಗಳು ಏನಾದವು ಎನ್ನುವುದು ಇನ್ನೂ ನಿಗೂಢ. ಆಭರಣಗಳನ್ನು ಮನ್ಸೂರ್‌ ಖಾನ್‌ ತನ್ನೊಂದಿಗೆ ಕೊಂಡೊಯ್ದನೇ ಅಥವಾ ಇಲ್ಲಿಯೇ ಬಿಟ್ಟು ಹೋಗಿದ್ದಾನೆಯೇ ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿ ಇಲ್ಲ.

ಅನೇಕ ಜನರು ಕೋಟ್ಯಂತರ ರೂಪಾಯಿ ಕಪ್ಪುಹಣ ಹೂಡಿಕೆ ಮಾಡಿರುವ ಗುಮಾನಿ ಪೊಲೀಸರನ್ನು ಕಾಡುತ್ತಿದೆ. ದೂರು ನೀಡಿರುವುದು ಮೂರು ಅಥವಾ ನಾಲ್ಕು ಲಕ್ಷ ಕಳೆದುಕೊಂಡವರು ಮಾತ್ರ. ಕಪ್ಪುಹಣ ಹೂಡಿಕೆ ಮಾಡಿದವರು ದೂರು ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಊಹೆಗಿಂತ ಹೆಚ್ಚು ಹಣವನ್ನು ಮನ್ಸೂರ್ ಖಾನ್‌ ಲಪಟಾಯಿಸಿರುವ ಶಂಕೆ ಇದೆ ಎನ್ನುತ್ತಾರೆ ತನಿಖೆ ನಡೆಸುತ್ತಿರುವ ಪೊಲೀಸರು.

ಸಿಬ್ಬಂದಿ ಭವಿಷ್ಯ ಅತಂತ್ರ

ಫ್ರಂಟ್‌ಲೈನ್ ಫಾರ್ಮಾಗಳಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ಭವಿಷ್ಯ ಅತಂತ್ರವಾಗಿದೆ.

ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ತಿಂಗಳಿಗೆ ₹18 ಸಾವಿರದಿಂದ ₹20 ಸಾವಿರ ಸಂಬಳ ನೀಡಲಾಗುತ್ತಿತ್ತು. ಅವರಲ್ಲಿ ಬಹುತೇಕರು ಈಗ ಬೀದಿಗೆ ಬಿದ್ದಿದ್ದಾರೆ.

ಫಾರ್ಮಸಿ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಮತ್ತು ತಂತ್ರಜ್ಞರಿಗೆ ಅನೇಕ ತಿಂಗಳಿಂದ ಸಂಬಳ ನೀಡಿಲ್ಲ. ₹20 ಲಕ್ಷ ವೇತನ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ಶಿವಾಜಿ ನಗರ ಫ್ರಂಟ್‌ಲೈನ್‌ ಆಸ್ಪತ್ರೆಯಲ್ಲಿ ಫಾರ್ಮಸಿಯಲ್ಲಿರುವ ಔಷಧಿಗಳ ಬಾಕ್ಸ್‌ಗಳನ್ನು ಹಣವಿಲ್ಲದ ಕಾರಣ ವಿತರಕರಿಗೆ ವಾಪಸ್‌ ಕಳಿಸಲಾಗಿದೆ. ನೂರಕ್ಕೂ ಹೆಚ್ಚು ಔಷಧಿ ವಿತರಕರಿಗೆ ಸಂಸ್ಥೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ಫಾರ್ಮಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಆರಂಭಿಸಿರುವ ತನಿಖಾಧಿಕಾರಿಗಳು ಈಗಾಗಲೇ ಔಷಧ ಅಂಗಡಿಗಳ ಪರವಾನಗಿ ಮತ್ತು ಸಿಬ್ಬಂದಿಯ ಪ್ರಮಾಣಪತ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮುಂದೆ ಫಾರ್ಮಾ ಆರಂಭವಾಗುವ ಬಗ್ಗೆ ಸಿಬ್ಬಂದಿಯಲ್ಲಿ ಭರವಸೆ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT