ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಖರೀದಿ ವಿಳಂಬ: ರೈತ ಆತ್ಮಹತ್ಯೆ

ಸಕ್ಕರೆ ಕಾರ್ಖಾನೆ ಆವರಣದಲ್ಲೇ ವಿಷ ಸೇವಿಸಿದ ಬೆಳೆಗಾರ ಸಣ್ಣಹನುಮಪ್ಪ
Last Updated 15 ಡಿಸೆಂಬರ್ 2018, 16:28 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ)/ಕೊಪ್ಪಳ: ಕಬ್ಬು ಬೆಳೆಗಾರರೊಬ್ಬರು, ತಾಲ್ಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕ್ರಿಮಿನಾಶಕ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ತಿಗರಿ ಗ್ರಾಮದ ಸಣ್ಣಹನುಮಪ್ಪ ಸಿಮಣ್ಣ ಕುರಿ(58) ಮೃತಪಟ್ಟ ರೈತ. ಅವರು ತಮ್ಮ 4 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಲು ಗುತ್ತಿಗೆದಾರ ವಿಳಂಬ ಮಾಡಿದ್ದರಿಂದ ಬೇಸತ್ತು, ನಾಲ್ಕು ದಿನಗಳ ಹಿಂದೆ ತಾವೇ ಸ್ವಂತ ವೆಚ್ಚದಲ್ಲಿ ಕಟಾವು ಮಾಡಿಸಿದ್ದರು. ಶನಿವಾರ ಬೆಳಿಗ್ಗೆ ಕಾರ್ಖಾನೆಗೆ ಬಂದಿದ್ದ ಅವರು, ‘ಕಬ್ಬು ಕಟಾವು ಮಾಡಿಸಿ ನಾಲ್ಕು ದಿನಗಳು ಕಳೆದಿವೆ. ಕಬ್ಬು ಒಣಗುತ್ತಿದ್ದು, ಇದರಿಂದ ತಮಗೆ ಹಾನಿ ಆಗುತ್ತದೆ. ಶೀಘ್ರ ವಿಲೇವಾರಿ ಮಾಡಬೇಕು, ಕಬ್ಬು ತುಂಬಿಕೊಂಡು ಹೋಗಲು ಟ್ರಾಕ್ಟರ್ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದರು. ಆದರೆ, ಅವರ ಮನವಿಗೆ ಗುತ್ತಿಗೆದಾರ ಸ್ಪಂದಿಸಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಸಣ್ಣಹನುಮಪ್ಪ ಅವರನ್ನು ಕೂಡಲೇ ಕಾರ್ಖಾನೆಯ ಆಂಬುಲೆನ್ಸ್‌ನಲ್ಲಿಯೇ ಮುಂಡರಗಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಅವರಿಗೆ ಪತ್ನಿ ಮತ್ತು ಅಂಗವಿಕಲ ಪುತ್ರ ಇದ್ದಾರೆ. ಕೊಪ್ಪಳ ತಾಲ್ಲೂಕಿನ ಬೆಟಗೇರಿಯ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ₹2.5ಲಕ್ಷ ಸಾಲ ಸೇರಿದಂತೆ, ಖಾಸಗಿ ಹಣಕಾಸು ಸಂಸ್ಥೆಗಳಿಂದಲೂ ಅವರು ಸಾಲ ಪಡೆದಿದ್ದರು ಎನ್ನಲಾಗಿದೆ.

ಕಾರ್ಖಾನೆಯಿಂದ ಬಾಕಿ ಇರಲಿಲ್ಲ: ‘ರೈತನಿಗೆ, ಸಕ್ಕರೆ ಕಾರ್ಖಾನೆಯವರು ಯಾವುದೇ ವೇತನ ಪಾವತಿ ಬಾಕಿ ಉಳಿಸಿಕೊಂಡಿರಲಿಲ್ಲ. ₹ 40 ಸಾವಿರ ಮುಂಗಡವಾಗಿ ಪಾವತಿಸಿದ್ದರು. ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷಬಾಬು ಕೆ. ತಿಳಿಸಿದ್ದಾರೆ.

‘ಮೃತ ರೈತನ ಜಮೀನಿನಿಂದ ಕಬ್ಬು ಕಟಾವು ಮಾಡಿ, ಕಾರ್ಖಾನೆಗೆ ಸಾಗಿಸಲು ಗುತ್ತಿಗೆ ಪಡೆದಿದ್ದ ವ್ಯಕ್ತಿಯು, ಕಾರ್ಮಿಕರ ಕೊರತೆಯಿಂದ ಕಟಾವು ಕಾರ್ಯ ವಿಳಂಬ ಆಗಿತ್ತು ಎಂದು ತಿಳಿಸಿದ್ದಾನೆ. ಈ ಗುತ್ತಿಗೆದಾರನನ್ನು ಭೇಟಿಯಾಗಲು ಸಣ್ಣಹನುಮಪ್ಪ ಶನಿವಾರ ಕಾರ್ಖಾನೆಗೆ ಬಂದಿದ್ದ’ ಎಂದು ಅವರು ಹೇಳಿದ್ದಾರೆ.

ಮೃತ ರೈತನ ಮಗ ವೀರೇಶ ಕುರಿ ಅವರು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘ಸಾಲಬಾಧೆ ರೈತ ಆತ್ಮಹತ್ಯೆ’ ಎಂದು ಪ್ರಕರಣ ದಾಖಲಾಗಿದೆ.

ಕೊಪ್ಪಳ ವರದಿ: ‘ರೈತನ ಸಾವಿಗೆ ಕಾರ್ಖಾನೆ ಆಡಳಿತ ಮಂಡಳಿಯ ಬೇಜವಾಬ್ದಾರಿಯೇ ಕಾರಣವಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು‘ ಎಂದು ಜಿಲ್ಲೆಯ ರೈತ ಮುಖಂಡ ಹನಮಂತಪ್ಪ ಹೊಳೆಯಾಚೆ ಆಗ್ರಹಿಸಿದ್ದಾರೆ.

ಬಾಕಿ ಹಣ ಪಾವತಿಗೆ ಡಿ.17ರ ಗಡುವು

ಬೆಳಗಾವಿ: ‘ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣವನ್ನು ಇದೇ 17ರೊಳಗೆ ಪಾವತಿಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು' ಎಂದು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರ ಜೊತೆ ಸಭೆ ನಡೆಸಿದ ಅವರು, ‘ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಬಾಕಿ ಹಣವನ್ನು ನೀಡಿ ನನಗೆ ವರದಿ ನೀಡಬೇಕು. ಇಲ್ಲದಿದ್ದರೆ ಮಂಗಳವಾರ ನೋಟಿಸ್‌ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT