ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೈ ಶ್ರೀರಾಮ್‌ ಹಿಂಸೆ, ಹೇ ರಾಮ್‌ ಅಹಿಂಸೆ’-ಸಾಹಿತಿ ದೇವನೂರ ಮಹಾದೇವ ಅಭಿಮತ

Last Updated 29 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಜೈ ಶ್ರೀರಾಮ್‌ ಎಂಬ ಹಿಂಸೆಯು, ಹೇ ರಾಮ್‌ ಎಂಬ ಅಹಿಂಸೆ ಯನ್ನು ಭಾರತದಿಂದ ಹೊರಹಾಕಲು ಇಂದು ಟೊಂಕ ಕಟ್ಟಿ ನಿಂತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಡಿ.ಎಸ್.ನಾಗಭೂಷಣ್‌ ಅವರ ‘ಗಾಂಧಿ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗಾಂಧಿಯನ್ನು ಕೊಂದ ಗೋಡ್ಸೆ ಪ್ರೇತ ವಿದೇಶಕ್ಕೆ ಭೇಟಿ ನೀಡಿದರೆ, ತಾನು, ಬುದ್ಧನ ನಾಡಿನಿಂದಲೋ, ಗಾಂಧಿ ಅಥವಾ ಅಂಬೇಡ್ಕರ್‌ ನಾಡಿನಿಂದಲೋ ಬಂದೆ ಎನ್ನಬೇಕು. ಹೀಗೆ ಹೇಳಿಕೊಳ್ಳದೆ ಅದಕ್ಕೆ ಬೇರೆ ದಾರಿಯೇ ಇಲ್ಲ’ ಎಂದರು.

‘ವರ್ತಮಾನದಲ್ಲಿ ಗೋಡ್ಸೆ ವಿಚಾರಧಾರೆಯ ಸಂತಾನಗಳು ವಿದೇಶಕ್ಕೆ ಹೋದರೂ ಇದೇ ಮಾತು ಹೇಳಬೇಕು. ಇತ್ತೀಚೆಗೆ ತಾನೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ತಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ, ಯುದ್ಧವನ್ನಲ್ಲ ಎಂದು ಹೇಳಿದ್ದಾರೆ’ ಎಂದು ನೆನಪು ಮಾಡಿಕೊಂಡರು.

‘ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರನ್ನು ಬ್ರಿಟಿಷ್‌ ಅಧಿಕಾರಿಯೊಬ್ಬ ಹೊರದಬ್ಬಿದ. ಹೀಗೆ, ಹೊರದಬ್ಬಿಸಿಕೊಂಡ ವ್ಯಕ್ತಿಯೇ, ಮುಂದೆ ಭಾರತದಿಂದ ಬ್ರಿಟಿಷರನ್ನು ಹೊರದಬ್ಬುತ್ತಾನೆ ಎಂಬುದು ಅವನಿಗೆ ಗೊತ್ತಾಗಿದ್ದರೆ ಹಾಗೆ ಮಾಡುತ್ತಿರಲಿಲ್ಲವೇನೋ ಎಂಬ ಲೂಯಿ ಫಿಷರ್‌ನ ಮಾತನ್ನು ವಾರಾಣಸಿಯ 16 ವರ್ಷದ ಬಾಲಕ ಆಯುಷ್‌ ಉಲ್ಲೇಖಿಸುತ್ತಾನೆ. ಗೋಡ್ಸೆಯ ಕಾಲ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾನು ಗಾಂಧಿ ಪರ ನಿಲ್ಲುತ್ತೇನೆ ಎಂಬ ಕವಿವಾಣಿಯನ್ನು ಆತ ಉಲ್ಲೇಖಿಸುತ್ತಾನೆ. ಗೋಡ್ಸೆಗೆ ದೇವಸ್ಥಾನ ಕಟ್ಟಿ ಗಾಂಧಿಯನ್ನು ಹೊರದಬ್ಬುತ್ತಿರುವ ವಿಚಾರಧಾರೆಯನ್ನು ಇಂದು ಹೊರದಬ್ಬಬೇಕಾಗಿದೆ. ಹೊರದಬ್ಬುತ್ತಿರುವವರನ್ನೂ ಮನುಷ್ಯರನ್ನಾಗಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಬಿಡಿಸಬೇಕಿದೆ ಕಗ್ಗಂಟು:‘ಕಟ್ಟ ಕಡೆಯವನ ಕಡೆಗೆ ನಡೆಯುತ್ತಿರುವ ಗಾಂಧಿ ಹಾಗೂ ಕಟ್ಟ ಕಡೆಯವನ ಪ್ರತಿನಿಧಿಯಾದ ಅಂಬೇಡ್ಕರ್‌ ನಡುವಿನ ಕಗ್ಗಂಟನ್ನು ಬಿಡಿಸಿಕೊಳ್ಳುವ ಅಗತ್ಯವಿದೆ. ಇದನ್ನು ಭಾರತ ಬಿಡಿಸಿಕೊಳ್ಳದಿದ್ದರೆ ಅದು ಒಂಟಿ ಕಾಲಿನ ಕುಂಟು ನಡಿಗೆಯಾಗುತ್ತದೆ’ ಎಂದು ಮಹಾದೇವ ಹೇಳಿದರು.

‘ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯೆಂಬ ಬೆಟ್ಟದ ಮೇಲಿನ ಗುಡಿಯ ಕಡೆಗೆ ಉತ್ತರದ ಕಡೆಯಿಂದ ಗಾಂಧೀಜಿ, ದಕ್ಷಿಣದ ಕಡೆಯಿಂದ ಅಂಬೇಡ್ಕರ್‌ ಹೆಜ್ಜೆ ಇಟ್ಟಿದ್ದಾರೆ. ಆದರೆ, ನಾವುಅವರು ಇಡುವ ಹೆಜ್ಜೆಗಳನ್ನು ಕಟ್ಟು ಗಾಜು ಹಾಕಿಸಿ ಗೋಡೆಗೆ ನೇತಾಕುತ್ತಿದ್ದೇವೆ. ಚಲನೆಯನ್ನು ಗಮನಿಸುತ್ತಿಲ್ಲ. ನಡಿಗೆಯ ದಿಕ್ಕನ್ನು ಗಮನಿಸುತ್ತಿಲ್ಲ’ ಎಂದರು.

‘ಜಾತಿವರ್ಣಗಳನ್ನು ಎತ್ತಿ ಹಿಡಿಯುತ್ತಿದ್ದ ಗಾಂಧಿ ಕೊನೆಗೆ ತಾನು ಸವರ್ಣಿಯ ಮತ್ತು ಅಸ್ಪೃಶ್ಯರ ನಡುವಿನ ಮದುವೆಗೆ ಮಾತ್ರ ಭಾಗವಹಿಸುವೆ ಎಂದಿದ್ದರು.ಗಾಂಧಿ ಒಂದೇ ಜನ್ಮದಲ್ಲಿ ಹತ್ತಾರು ಜನ್ಮಗಳಷ್ಟು ದೂರ ಕ್ರಮಿಸುತ್ತಾರೆ. ಇದಕ್ಕೆ ಅಂಬೇಡ್ಕರ್ ಎದುರಿಗಿಡುತ್ತಿದ್ದ ಅಗ್ನಿಪರೀಕ್ಷೆಗಳೂ ಕಾರಣವಾಗಿರಬಹುದಲ್ಲವೆ’ ಎಂದು ಪ್ರಶ್ನಿಸಿದರು.

‘ಪಿರಮಿಡ್ಡಿನ ತುದಿಗೆ ಸಂಪತ್ತನ್ನು ಸುರಿಯುವ ಆರ್ಥಿಕತೆ ಇಂದಿನದ್ದಾಗಿದೆ. ಸಂಪತ್ತು ಬುಡ ತಲುಪದೆ ಆರ್ಥಿಕತೆಯೇ ಕುಸಿದು ಬೀಳುತ್ತಿದೆ. ಕೈಗೆ ಕೆಲಸ, ಸ್ವಾವಲಂಬನೆ, ವಿಕೇಂದ್ರೀಕರಣ ಇತ್ಯಾದಿಗಳ ಗಾಂಧಿ ಅನಿವಾರ್ಯವಾಗುತ್ತಿದ್ದಾನೆ. ಇಂದು ಗಾಂಧಿ ಆರ್ಥಿಕತೆಯ ಬಿತ್ತನೆ ಬೀಜಗಳನ್ನು ಹುರಿದು ಕೆಡದಂತೆ ಇಟ್ಟುಕೊಂಡಿದ್ದಾರೆಯೇ ಹೊರತು ಅವುಗಳನ್ನು ಬಿತ್ತಿ ಬೆಳೆದಿಲ್ಲ’ ಎಂದರು.

‘ಉದ್ಯೋಗ ನೀಡಿದವರು ಗೆದ್ದಂತೆ’

‘ಭಾರತದಲ್ಲಿ ಉದ್ಯೋಗವು ಕುಸಿಯುತ್ತಿದೆ. ಪಾಕಿಸ್ತಾನದಲ್ಲಿ ಇನ್ನೂ ಹೆಚ್ಚು ಕುಸಿಯುತ್ತಿರಬಹುದು. ಮೋದಿ ಮತ್ತು ಖಾನ್ ಅವರು ಪರಸ್ಪರ ಸ್ಪರ್ಧೆ ಮಾಡಿ, ಯಾರು ತನ್ನ ದೇಶವಾಸಿಗಳಿಗೆಲ್ಲಾ ಮೊದಲು ಗೌರವಯುತ ಉದ್ಯೋಗ ನೀಡುತ್ತಾರೊ ಅವರು ಗೆದ್ದಂತೆ. ಇಲ್ಲದಿದ್ದರೆ ಇಬ್ಬರದೂ ದಯನೀಯ ಸೋಲು. ಮೋದಿ ಮತ್ತು ಖಾನ್ ಅವರವರ ಫ್ಯಾನ್ಸಿ ಡ್ರೆಸ್‍ ಕಳಚಿ ಸ್ಪರ್ಧೆಗೆ ಇಳಿಯಬೇಕು. ಇದು ಗಾಂಧಿಯ ಸವಾಲು’ ಎಂದು ದೇವನೂರ ಮಹಾದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT