ಬಂಗೇರನಿಗೆ ಶಸ್ತ್ರವಿದ್ಯೆ ಕಲಿಸಿದ್ದು ‘ಸೇನಾಧಿಪತಿ’!

7
ಗೌರಿ ಹತ್ಯೆ : ಮಹಾರಾಷ್ಟ್ರದ ‘ಧರ್ಮ ಶಸ್ತ್ರ ಸೇನಾ’ ಶಿಬಿರದಲ್ಲಿ 3 ವರ್ಷ ತರಬೇತಿ

ಬಂಗೇರನಿಗೆ ಶಸ್ತ್ರವಿದ್ಯೆ ಕಲಿಸಿದ್ದು ‘ಸೇನಾಧಿಪತಿ’!

Published:
Updated:

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಮಡಿಕೇರಿಯ ರಾಜೇಶ್ ಬಂಗೇರ, 2001ರಿಂದ 2003ರವರೆಗೆ ಮಹಾರಾಷ್ಟ್ರದಲ್ಲಿ ನಡೆದ ‘ಧರ್ಮ ಶಸ್ತ್ರ ಸೇನಾ’ ಶಿಬಿರದಲ್ಲಿ ಪಾಲ್ಗೊಂಡು ಶಸ್ತ್ರಾಸ್ತ್ರ ಬಳಕೆ ವಿದ್ಯೆ ಕಲಿತಿದ್ದ.

ಗೌರಿ ಲಂಕೇಶ್, ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹಂತಕರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಿದ ಆರೋಪ ಬಂಗೇರನ ಮೇಲಿದೆ. ಅಮೋಲ್ ಕಾಳೆಯ ಸೂಚನೆ ಮೇರೆಗೆ 2012ರಿಂದ ಈವರೆಗೆ 60ಕ್ಕೂ ಹೆಚ್ಚು ಮಂದಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದಾಗಿ ಆತ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾನೆ. 

‘1997ರಲ್ಲೇ ನಾನು ಮಹಾರಾಷ್ಟ್ರದ ಸಂಘಟನೆಯೊಂದನ್ನು ಸೇರಿದೆ. ಆರಂಭದಲ್ಲಿ ಸಭೆ–ಸಮಾರಂಭಗಳನ್ನು ಆಯೋಜಿಸುವುದಷ್ಟೇ ನನ್ನ ಕೆಲಸವಾಗಿತ್ತು. ಆದರೆ, 2001ರಲ್ಲಿ ತರಬೇತಿ ಶಿಬಿರ ಆಯೋಜಿಸಿದ ಸಂಘಟನೆ ಮುಖಂಡರು, ‘ಎಲ್ಲ ಸದಸ್ಯರು ಕಡ್ಡಾಯವಾಗಿ ಶಸ್ತ್ರಾಸ್ತ್ರ ಬಳಕೆ ಕಲಿಯಬೇಕು’ ಎಂದು ಸೂಚಿಸಿದರು. ಅಂತೆಯೇ ನಿವೃತ್ತ ಸೈನಿಕರೊಬ್ಬರು 60 ಸದಸ್ಯರಿಗೆ ಮೂರು ವರ್ಷ ತರಬೇತಿ ನೀಡಿದ್ದರು. ಆ ತರಬೇತುದಾರನನ್ನು ‘ಸೇನಾಧಿಪತಿ’ ಎಂದು ಕರೆಯುತ್ತಿದ್ದೆವು. ಇತ್ತೀಚೆಗೆ ಅವರು ಹೃದಯಾಘಾತದಿಂದ ಮೃತಪಟ್ಟರು.’

‘2009ರಲ್ಲಿ ಮಹಾರಾಷ್ಟ್ರದ ಸಂಘಟನೆ ತೊರೆದ ನಾನು, ಅಲ್ಲಿನ ಆದರ್ಶಗಳನ್ನೇ ಪಾಲಿಸುತ್ತಿದ್ದ ರಾಜ್ಯದ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡೆ. ಆದರೆ, ಅಲ್ಲಿನ ನಂಟು ಹೋಗಲಿಲ್ಲ. 2011ರಲ್ಲಿ ನನ್ನ ಸಂಪರ್ಕಕ್ಕೆ ಬಂದ ಕಾಳೆ ಹಾಗೂ ಅಮಿತ್ ದೆಗ್ವೇಕರ್, ತಾವು ಸೂಚಿಸಿದ ಹುಡುಗರಿಗೆ ಶಸ್ತ್ರಾಸ್ತ್ರ ಬಳಸುವುದನ್ನು ಹೇಳಿಕೊಡುವಂತೆ ಕೋರಿಕೊಂಡರು. ಧರ್ಮ ರಕ್ಷಣೆ ವಿಚಾರ ಬಂದಿದ್ದರಿಂದ ಅದಕ್ಕೆ ಒಪ್ಪಿಕೊಂಡಿದ್ದೆ’ ಎಂದು ಬಂಗೇರ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಒಂದೇ ಪಿಸ್ತೂಲ್ ಏಕೆ: ‘ಹಿಂದೂ ವಿರೋಧಿ ಹೇಳಿಕೆ ನೀಡುವವರನ್ನು ಒಂದೇ ಗ್ಯಾಂಗ್‌ನವರು ಕೊಲ್ಲುತ್ತಿದ್ದಾರೆ ಎಂಬುದು ಸಮಾಜಕ್ಕೆ ಗೊತ್ತಾಗಬೇಕು. ಹಾಗೆಯೇ, ಅಂಥ ಮನಸ್ಥಿತಿವುಳ್ಳ ವಿಚಾರವಾದಿಗಳಿಗೂ ನಮ್ಮ ಬಗ್ಗೆ ಭಯವಿರಬೇಕು ಎಂಬ ಕಾರಣಕ್ಕೆ ಗೌರಿ ಹಾಗೂ ಕಲಬುರ್ಗಿ ಹತ್ಯೆಗಳಲ್ಲಿ ಒಂದೇ ಪಿಸ್ತೂಲ್ ಬಳಸಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದರು.

‘ಪಿಸ್ತೂಲ್ ವಿಷ್ಣುವಿನ ಕೈಲಿರುವ ಸುದರ್ಶನ ಚಕ್ರಕ್ಕೆ ಸಮ. ಅದು ಎಲ್ಲೇ ಹೋದರೂ, ಯಶಸ್ವಿಯಾಗಿ ಕೆಲಸ ಮುಗಿಸಿ ಚಕ್ರದ ಹಾಗೆಯೇ ವಾಪಸ್ ನಮ್ಮ ಬಳಿ ಬರುತ್ತದೆ ಎಂಬ ನಂಬಿಕೆಯೂ ಇತ್ತು’ ಎಂದೂ ಹೇಳಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. 

ಕೋಮುಗಲಭೆಗಳ ಅಧ್ಯಯನ: ‘ರಾಜ್ಯದ ಚಿಂತಕರ ಹತ್ಯೆಗೆ ಸಂಚು ರೂಪಿಸಿದ ಕಾಳೆ, ಹಿಂದೂ ಧರ್ಮದ ಬಗ್ಗೆ ಅಪಾರ ಕಾಳಜಿವುಳ್ಳ ಯುವಕರ ಹುಡುಕಾಟ ಪ್ರಾರಂಭಿಸಿದ್ದ. ರಾಜ್ಯದಲ್ಲಿ ನಡೆದಿರುವ ಕೋಮುಗಲಭೆ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದ್ದ ಆತನಿಗೆ, ಹುಬ್ಬಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ (ಶಿವಾಜಿ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಿ ಕೋಮುಗಲಭೆ ಸೃಷ್ಟಿಸಿದ್ದವರು) ಕಣ್ಣಿಗೆ ಬಿದ್ದಿದ್ದರು. ಕಲಬುರ್ಗಿ ಅವರನ್ನು ಕೊಲ್ಲಲು ಮಿಸ್ಕಿಯನ್ನು ಬಳಸಿಕೊಂಡರೆ, ಗೌರಿ ಹತ್ಯೆಗೆ ಪರಶುರಾಮ ವಾಘ್ಮೋರೆಯನ್ನು (ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪ ಎದುರಿಸುತ್ತಿದ್ದ) ಆಯ್ಕೆ ಮಾಡಿಕೊಂಡಿದ್ದ’ ಎಂದು ಅಧಿಕಾರಿಗಳು ವಿವರಿಸಿದರು.

ಲಂಕೇಶ್ ಪತ್ರಿಕೆಯಲ್ಲಿದ್ದ ಆ ವಿಮರ್ಶೆ...
‘ತಮಿಳು ಲೇಖಕರೊಬ್ಬರು ಹಿಂದೂ ದೇವರುಗಳ ಬಗ್ಗೆ ಬರೆದಿದ್ದ ಪುಸ್ತಕದ ವಿಮರ್ಶೆಯನ್ನು 2015ರಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟಿಸಿದ್ದ ಗೌರಿ ಲಂಕೇಶ್, ‘ಪಾರ್ವತಿಯ ತೊಡೆ ನೋಡಿ ಶಿವ ಉದ್ರೇಕಗೊಂಡಿದ್ದ’  ಎಂಬ ಸಾಲುಗಳನ್ನು ಬರೆದಿದ್ದರು. ಅಲ್ಲದೆ, ‘ಹಿಂದೂ ದೇವರುಗಳಿಗೆ ಅಪ್ಪ–ಅಮ್ಮ ಯಾರೂ ಇಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹಿಂದೂ ಧರ್ಮದಲ್ಲೇ ಹುಟ್ಟಿ, ದೇವರುಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ನನ್ನನ್ನು ಕೆರಳಿಸಿತ್ತು. ಆ ಸಿಟ್ಟಿನಲ್ಲೇ ಅಮೋಲ್ ಕಾಳೆ ಗ್ಯಾಂಗ್ ಸೇರಿಕೊಂಡು ಅವರ ಹತ್ಯೆಗೆ ಸಹಕರಿಸಿದ್ದೆ’ ಎಂದು ಅಮಿತ್ ಬದ್ದಿ ಹೇಳಿಕೆ ಕೊಟ್ಟಿದ್ದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !