ಜಾಂಬೋಟಿ ಜಮೀನಿನಲ್ಲೂ ಶಸ್ತ್ರಾಸ್ತ್ರ ತರಬೇತಿ!

7
ಬೆಳಗಾವಿಯಲ್ಲಿ ಸೆರೆಸಿಕ್ಕ 12ನೇ ಆರೋಪಿ ನ್ಯಾಯಾಂಗ ಬಂಧನಕ್ಕೆ

ಜಾಂಬೋಟಿ ಜಮೀನಿನಲ್ಲೂ ಶಸ್ತ್ರಾಸ್ತ್ರ ತರಬೇತಿ!

Published:
Updated:

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ಬಂಧಿತನಾಗಿರುವ 12ನೇ ಆರೋಪಿ ಭರತ್‌ ಕುರ್ನೆ ಅಲಿಯಾಸ್‌ ಅಂಕಲ್ (37), ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ತನ್ನ ಜಮೀನಿನಲ್ಲೇ ಶಸ್ತ್ರಾಸ್ತ್ರ ತರಬೇತಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಬೆಳಗಾವಿ ಮಹಾದ್ವಾರ ರಸ್ತೆ ಸಂಭಾಜಿ ಗಲ್ಲಿಯ ನಿವಾಸಿ ಭರತ್‌, ತರಕಾರಿ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾನೆ. ಮೊಬೈಲ್ ಕ್ಯಾಂಟಿನ್ ಸಹ ನಡೆಸುತ್ತಿದ್ದಾನೆ. ಬೆಳಗಾವಿಯಲ್ಲಿ ಆತನನ್ನು ಬಂಧಿಸಿದ್ದ ಎಸ್‌ಐಟಿ ಪೊಲೀಸರು, 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿದರು. ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದನ್ನು ವಿವರಿಸಿದರು.  ನ್ಯಾಯಾಧೀಶರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

‘ಖಾನಾಪುರ ತಾಲ್ಲೂಕು ಜಾಂಬೋಟಿ ಅರಣ್ಯ ಪ್ರದೇಶದ ಚಿಕಲಾ ಗ್ರಾಮದಲ್ಲಿ ಆರೋಪಿಗೆ ಸೇರಿದ್ದ 3 ಎಕರೆ ಜಮೀನಿದೆ. ಅಲ್ಲಿ ಶೆಡ್‌ ನಿರ್ಮಿಸಿರುವ ಆತ, ಆಗಾಗ ಅಲ್ಲಿಗೆ ಹೋಗಿ ಬರುತ್ತಿದ್ದ.‌ ಆರೋಪಿಗಳಾದ ಪರಶುರಾಮ ವಾಘ್ಮೋರೆ, ಮನೋಹರ್ ಯಡವೆ, ಗಣೇಶ್ ಮಿಸ್ಕಿನ್ ಹಾಗೂ ಅಮಿತ್‌ ಬದ್ದಿ ಇದೇ ಜಮೀನಿನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದರು. ಅವರ ಜತೆ ಅಮೋಲ್ ಕಾಳೆ ಸಹ ಇರುತ್ತಿದ್ದ. ಏರ್‌ಗನ್‌ ಹಾಗೂ ಗುಂಡುಗಳನ್ನು ಶೆಡ್‌ನಲ್ಲೇ ಇಟ್ಟಿದ್ದರು. ಆ ಬಗ್ಗೆ ಆರೋಪಿ ಭರತ್‌ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘ಮಹಾರಾಷ್ಟ್ರದ ಕಾಳೆ, ಬೆಳಗಾವಿಯ ಪರಿಚಯಸ್ಥರೊಬ್ಬರ ಮೂಲಕ ಭರತ್‌ನನ್ನು ಪರಿಚಯ ಮಾಡಿಕೊಂಡಿದ್ದ. ‘ಧರ್ಮಕ್ಕಾಗಿ ಮಹತ್ವದ ಕೆಲಸ ಮಾಡುತ್ತಿದ್ದೇವೆ. ನಿನ್ನ ಸಹಕಾರ ಬೇಕು’ ಎಂದಿದ್ದ. ‘ಅರಣ್ಯ ಪ್ರದೇಶದಲ್ಲಿ ನನ್ನ ಜಮೀನಿದೆ. ನೀವು ಅಲ್ಲಿಯೇ ಉಳಿದುಕೊಳ್ಳಬಹುದು. ಅದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಭರತ್‌ ಹೇಳಿದ್ದ. ಅದಾದ ನಂತರವೇ ಕಾಳೆ, ಉಳಿದೆಲ್ಲ ಆರೋಪಿಗಳನ್ನು ಬೆಳಗಾವಿಗೆ ಕರೆಸಿಕೊಂಡಿದ್ದ. ಅವರಿಗೆಲ್ಲ ಮಡಿಕೇರಿಯ ರಾಜೇಶ್‌ ಬಂಗೇರಾ ತರಬೇತಿ ಕೊಟ್ಟಿದ್ದ’ ಎಂದರು.

ಬೆಳಗಾವಿಯಲ್ಲಿ ಬಾಡಿಗೆ ಮನೆ: ‘ಅರಣ್ಯದಲ್ಲಿರುವ ಶೆಡ್‌ನಲ್ಲಿ ರಾತ್ರಿ ಉಳಿದುಕೊಳ್ಳುವುದು ಅಪಾಯಕಾರಿ ಎಂದಿದ್ದ ಭರತ್‌, ಬೆಳಗಾವಿಯ ಶಾಸ್ತ್ರಿನಗರದಲ್ಲಿ ಆರೋಪಿಗಳಿಗೆ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಅಲ್ಲಿ ವಾಸವಿದ್ದ ಆರೋಪಿಗಳು, ನಿತ್ಯವೂ ಚಿಕಲಾಕ್ಕೆ ಹೋಗಿ ಬರುತ್ತಿದ್ದರು. ಅವರ ಓಡಾಟಕ್ಕೆ ಭರತ್‌ನೇ ಓಮ್ನಿ ವ್ಯಾನ್‌ನ ವ್ಯವಸ್ಥೆ ಮಾಡಿಕೊಟ್ಟಿದ್ದ. ಆ ವಾಹನವನ್ನು ಜಪ‍್ತಿ ಮಾಡಬೇಕಿದೆ’ ಎಂದು ಹೇಳಿದರು.

ಕರಾಟೆ, ಜಪ, ಧ್ಯಾನ: ಶಸ್ತ್ರಾಸ್ತ್ರ ಬಳಕೆಯ ಜೊತೆಗೆ ಆರೋಪಿಗಳು, ಕರಾಟೆ ತರಬೇತಿಯನ್ನೂ ಪಡೆಯುತ್ತಿದ್ದರು. ನಿತ್ಯವೂ ನಸುಕಿನಲ್ಲಿ ಬೆಳಗಾವಿಯಿಂದ ಹೊರಡುತ್ತಿದ್ದ ಆರೋಪಿಗಳು, ಸೂರ್ಯೋದಯಕ್ಕೂ ಮುನ್ನ ಜಪ ಮಾಡಿ ತರಬೇತಿ ಶುರು ಮಾಡುತ್ತಿದ್ದರು. ಸೂರ್ಯಾಸ್ತದ ನಂತರ ಪುನಃ ಜಪ–ಧ್ಯಾನ ಮಾಡಿ ಅಲ್ಲಿಂದ ಬೆಳಗಾವಿಗೆ ಬರುತ್ತಿದ್ದರು ಎಂದು ಅಧಿಕಾರಿ ತಿಳಿಸಿದರು.

‘ಎನ್‌ಐಎ ವಾಂಟೆಡ್‌ ಜತೆ ನಂಟಿದೆ’

‘ಪ್ರಕರಣದ ಆರೋಪಿಗಳು, ಎನ್‌ಐಎ ವಾಂಟೆಡ್‌ ಪಟ್ಟಿಯಲ್ಲಿರುವ ಒಬ್ಬಾತನ ಜತೆ ನಂಟು ಹೊಂದಿದ್ದಾನೆ. ಆ ವ್ಯಕ್ತಿ, ಭರತ್‌ನ ಜಮೀನಿಗೂ ಬಂದು ಶಸ್ತ್ರಾಸ್ತ್ರ ತರಬೇತಿ ನೀಡಿ ಹೋಗಿರುವ ಅನುಮಾನವಿದೆ. ಆತನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಭರತ್‌ನನ್ನು ಬೆಳಗಾವಿ, ಗೋವಾ ಹಾಗೂ ಪುಣೆಗೆ ಕರೆದೊಯ್ಯಬೇಕಿದೆ. ಹೀಗಾಗಿ, ಕಸ್ಟಡಿಗೆ ನೀಡಬೇಕು’ ಎಂದು ಎಸ್ಐಟಿ ಪೊಲೀಸರು, 1ನೇ ಎಸಿಎಂಎಂ ನ್ಯಾಯಾಲಯವನ್ನು ಕೋರಿದರು.

ನ್ಯಾಯಾಧೀಶರು, ‘ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇನೆ. ಕಸ್ಟಡಿಗೆ ಬೇಕಾದರೆ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ’ ಎಂದು ಹೇಳಿದರು.

ಆರೋಪಿ ಪರ ವಕೀಲರು, ‘ಬಂಧನದ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದರು. ನ್ಯಾಯಾಧೀಶರು, ‘3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !