ಶನಿವಾರ, ಡಿಸೆಂಬರ್ 14, 2019
25 °C
ಪಶುವೈದ್ಯೆಯ ಅತ್ಯಾಚಾರ ಘಟನೆ ಮರೆಯಾಗುವ ಮುನ್ನವೇ ಕ್ರೌರ್ಯಕ್ಕೆ ಬಲಿಯಾದ ಪುಟಾಣಿ

ಚಿಂಚೋಳಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಯಾಕಾಪುರ ಗ್ರಾಮದ ಹೊರವಲಯದಲ್ಲಿ ಎರಡನೇ ತರಗತಿಯ (8 ವರ್ಷ) ಬಾಲಕಿ ಮೇಲೆ ಸೋಮವಾರ ಸಂಜೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಈ ಬಾಲಕಿಯನ್ನು ಸೋಮವಾರ ಮಧ್ಯಾಹ್ನ ಯಲ್ಲಪ್ಪ (35) ಎಂಬ ವ್ಯಕ್ತಿಯು ಜತೆಗೆ ಕರೆದುಕೊಂಡು ಓಡಾಡುತ್ತಿದ್ದ. ಇದನ್ನು ಗ್ರಾಮಸ್ಥರು ನೋಡಿದ್ದರು. ಸಂಜೆ ಬಾಲಕಿ ಶವವಾಗಿ ಪತ್ತೆಯಾಗಿದ್ದರಿಂದ ಯಲ್ಲಪ್ಪನ ಮೇಲೆ ಅನುಮಾನ ಬಂದು ವಿಚಾರಿಸಿದರು. ಆದರೆ, ಆತ ಬಾಲಕಿ ಸಾವಿಗೂ ತನಗೂ ಸಂಬಂಧ ಇಲ್ಲ ಎಂದೇ ವಾದಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

‘ಬಾಲಕಿ ಮಂದಬುದ್ಧಿಯವಳಾಗಿದ್ದಳು. ಚಾಕೊಲೇಟ್‌ ನೀಡುವ ಆಸೆ ತೋರಿಸಿ ಆಕೆಯನ್ನು ಕಾಲುವೆ ಕಡೆಗೆ ಕರೆದುಕೊಂಡು ಹೋದ ಆರೋಪಿ, ಈ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಯಾಕಾಪುರದ ಅಂಗನವಾಡಿ ಕೇಂದ್ರದ ಬಳಿ ಮುಲ್ಲಾಮರಿ ಯೋಜನೆ ಕಾಲುವೆ ಮೇಲೆ ಬಾಲಕಿ ಶವವಾಗಿ ಬಿದ್ದಿದ್ದಾಳೆ ಎಂದು ದಾರಿಹೋಕರು ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ಆಕೆಯ ಪಾಲಕರಿಗೂ ವಿಷಯ ಮುಟ್ಟಿಸಿದರು. ಬಾಲಕಿಯ ಉಡು‍ಪು ಅಸ್ತವ್ಯಸ್ತವಾಗಿದ್ದು, ಗುಪ್ತಾಂಗದ ಬಳಿ ಸಾಕಷ್ಟು ರಕ್ತಸ್ರಾವವಾಗಿತ್ತು. ಆರೋಪಿ ಯಲ್ಲಪ್ಪನ ಒಳ ಉಡುಪು ಕೂಡ ಹತ್ತಿರದಲ್ಲೇ ಸಿಕ್ಕಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ತಿಳಿಸಿದ್ದಾರೆ.

ಮದ್ಯವ್ಯಸನಿಯಾದ ಯಲ್ಲಪ್ಪನಿಗೆ ಮದುವೆಯಾಗಿದ್ದು, ಮಕ್ಕಳಾಗಿಲ್ಲ. ಈ ಹಿಂದೆ ಕೂಡ ಗ್ರಾಮದಲ್ಲಿ ತರುಣಿಯರನ್ನು ಚುಡಾಯಿಸಿದ ಬಗ್ಗೆ ಈತನ ಮೇಲೆ ಹಲವು ದೂರುಗಳು ದಾಖಲಾಗಿವೆ.

ಸೋಮವಾರ ತಡರಾತ್ರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಾಡಾ ಮಾರ್ಟಿನ್‌ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಸೇಡಂ ತಾಲ್ಲೂಕು ಆಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಯ ಕಿಡಿ ಹೊತ್ತಿದೆ. ಇದರ ಮಧ್ಯದಲ್ಲೇ ಪುಟ್ಟ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು