ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಸ್ವಾಮೀಜಿ ವಿರುದ್ಧ ನ್ಯಾಯಾಂಗ ನಿಂದನೆ: ಹೈಕೋರ್ಟ್‌ ಸೂಚನೆ

ಗೋಕರ್ಣ ಪ್ರಕರಣ
Last Updated 24 ಏಪ್ರಿಲ್ 2019, 4:23 IST
ಅಕ್ಷರ ಗಾತ್ರ

ಧಾರವಾಡ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಉಪಾಧಿವಂತ ಅರ್ಚಕರಿಗೆ ಪೂಜಾ ಅವಕಾಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಇತರ ಮೇಲ್ಮನವಿದಾರರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸುವಂತೆ ಇಲ್ಲಿನ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.

ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರಗೊಂಡ ನಂತರ ರಾಮಚಂದ್ರಾಪುರ ಮಠದ ಆಡಳಿತವನ್ನು ವಿರೋಧಿಸುವ ಆನುವಂಶೀಯ ಉಪಾಧಿವಂತರಾದ ಚಿಂತಾಮಣಿ ಉಪಾಧ್ಯ ಮತ್ತು ಇತರ 31 ಜನ ಪೂಜಾ ಹಕ್ಕಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಪ್ರಕರಣದಲ್ಲಿ ಕಾರವಾರ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಆಡಳಿತ ಮಂಡಳಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಜಿ.ನರೇಂದ್ರ ಅವರಿದ್ದ ನ್ಯಾಯಪೀಠ, ‘ಉಪಾಧಿವಂತ ಅರ್ಚಕರು ದೇವಸ್ಥಾನದ ಆಡಳಿತಾಧಿಕಾರಿ ಎದುರು ಹಾಜರಾಗಿ ವಿವರ ಸಲ್ಲಿಸಬೇಕು ಮತ್ತು ಆಡಳಿತಾಧಿಕಾರಿ ಉಪಾಧಿವಂತರನ್ನು ನೋಂದಣಿ ಮಾಡಿಕೊಂಡು ಪೂಜೆಗೆ ಅವಕಾಶ ನೀಡುವಂತೆ’ ಆದೇಶಿಸಿತ್ತು. ಇಷ್ಟಾಗಿಯೂ ಆಡಳಿತಾಧಿಕಾರಿ ಪೂಜೆಗೆ ಅವಕಾಶ ನಿರಾಕರಿಸಿದ್ದರು. ಈ ಕುರಿತು ಅರ್ಚಕರು ಸಲ್ಲಿಸಿದ್ದ ಅರ್ಜಿಗೆ ಹಿಂಬರಹ ಕೂಡಾ ನೀಡಿದ್ದರು. ಇದನ್ನು ಉಪಾಧಿವಂತ ಅರ್ಚಕರು ಮಧ್ಯಂತರ ಅರ್ಜಿ ಮೂಲಕ ನ್ಯಾಯಪೀಠದ ಗಮನ ಸೆಳೆದಿದ್ದರು.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಆಡಳಿತಾಧಿಕಾರಿ ಕ್ರಮಕ್ಕೆ ತೀವೃ ಅತೃಪ್ತಿ ವ್ಯಕ್ತಪಡಿಸಿದ್ದ ನ್ಯಾಯಪೀಠ ದೇವಸ್ಥಾನದ ಆಡಳಿತಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿತ್ತು. ಅದರನ್ವಯ ಆಡಳಿತಾಧಿಕಾರಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಪ್ರಮಾಣ ಪತ್ರದ ಸಂಗತಿಗಳು ಸತ್ಯಕ್ಕೆ ದೂರವಾಗಿವೆ ಎನ್ನುವ ಅಭಿಪ್ರಾಯವನ್ನು ವಿಚಾರಣೆ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ನ್ಯಾಯಪೀಠ, ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಆದೇಶ ಪಾಲಿಸದ ದೇವಸ್ಥಾನದ ಆಡಳಿತ ಮಂಡಳಿವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನಾ ಪ್ರಕರಣ ಯಾಕೆ ದಾಖಲಿಸಬಾರದು ಎಂದು ಕಳೆದ ಮಾರ್ಚ್‌ 21ರ ವಿಚಾರಣೆ ಸಂದರ್ಭದಲ್ಲಿ ಮೌಖಿಕವಾಗಿ ಪ್ರಶ್ನಿಸಿ, ಆದೇಶ ಕಾಯ್ದಿರಿಸಿತ್ತು. ಇದೇ 22ರಂದು ಆದೇಶ ಪ್ರಕಟಿಸಿದ ನ್ಯಾಯಪೀಠ ಮೇಲ್ಮನವಿದಾರರ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT