ಸೋಮವಾರ, ಸೆಪ್ಟೆಂಬರ್ 20, 2021
21 °C

ಸರ್ಕಾರದ ಭವಿಷ್ಯ 20 ಶಾಸಕರ ಕೈಯಲ್ಲಿದೆಯೆ?: ಬಿಎಸ್‌ವೈ ಹೇಳಿಕೆಯಿಂದ ಸಂಚಲನ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಅದೇ ಪಕ್ಷದ ನಾಯಕರ ಕೂಗು ಬಲವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

‘ಕಾಂಗ್ರೆಸ್‌ನ 20 ಶಾಸಕರು ಅತೃಪ್ತಿ ಹೊರಹಾಕಿದ್ದು, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು’ ಎಂಬ ಯಡಿಯೂರಪ್ಪ ಹೇಳಿಕೆ ಸಂಚಲನ ಮೂಡಿಸಿದೆ.

ಲೋಕಸಭೆ ಚುನಾವಣೆ ಸಮಯದಲ್ಲಿ ಹಾಗೂ ನಂತರದ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿಯ ಯಾರೊಬ್ಬರೂ ಮಾತನಾಡಬಾರದು ಎಂದು ತಾಕೀತು ಮಾಡಿದ್ದರು. ಆದರೆ ಈಗ ಅವರೇ ಕಾಂಗ್ರೆಸ್ ಅತೃಪ್ತ ಶಾಸಕರ ಬಗ್ಗೆ ಮಾತನಾಡಿರುವುದು ಭವಿಷ್ಯದ ರಾಜಕೀಯ ಬೆಳವಣಿಗೆಗಳಿಗೆ ಮುನ್ಸೂಚನೆ. ಸರ್ಕಾರದ ಅಳಿವು ಉಳಿವು ಈ ಶಾಸಕರ ಕೈಯಲ್ಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.

‘ಈಗಾಗಲೇ 104 ಶಾಸಕರನ್ನು ಹೊಂದಿದ್ದು, ಕುಂದಗೋಳ, ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಆಗ ಸಂಖ್ಯಾಬಲ 106ಕ್ಕೆ ಏರಿಕೆ ಆಗಲಿದೆ. ಪಕ್ಷೇತರ ಶಾಸಕರ ಬೆಂಬಲವೂ ಸಿಗಲಿದೆ. ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆದರೆ ಸರ್ಕಾರ ರಚನೆಗೆ ದಾರಿ ಸುಗಮವಾಗುತ್ತದೆ’ ಎಂಬ ಲೆಕ್ಕಾಚಾರ ಯಡಿಯೂರಪ್ಪನವರದು.

ಮೇ 23ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು, ಕೇಂದ್ರದಲ್ಲಿ ಅಧಿಕಾರ ಹಿಡಿದರೆ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ಜೋರಾಗಬಹುದು. ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಲೆಕ್ಕಾಚಾರದ ಸ್ವರೂಪವೂ ಬದಲಾಗಬಹುದು. ವಿರೋಧ ಪಕ್ಷದವರು ಸರ್ಕಾರ ಬೀಳಿಸಿದರು ಎನ್ನುವ
ಅಪವಾದಕ್ಕಿಂತ ‘ದೋಸ್ತಿ’ಗಳು (ಜೆಡಿಎಸ್‌–ಕಾಂಗ್ರೆಸ್‌) ತಾವಾಗಿಯೇ ಕಚ್ಚಾಡಿ ಪತನವಾದರೆ ದಾರಿ ಸುಗಮವಾಗಲಿದೆ. ಆಗ ಪ್ರಯತ್ನ ನಡೆಸಬಹುದು. ಒಟ್ಟಾರೆ ಮುಂದಿನ ಬೆಳವಣಿಗೆ ಕಾದುನೋಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರದ ಹಣೆಬರಹವನ್ನು ಮಂಡ್ಯ, ಮೈಸೂರು, ತುಮಕೂರು ಲೋಕಸಭೆ ಕ್ಷೇತ್ರಗಳ ಫಲಿತಾಂಶ ನಿರ್ಧರಿಸಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲೇ ಸಿದ್ದರಾಮಯ್ಯ ಸಿ.ಎಂ. ಆಗಬೇಕು ಎಂದು ಅವರ ಬೆಂಬಲಿಗ ಶಾಸಕರು ಹೇಳುತ್ತಿದ್ದಾರೆ. ಇಂಥ ಹೇಳಿಕೆ ನೀಡದಂತೆ ತಡೆಯುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಇದರಿಂದಾಗಿ ಗೊಂದಲಕಾರಿ ಹೇಳಿಕೆಗಳು ಮುಂದುವರಿದಿವೆ.

ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಜುಗರಕ್ಕೆ ಒಳಗಾಗಿದ್ದು, ಸಿದ್ದರಾಮಯ್ಯ ವಿರುದ್ಧ ಆಂತರಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕುಮಾರಸ್ವಾಮಿ ಬೆಂಬಲಿಗರೂ ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಕಾರಣ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅತೃಪ್ತ ಶಾಸಕರನ್ನು ಕರೆದು ಮಾತನಾಡುತ್ತಿದ್ದಾರೆ. ರಾಜಕೀಯ ಚಟುವಟಿಕೆಗಳು ಬೆಂಗಳೂರಿನಿಂದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿವೆ. ಮುಖ್ಯಮಂತ್ರಿ ಶುಕ್ರವಾರ ಕೊಡಗು ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ತೆರಳಿದ್ದು, ಅಲ್ಲೇ ಸರ್ಕಾರ ರಕ್ಷಣೆಗೆ ತಂತ್ರಗಾರಿಕೆ ರೂಪಿಸಲಿದ್ದಾರೆ. ಇನ್ನೂ ಎರಡು ದಿನ ಅಲ್ಲೇ ವಾಸ್ತವ್ಯ ಹೂಡಲಿದ್ದು, ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧರಾಗಿಯೇ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ರಮೇಶ ಏಕಾಂಗಿಯೆ?’

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ಏಕಾಂಗಿಯೋ, ಅಲ್ಲವೋ? ಅವರೊಂದಿಗೆ ಯಾರಿದ್ದಾರೆ ಎನ್ನುವುದು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಗೊತ್ತಾಗಲಿದೆ’ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

‘ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿಶ್ಚಿತ. ಅಲ್ಲಿಯವರೆಗೆ ಎಲ್ಲರೂ ಸುಮ್ಮನಿರುವುದು ಒಳ್ಳೆಯದು’ ಎಂದು ಆಪರೇಷನ್‌ ಕಮಲದ ಸುಳಿವು ನೀಡಿದರು.

**

ಯಡಿಯೂರಪ್ಪಗೆ ಅಧಿಕಾರ ದಾಹ ಹೆಚ್ಚಾಗಿದೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ
-ಸಿದ್ದರಾಮಯ್ಯ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

**
ಕಾಂಗ್ರೆಸ್‌ನ ಅತೃಪ್ತ 20 ಶಾಸಕರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

**
ತಮಗೆ ಇಷ್ಟವಾದ ಮುಖಂಡ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕರು ಪ್ರೀತಿಯಿಂದ ಹೇಳಿಕೊಂಡರೆ ತಪ್ಪೇನಿಲ್ಲ. ಅದರೆ, ಅದು ಅಧಿಕೃತವಲ್ಲ
-ಡಾ.ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು