ಸರ್ಕಾರಿ ನೌಕರರ ವರ್ಗಾವಣೆ ಶುರು

7

ಸರ್ಕಾರಿ ನೌಕರರ ವರ್ಗಾವಣೆ ಶುರು

Published:
Updated:

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಲ್ಲೇ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅಸ್ತಿತ್ವದಲ್ಲಿರುವ ನಿಯಮಗಳ ಅನುಸಾರ ವರ್ಗಾವಣೆ ಪ್ರಕ್ರಿಯೆ ಏಪ್ರಿಲ್‌ ಮೊದಲ ವಾರ ಆರಂಭವಾಗಿ  ಮೇ ಅಂತ್ಯದಲ್ಲಿ ಮುಕ್ತಾಯವಾಗಬೇಕು. ಈ ಬಾರಿ ಚುನಾವಣೆ ನೀತಿ ಸಂಹಿತೆ ಕಾರಣ ವರ್ಗಾವಣೆಗೆ ತಡೆ ನೀಡಲಾಗಿತ್ತು. ಚುನಾವಣೆ ಬಳಿಕ ರಾಜಕೀಯ ಅನಿಶ್ಚಿತತೆ ಮತ್ತು ಸರ್ಕಾರ ರಚನೆಯಲ್ಲಿ ವಿಳಂಬವಾಗಿದ್ದರಿಂದ ವರ್ಗಾವಣೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.

ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ಸರ್ಕಾರ ಆದ್ಯತೆಯ ಮೇರೆಗೆ ವರ್ಗಾವಣೆಯ ವಿಷಯವನ್ನು ಕೈಗೆತ್ತಿಕೊಂಡಿದ್ದು, ತಕ್ಷಣದಿಂದಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಜುಲೈ ಅಂತ್ಯದೊಳಗೆ ಒಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಶೇ.4 ರಷ್ಟು ನೌಕರರ ವರ್ಗಾವಣೆ: ವಿವಿಧ ಇಲಾಖೆಗಳಲ್ಲಿ ಒಟ್ಟು ಮಂಜೂರಾಗಿರುವ ವಿವಿಧ ಹುದ್ದೆಗಳ ಪೈಕಿ ಶೇ 4 ರ ಮಿತಿಗೆ ಒಳಪಟ್ಟು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ವರ್ಗಾವಣೆಗೆ ಈ ಹಿಂದೆ ಇದ್ದ ಮಾರ್ಗಸೂಚಿಯನ್ನೇ ಅನುಸರಿಸಲಾಗುವುದು. ಹಿಂದಿನ ವರ್ಷಗಳಲ್ಲಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಒಟ್ಟು ಶೇ 6 ರಷ್ಟು ವರ್ಗಾವಣೆ ಮಾಡಲಾಗುತ್ತಿತ್ತು. ಈ ಬಾರಿ ಆ ಪ್ರಮಾಣವನ್ನು ಶೇ 2 ರಷ್ಟು ಕಡಿಮೆ ಮಾಡಲಾಗಿದೆ. ಈ ಹಂತದಲ್ಲಿ ಭಾರಿ ಪ್ರಮಾಣದ ವರ್ಗಾವಣೆ ಬೇಡ. ಅದರಿಂದ ಆಡಳಿತಕ್ಕೆ ತೊಡಕು ಆಗಬಹುದು ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವರ್ಗಾವಣೆಗೆ ಸಂಬಂಧಿಸಿದಂತೆ 2013 ಮಾರ್ಗಸೂಚಿಯನ್ನು ಅನುಸರಿಸಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಮಾಡುವ ಉದ್ದೇಶವಿಲ್ಲ. ಚುನಾವಣೆ ಮತ್ತು ಸರ್ಕಾರ ರಚನೆಯಿಂದಾಗಿ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !