ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕಾಲೇಜುಗಳೆಂಬ ಗುಜರಿ: ಅವ್ಯವಸ್ಥೆ ಆಗರ, ಮಾನ್ಯತೆ ದೂರ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ
Last Updated 12 ಜನವರಿ 2019, 20:17 IST
ಅಕ್ಷರ ಗಾತ್ರ

ಬೆಳಗಾವಿ: ಗಬ್ಬು ನಾರುವ ಕೊಠಡಿ, ಗುಜರಿಗಿಂತ ಕಡೆಯಾಗಿರುವ ಪ್ರಯೋ ಗಾಲಯ, ಗುರುವೂ ಇಲ್ಲ, ಗುರಿಯೂ ಇಲ್ಲದ ಆಡಳಿತ ವ್ಯವಸ್ಥೆ, ತ್ರಿಶಂಕು ಸ್ಥಿತಿಯಲ್ಲಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳು.....

ಸಾಮಾನ್ಯರಿಗೂ ತಾಂತ್ರಿಕ ಶಿಕ್ಷಣ ಕೈಗೆಟುಕಲಿ ಎನ್ನುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಆರಂಭಿಸಲಾಗಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ದಯನೀಯ ಸ್ಥಿತಿಯಿದು.

ಸರ್ಕಾರದ ಬೇಜವಾಬ್ದಾರಿತನ ಮತ್ತು ಕ್ಯಾಪಿಟೇಷನ್ ಲಾಬಿಯ ಕಪಿಮುಷ್ಟಿಯಲ್ಲಿ ಸಿಲುಕಿರುವ ಉನ್ನತ ಶಿಕ್ಷಣ ಇಲಾಖೆಯ ವೈಫಲ್ಯದಿಂದ ಸರ್ಕಾರಿ ಕಾಲೇಜುಗಳು ಎರಡನೇ ದರ್ಜೆ ತಂತ್ರಜ್ಞರನ್ನು ರೂಪಿಸುವ ಕೇಂದ್ರಗಳಂತಾಗಿವೆ. ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡಲು ವಿಫಲವಾಗಿ ವರ್ಷದಿಂದ ವರ್ಷಕ್ಕೆ ಅವಸಾನದತ್ತ ಸಾಗಿವೆ. ಗುಣಮಟ್ಟದ ಶಿಕ್ಷಣವೂ ಇಲ್ಲ, ನೌಕರಿ ಭರವಸೆಯೂ ಇಲ್ಲದೆ ಪ್ರತಿಭಾವಂತರು ತ್ರಿಶಂಕು ಸ್ಥಿತಿಯಲ್ಲಿ ನರಳುವ ಸ್ಥಿತಿ ನಿರ್ಮಾಣವಾಗಿದೆ.

ಸ್ವಂತ ಕಟ್ಟಡಗಳಿಲ್ಲ, ಸಿಬ್ಬಂದಿ ಕೊರತೆ, ಪ್ರಯೋಗಾಲಯಗಳು ಇಲ್ಲದೇ ಪ್ರಾಯೋಗಿಕ ಪರೀಕ್ಷೆಗೆ ಬೇರಾವುದೋ ಕಾಲೇಜಿಗೆ ಹೋಗಬೇಕಾದ ದುಃಸ್ಥಿತಿ! ಇಂದಿನ ಔದ್ಯೋಗಿಕ ಪ್ರಪಂಚದ ಪೈಪೋಟಿಗೆ ತಕ್ಕಂತೆ ಕೌಶಲ ಅಭಿವೃದ್ಧಿ ಚಟುವಟಿಕೆಗಳು ನಡೆಯದೆ ಒಂದೇ ಒಂದು ಖಾಸಗಿ ಕಂಪನಿಯೂ ಕ್ಯಾಂಪಸ್ ಆಯ್ಕೆಗೆ ಬರುತ್ತಿಲ್ಲ ಎಂದರೆ ಸರ್ಕಾರಿ ಕಾಲೇಜುಗಳ ಸ್ಥಿತಿ ಹೇಗಿದೆ ಎಂಬುದನ್ನು ಯಾರೂ ಬೇಕಾದರೂ ಊಹಿಸಿಕೊಳ್ಳಬಹುದು.

‌ಹೈಟೆಕ್‌ ಜಮಾನಕ್ಕೆ ಪೂರಕವಾಗಿ ಮೇಲ್ದರ್ಜೆಗೇರುವಲ್ಲಿ ವಿಫಲವಾಗಿರುವ ಇವು, ಅಕ್ಷರಶಃ ‘ಅಪೌಷ್ಟಿಕತೆ’ಯಿಂದ ಬಳಲುತ್ತಿವೆ. ಸರ್ಕಾರಕ್ಕೆ ಬೇಡವಾದ ಕೂಸಿನಂತಾಗಿದ್ದು, ತಾಂತ್ರಿಕ ಭಾಷೆ ಯಲ್ಲಿಯೇ ಹೇಳುವುದಾದರೆ ‘ಹ್ಯಾಂಗ್‌’ ಆದ ಸ್ಥಿತಿಯಲ್ಲಿವೆ. ಆಳುವವರ ನಿಷ್ಕಾಳ ಜಿಗೆ ಕನ್ನಡಿ ಹಿಡಿದಿವೆ. ಕಾಲೇಜುಗಳು ಕಾಲಕಾಲಕ್ಕೆ ಅಪ್‌ಡೇಟ್‌ ಆಗದೇ ಇರುವುದರಿಂದಾಗಿ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ.

11 ಕಾಲೇಜುಗಳು: ಬೆಂಗಳೂರಿನ ಎಸ್‌ಕೆಎಸ್‌ಜೆಟಿಐ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಚಾಮರಾಜನಗರ, ಹಾಸನ, ಹಾವೇರಿ, ಕೊಡಗು ಜಿಲ್ಲೆಯ ಕುಶಾಲನಗರ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ರಾಯಚೂರು, ರಾಮ ನಗರ, ಕಾರವಾರದಲ್ಲಿ ಸರ್ಕಾರಿ ಎಂಜಿನಿ ಯರಿಂಗ್ ಕಾಲೇಜುಗಳಿವೆ. ಗದಗ ಜಿಲ್ಲೆ ನರಗುಂದದಲ್ಲಿ ಕಟ್ಟಡ ಸಿದ್ಧವಾಗಿಲ್ಲ. ಮುಂದಿನ ವರ್ಷ ಇಲ್ಲಿ ಪ್ರವೇಶ ಅನುಮಾನ.

ಕನಿಷ್ಠ ಸೌಲಭ್ಯಗಳು ಕೂಡ ಇಲ್ಲದೇ, ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಸಾಧ್ಯವೇ ಎನ್ನುವ ಪ್ರಶ್ನೆ ಈ ಕಾಲೇಜುಗಳನ್ನು ನೋಡಿದವರಲ್ಲಿ ಮೂಡದಿರದು. ಅಷ್ಟರ ಮಟ್ಟಿಗೆ ಕಾಲೇಜುಗಳ ಪರಿಸ್ಥಿತಿಯಿದೆ. ಉತ್ಕೃಷ್ಟ ತಾಂತ್ರಿಕ ಜ್ಞಾನ, ಕೌಶಲ ಸಿಗುತ್ತದೆಂದು ಭಾವಿಸಿ ಬರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ ಕಾಲೇಜುಗಳನ್ನು ಕಡೆಗಣಿಸಿ ಖಾಸಗಿಯವರಿಗೆ ‘ಸಹಕಾರ’ ಕೊಡಲಾಗುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.

ಪ್ರಾದೇಶಿಕ ಅಸಮತೋಲನ: ಈ ಕಾಲೇಜುಗಳ ಸ್ಥಾಪನೆಯಲ್ಲೂ ಪ್ರಾದೇಶಿಕ ಅಸಮತೋಲನ ಇದೆ. ಹೆಚ್ಚಿನವು ದಕ್ಷಿಣದಲ್ಲಿಯೇ ಇವೆ. ಉತ್ತರಕರ್ನಾಟಕದಲ್ಲಿ ಪ್ರಸ್ತುತ ಇರುವುದು ಹಾವೇರಿ ಹಾಗೂ ರಾಯಚೂರಲ್ಲಿ ಮಾತ್ರ. ಕರಾವಳಿಯಲ್ಲಿರುವುದು ಒಂದೇ (ಕಾರವಾರ). ಉಳಿದ ಜಿಲ್ಲೆಗಳಿಗೆ ‘ಭಾಗ್ಯ’ ಸಿಕ್ಕಿಲ್ಲ. ಆ ಭಾಗದವರು ಬೇರೆಡೆ ಹೋಗುವುದು ಅಥವಾ ದುಬಾರಿ ಶುಲ್ಕ ಕಟ್ಟಿ ಖಾಸಗಿ ಕಾಲೇಜು ಸೇರುವುದುಅನಿವಾರ್ಯವಾಗಿದೆ.

ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಮಾನವ ಸಂಪನ್ಮೂಲ ಒದಗಿಸುವ ಧ್ಯೇಯದೊಂದಿಗೆ ಆರಂಭವಾದ ತಾಂತ್ರಿಕ ಶಿಕ್ಷಣ ಇಲಾಖೆ, ಇರುವ ಹನ್ನೊಂದು ಕಾಲೇಜುಗಳಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿವೆ. ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆ ಭವಿಷ್ಯ ಕಂಡುಕೊಳ್ಳಲು ‘ಸರ್ಕಸ್‌’ ಮಾಡುತ್ತಿದ್ದಾರೆ.

ಇನ್ನು ವಿಟಿಯು ವ್ಯಾಪ್ತಿಯಲ್ಲಿರುವ ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಸಂಜೆ ಶಿಕ್ಷಣವೂ ಇದೆ) ಹಾಗೂ ದಾವಣಗೆರೆಯ ಯುಬಿಟಿಡಿ ಕಾಲೇಜುಗಳ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ. ಈ ನಡುವೆ, ಸರ್ಕಾರಿ ಕಾಲೇಜುಗಳನ್ನೂ ವಿಟಿಯುಗೆ ಹಸ್ತಾಂತರಿಸುವ ಪ್ರಸ್ತಾವ ಸರ್ಕಾರದ ಮುಂದಿದೆ!

ಎನ್‌ಬಿಎ ಮಾನ್ಯತೆಯೇ ಸಿಕ್ಕಿಲ್ಲ!: ಎನ್‌ಬಿಎ (ನ್ಯಾಷನಲ್ ಬೋರ್ಡ್‌ ಆಫ್‌ ಅಕ್ರಿಡಿಷನ್) ಅಥವಾ ನ್ಯಾಕ್ ಮಾನ್ಯತೆ ದೊರೆತರೆ ಹೆಚ್ಚಿನ ಅನುದಾನ ಹರಿದುಬಂದೀತು. ಇದರಿಂದ, ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ, ರಾಜ್ಯದ ಒಂದು ಸರ್ಕಾರಿ ಕಾಲೇಜು ಕೂಡ ಮಾನ್ಯತೆಗೆ ‘ಅರ್ಹತೆ’ಯನ್ನೇ ಗಳಿಸಿಲ್ಲ! ಇದು ಸೌಲಭ್ಯಗಳ ಕೊರತೆ ತಾಂಡವವಾಡುತ್ತಿರುವುದನ್ನು ಸಾರಿ ಹೇಳುತ್ತಿದೆ. ಬೆಂಗಳೂರಿನ ಎಸ್‌ಕೆಎಸ್‌ಜೆಟಿಐ, ಹಾಸನ ಹಾಗೂ ರಾಮನಗರ ಕಾಲೇಜುಗಳು ಪರವಾಗಿಲ್ಲ. ಉತ್ತರ ಕರ್ನಾಟಕದ ಕಾಲೇಜುಗಳ ಸ್ಥಿತಿ ತೀವ್ರ ಶೋಚನೀಯವಾಗಿದೆ.

ರಾಯಚೂರು ಕಾಲೇಜು ಕಟ್ಟಡ ‘ಭೂತಬಂಗಲೆ’ಯಂತಿದೆ! ಉಳಿದೆಡೆ ಬಾಡಿಗೆ ಕಟ್ಟಡಗಳೇ ‘ನೆಲೆ’. ಕಟ್ಟಡಗಳ ಕಾಮಗಾರಿ ಆಮೆಗತಿಯಲ್ಲಿದೆ. ಹಾಸ್ಟೆಲ್ ಇಲ್ಲದಿರುವುದರಿಂದ, ಪಿಜಿ ಅಥವಾ ಬಾಡಿಗೆ ರೂಂ ಮಾಡಿಕೊಳ್ಳಬೇಕು. ಬಹುತೇಕ ಕಡೆ ಮೆಕ್ಯಾನಿಕಲ್‌ ಲ್ಯಾಬ್‌ಗಳಿಲ್ಲ.

ಕಾರವಾರ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ 130 ಕಿ.ಮೀ ದೂರದ ಭಟ್ಕಳಕ್ಕೆ ಹೋಗಬೇಕು! ಅವರಿಗೂ ಹಾಸ್ಟೆಲ್‌ ಇಲ್ಲ. ನಗರದಿಂದ 14 ಕಿ.ಮೀ ದೂರದ ಮಾಜಾಳಿಯಲ್ಲಿರುವ ಕಾಲೇಜಿನಲ್ಲಿ, ಕುಡಿಯುವ ನೀರಿಗೂ ತತ್ವಾರ!

ಹೂವಿನಹಡಗಲಿಯಲ್ಲಿ ಹಳೆ ತಾಲ್ಲೂಕು ಕಚೇರಿಯೇ ಕಾಲೇಜಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಲ್ಯಾಬ್‌ಗಾಗಿ ರಾಣೆಬೆನ್ನೂರು, ಗದಗ ಅಥವಾ ದಾವಣಗೆರೆಗೆ ತೆರಳಬೇಕು. 34 ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ. ಅನುದಾನದ ಕೊರತೆಯಿಂದ ಈ ತಾಂತ್ರಿಕ ವಿದ್ಯಾಮಂದಿರ ನಲುಗುತ್ತಿದೆ. ರಾಮನಗರದಲ್ಲಿ ಹೊಸ ಕಟ್ಟಡವಿದೆಯಾದರೂ ಹೊರಗೆ ಥಳಕು; ಒಳಗೆ ಹುಳುಕು!

**

‘ಅತಿಥಿ’ಗಳ ಮೇಲೆ ಅವಲಂಬನೆ

ಸರ್ಕಾರ ಪ್ರತಿ ವಿದ್ಯಾರ್ಥಿ ಮೇಲೆ ವಾರ್ಷಿಕ ₹ 80 ಸಾವಿರ ಖರ್ಚು ಮಾಡುತ್ತಿದೆ. ನಿಯಮಗಳ ಪ್ರಕಾರ, 20 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರಿರಬೇಕು. ಆದರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಾಸರಿ 35 ರಿಂದ 40 ವಿದ್ಯಾರ್ಥಿಗಳಿಗೆ ಒಬ್ಬರಿದ್ದಾರೆ. ಶೇ 30ರಷ್ಟು ಬೋಧಕ ಹುದ್ದೆಗಳು ಖಾಲಿ ಇದ್ದು, ‘ಅತಿಥಿ’ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ.

ಸರಕಾರಿ ಕಾಲೇಜುಗಳ ಕಾಯಕಲ್ಪಕ್ಕೆ ಏನು ಮಾಡಬೇಕು ?

* ಹಳೇ ಕಾಲೇಜುಗಳು ಸುಸ್ಥಿತಿಗೆ ಬರುವತನಕ ಹೊಸ ಕಾಲೇಜಿಗೆ ಅನುಮತಿ ನೀಡಬಾರದು

* ಕಾಲಮಿತಿಯಲ್ಲಿ ಖಾಲಿ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಬೇಕು

* ಪ್ರತಿ ಕಾಲೇಜಿನ ಅಗತ್ಯಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ ಅನುದಾನ ನೀಡಬೇಕು

* ಕಟ್ಟಡ ಸಹಿತ ಮೂಲ ಸೌಲಭ್ಯಗಳಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಬೇಕು

* ಗ್ರಂಥಾಲಯ ಮತ್ತು ಪ್ರಯೋಗಾಲಯ ಸ್ಥಾಪನೆಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು

* ಶತಮಾನದಷ್ಟು ಹಳೆಯದಾದ ಯುವಿಸಿಇಯನ್ನು ಮಾದರಿ ಸಂಸ್ಥೆಯಾಗಿ ರೂಪಿಸಲು ವಿಶೇಷ ಅನುದಾನ ನೀಡಬೇಕು

* ಕ್ಯಾಂಪಸ್ ಆಯ್ಕೆಗೆ ಪೂರಕವಾಗಿ ಪ್ಲೆಸ್ ಮೆಂಟ್ ಸೆಲ್ ಗಳನ್ನು ತೆರೆಯಬೇಕು

* ತಜ್ಞರ ಸಮಿತಿ ನಿಯಮಿತವಾಗಿ ಕಾಲೇಜುಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶಿಸಬೇಕು

**

‘ಖಾಸಗಿ ಕಾಲೇಜುಗಳೂ ಹಿಂಗೇ ಇದ್ದವು’

ಬೆಳಗಾವಿ:‘ರಾಜ್ಯದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಆರಂಭದಲ್ಲಿ ಸೌಲಭ್ಯಗಳಿರಲಿಲ್ಲ. ನಮ್ಮ ಕಾಲೇಜುಗಳಿಗಿಂತಲೂ ಕಡೆಯಾಗಿದ್ದವು. ನಂತರ ಸುಧಾರಿಸುತ್ತಾ ಬಂದಿವೆ. ಸರ್ಕಾರಿ ಕಾಲೇಜುಗಳಲ್ಲೂ ಹೀಗೆಯೇ ಆಗುತ್ತದೆ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಸಮರ್ಥಿಸಿಕೊಂಡರು.

‘ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ ಕೇವಲ ₹ 18,090 ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ–1ರವರಿಗೆ ವಿದ್ಯಾರ್ಥಿ ವೇತನ ಕೊಡುವುದರಿಂದ ಉಚಿತವಾಗಿಯೇ ಶಿಕ್ಷಣ ನೀಡಿದಂತೆ ಆಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ಶುಲ್ಕ ದುಬಾರಿ ಇರುವುದಿಲ್ಲವೇ? ನಾವು ಬಹಳಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಿಢೀರನೆ ಎಲ್ಲವನ್ನೂ ಮಾಡಲಾಗುವುದಿಲ್ಲ’‍ ಎಂದು ಪ್ರತಿಕ್ರಿಯೆ ನೀಡಿದರು.

‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರಯೋಗಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಒದಗಿಸುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿದ ನಂತರ ಹೊಸ ಕಾಲೇಜುಗಳ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಆದ್ಯತೆ ನೀಡಿದ್ದೇವೆ. ಟಾಪ್‌ –10ನಲ್ಲಿ ಸ್ಥಾನ ಪಡೆಯಬೇಕು ಎನ್ನುವ ಗುರಿಯನ್ನೂ ಹೊಂದಿದ್ದೇವೆ’ ಎಂದು ತಿಳಿಸಿದರು.

‘ಎಂಜಿನಿಯರಿಂಗ್‌ ಕಾಲೇಜುಗಳ ಮೇಲಿನ ನಿಯಂತ್ರಣ, ಪರೀಕ್ಷೆ, ಸ್ವಾಯತ್ತ ಸ್ಥಾನಮಾನ ನೀಡುವುದು ಎಲ್ಲವನ್ನೂ ವಿಟಿಯು ನಿರ್ವಹಿಸುತ್ತಿದೆ. ಹೀಗಾಗಿ, ಎಲ್ಲ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನೂ ವಿಟಿಯು ವ್ಯಾಪ್ತಿಗೆ ಹಸ್ತಾಂತರಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಹಣ ವಿಶ್ವವಿದ್ಯಾಲಯಕ್ಕೆ ಬಂದ ನಂತರ ಇದು ಅನುಷ್ಠಾನಕ್ಕೆ ಬರಬಹುದು’ ಎಂದು ಹೇಳಿದರು.

‘ಮುಂದಿನ ಶೈಕ್ಷಣಿಕ ಸಾಲಿನಿಂದ ಸೀಟುಗಳನ್ನು ಕಡಿತ ಮಾಡುವುದಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಎಚ್ಚರಿಕೆ ಕೊಟ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರಾಂಶುಪಾಲರಿಗೆ ತಾಕೀತು ಮಾಡಲಾಗಿದೆ. ಸೀಟುಗಳನ್ನು ಕಡಿತಗೊಳಿಸಿದರೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಾಗೊಂದು ವೇಳೆ ಪರಿಷತ್ತು ಪಟ್ಟು ಹಿಡಿದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT