ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ ಮುಂದೂಡಿಕೆ

‘ಅಸಾಧಾರಣ ಪರಿಸ್ಥಿತಿ’ ಎಂದು ಕಾರಣ ನೀಡಿದ ರಾಜ್ಯ ಚುನಾವಣಾ ಆಯೋಗ
Last Updated 28 ಮೇ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹರಡುವಿಕೆಯನ್ನು ‘ಅಸಾಧಾರಣ ಪರಿಸ್ಥಿತಿ‘ ಎಂದು ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿದೆ.

ರಾಜ್ಯದ 6,025 ಗ್ರಾಮ ಪಂಚಾಯಿತಿಗಳ ಪೈಕಿ, ಜೂನ್‌ನಿಂದ ಆಗಸ್ಟ್ ಮಧ್ಯೆ ಸುಮಾರು 5,800 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ನೀಡಿದ ವರದಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಆಯೋಗ ಸ್ಪಷ್ಟಪಡಿಸಿದೆ.

‘ಕೋವಿಡ್‌ 19 ನಿಯಂತ್ರಣದಲ್ಲಿ ಜಿಲ್ಲಾಡಳಿತ ತೊಡಗಿದ್ದು, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆ ಒದಗಿಸಲು ತೊಂದರೆಯಾಗಬಹುದು. ಚುನಾವಣೆ ನಡೆಸಿದರೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಲಿದ್ದು, ಕೋವಿಡ್ ನಿಯಂತ್ರಣಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಮುಂದೂಡಲಾಗಿದೆ ’ ಎಂದೂ ಆಯೋಗ ತಿಳಿಸಿದೆ.

‘ಕಿಷನ್‌ ಸಿಂಗ್‌ ತೋಮರ್‌ ಮತ್ತು ಅಹಮದಾಬಾದ್‌ನ ಸಿಟಿ ಮುನಿಸಿಪಲ್‌ ಕಾರ್ಪೊರೇಷನ್‌ ಪ್ರಕರಣದಲ್ಲಿ, ನೈಸರ್ಗಿಕ ವಿಪತ್ತಿನಿಂದ ಚುನಾವಣೆ ನಡೆಸುವುದು ಪ್ರಾಧಿಕಾರಗಳಿಗೆ ಕಷ್ಟವಾದರೆ ಅಂಥ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ’ ಎಂದೂ ಆಯೋಗ ಸಮರ್ಥನೆ ನೀಡಿದೆ.

ಕಾರ್ಮಿಕ ಕಾಯ್ದೆ ಮರು ತಿದ್ದುಪಡಿ

‘ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ತಿದ್ದುಪಡಿ ಮುಖೇನ ಹೆಚ್ಚಿಸಿದ್ದ ಕೆಲಸದ ಅವಧಿಯನ್ನು ಇಳಿಸಲು ಸೂಚಿಸಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕೇಂದ್ರದ ಸೂಚನೆಯಂತೆ ತಿದ್ದುಪಡಿ ಪರಿಷ್ಕರಿಸಿ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಓವರ್‌ ಟೈಂ 125 ದಿನಗಳು ಇದ್ದು, ಅದನ್ನು ಕಡಿಮೆ ಮಾಡುವಂತೆಯೂ ಹೇಳಿದೆ. ಕೇಂದ್ರ ಹಿಂದಕ್ಕೆ ಕಳಿಸಿರುವುದರಿಂದ ಮುಂದಿನ ತಿದ್ದುಪಡಿ ಆಗುವವರೆಗೆ ಕೆಲಸದ ಈ ಹಿಂದಿನಂತೆಯೇ ಇರಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT