ಶುಕ್ರವಾರ, ಮಾರ್ಚ್ 5, 2021
24 °C
ತಪ್ಪು ಮಾಡಿದ ಪಿಡಿಒ, ಅಧ್ಯಕ್ಷ, ಸದಸ್ಯರ ವಿರುದ್ಧವೂ ಕ್ರಮಕ್ಕೆ ಆದೇಶ

ಗ್ರಾ.ಪಂ: ಅಕ್ರಮ ನೇಮಕಾತಿ ರದ್ದತಿಗೆ ಸೂಚನೆ

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪೂರ್ವಾನುಮತಿ ಪಡೆಯದೇ ಸ್ಥಳೀಯವಾಗಿ ನಿರ್ಣಯ ಕೈಗೊಂಡು ಗ್ರಾಮ ಪಂಚಾಯ್ತಿಗಳಿಗೆ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಲ್ಲಿ ಅಂತಹ ನೇಮಕಾತಿ ರದ್ದುಪಡಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಆದೇಶಿಸಿದೆ.

ಗ್ರಾಮ ಪಂಚಾಯ್ತಿಗಳ ಯಾವುದೇ ಹುದ್ದೆಗೆ ಸ್ಥಳೀಯವಾಗಿಯೇ ನೇಮಕ ಮಾಡಿಕೊಳ್ಳುವುದನ್ನು 2018ರ ಮಾರ್ಚ್ 12ರಿಂದ ನಿಷೇಧಿಸಲಾಗಿದೆ. ನಂತರವೂ ಹಲವು ಕಡೆ ನೇಮಕಾತಿ ನಡೆದಿರುವುದು ಗಮನಕ್ಕೆ ಬಂದಿದೆ. ಕೆಲವು ಕಡೆ ಹಳೆ ದಿನಾಂಕ ನಮೂದಿಸಿ ನೇಮಕಾತಿ ಪತ್ರ ನೀಡಲಾಗಿದೆ. ಹೀಗಾಗಿ ಇಲಾಖೆ ಜುಲೈ 23ರಂದು ಈ ಸುತ್ತೋಲೆ ಹೊರಡಿಸಿದೆ.

ಅಕ್ರಮ ನೇಮಕ ಮಾಡಿದ ಪಂಚಾಯ್ತಿ ಪಿಡಿಒ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ವಿರುದ್ಧವೂ ಕ್ರಮ ಕೈಗೊಳ್ಳಲು ಸಿಇಒಗಳಿಗೆ ಸೂಚಿಸಲಾಗಿದೆ. ಬಿಲ್ ಕಲೆಕ್ಟರ್ (ಕರ ವಸೂಲಿಗಾರ), ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್‌ಮನ್, ಸ್ವಚ್ಛತಾ
ಗಾರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಸಿ.ಇ.ಒ ಅನುಮತಿ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಅನುಮೋದನೆಗೆ ಸೂಚನೆ: 2018ರ ಮಾರ್ಚ್ 12ಕ್ಕೆ ಮುನ್ನ ಸಿಇಒ ಪೂರ್ವಾನುಮತಿ ಪಡೆಯದೇ ಸ್ಥಳೀಯವಾಗಿ ನಿರ್ಣಯ ಕೈಗೊಂಡು ನೇಮಕಗೊಂಡಿದ್ದಲ್ಲಿ ಆ ಹುದ್ದೆಗಳಿಗೆ ಅನುಮೋದನೆ ನೀಡುವಂತೆ ಸೂಚಿಸಲಾಗಿದೆ. ಅದಕ್ಕೂ ಮುನ್ನ ಆಯಾ ಗ್ರಾಮ ಪಂಚಾಯ್ತಿಯ ವಾರ್ಷಿಕ ಆದಾಯದಲ್ಲಿ (ಸರ್ಕಾರದ ಅನುದಾನ ಒಳಗೊಂಡಂತೆ) ಸಿಬ್ಬಂದಿ ವೆಚ್ಚ ಶೇ 40ರಷ್ಟು ಮೀರದಿರುವುದನ್ನು ದೃಢೀಕರಿಸಿಕೊಳ್ಳಬೇಕಿದೆ. ಗ್ರಾಮ ಪಂಚಾಯ್ತಿ ಬಿಲ್‌ ಕಲೆಕ್ಟರ್, ಕ್ಲರ್ಕ್‌ ಕಮ್ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ, ಕಂಪ್ಯೂಟರ್ ಜ್ಞಾನ ಹೊಂದಿದವರು, ವಾಟರ್‌ಮನ್‌, ಜವಾನ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಸ್ವಚ್ಛತಾಗಾರ ಹುದ್ದೆಗೆ ಏಳನೇ ತರಗತಿ ತೇರ್ಗಡೆ ಕಡ್ಡಾಯ.

ಈ ವಿದ್ಯಾರ್ಹತೆ ಹೊಂದಿರುವವರ ನೇಮಕಾತಿಗೆ ಮಾತ್ರ ಅನುಮೋದನೆ ನೀಡಲು ಹೇಳಲಾಗಿದೆ. ಅನುಮೋದನೆಗೆ ಅರ್ಹವಾದ ಪ್ರಕರಣಗಳನ್ನು ಜ್ಯೇಷ್ಠತೆ ಆಧಾರದ ಮೇಲೆ ಪಟ್ಟಿ ಮಾಡಿ ಸೆ.15ರೊಳಗೆ ಆಯಾ ಹುದ್ದೆಗಳಿಗೆ ಕಡ್ಡಾಯವಾಗಿ ಅನುಮೋದನೆ ನೀಡಲು ಸಿ.ಇ.ಒಗಳಿಗೆ ಸೂಚಿಸಲಾಗಿದೆ.

ಕೈಗಾರಿಕೆಗಳಿಗೆ ತೆರಿಗೆ; ಹೊಸ ಮಾರ್ಗಸೂಚಿ
ಕೈಗಾರಿಕೆಗಳಿಗೆ ಗ್ರಾಮ ಪಂಚಾಯ್ತಿಗಳು ವಿಧಿಸುತ್ತಿರುವ ತೆರಿಗೆ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಜುಲೈ 24ರಂದು ಹೊಸ ಮಾರ್ಗಸೂಚಿ ಹೊರಡಿಸಿದೆ.

ಕೆಲವು ಗ್ರಾಮ ಪಂಚಾಯ್ತಿಗಳು ನಿಗದಿತ ಪ್ರಮಾಣದ ತೆರಿಗೆ ವಸೂಲಿ ಮಾಡದೇ ತಮ್ಮದೇ ರೀತಿಯಲ್ಲಿ ತೆರಿಗೆ ವಸೂಲಿ ಮಾಡಿ ಕೈಗಾರಿಕೋದ್ಯಮಿಗಳಿಗೆ ತೊಂದರೆ ಕೊಡುತ್ತಿವೆ ಎಂಬ ಆರೋಪ ಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಮುಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ (ಕೆಐಎಡಿಬಿ) ಸಂಬಂಧಿಸಿದ ಕೈಗಾರಿಕಾ ಪ್ರದೇಶದಲ್ಲಿನ ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕವೇ ವಸೂಲಿ ಮಾಡಿ ತಕ್ಷಣವೇ ಗ್ರಾಮ ಪಂಚಾಯ್ತಿ ಖಾತೆಗಳಿಗೆ ಪಾವತಿ ಮಾಡಲಿದೆ.

ಹೊಸ ಮಾರ್ಗಸೂಚಿಯನ್ವಯ ಅತಿ ಸಣ್ಣ ಕೈಗಾರಿಕೆ, ಘಟಕಗಳಿಗೆ ಶೇ 0.4ರಷ್ಟು, ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಶೇ 0.5 ಹಾಗೂ ಬೃಹತ್ ಕೈಗಾರಿಕೆಗಳಿಗೆ ಶೇ 0.6ರಷ್ಟು ಮಾತ್ರ ತೆರಿಗೆ ವಿಧಿಸಬಹುದಾಗಿದೆ.

*
ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ತಮ್ಮವರಿಗೆ ಅವಕಾಶ ಕಲ್ಪಿಸಲು ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ನೇಮಿಸಿಕೊಂಡಿರುವುದು ಕಂಡುಬಂದಿದೆ.
-ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯ್ತಿ ಸಿಇಒ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು