ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರೀನ್‌ ಕಾಫಿ’ ಶೀಘ್ರ ಮಾರುಕಟ್ಟೆಗೆ

ಸಿಎಫ್‌ಟಿಆರ್‌ಐ ತಂತ್ರಜ್ಞಾನ ₹ 5 ಲಕ್ಷಕ್ಕೆ ಖರೀದಿಸಿದ ಬೆಂಗಳೂರು ಮೂಲದ ‘ಸುಬ್ಬೂಸ್ ಕಾಫಿ’
Last Updated 11 ಮೇ 2019, 19:45 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ) ಆವಿಷ್ಕರಿಸಿರುವ ಹಸಿರು ಕಾಫಿ (ಗ್ರೀನ್‌ ಕಾಫಿ) ತಂತ್ರಜ್ಞಾನ ಸಿದ್ಧಗೊಂಡಿದೆ. ಬೆಂಗಳೂರು ಮೂಲದ ‘ಸುಬ್ಬೂಸ್ ಕಾಫಿ’ ಸಂಸ್ಥೆಯು ₹ 5 ಲಕ್ಷಕ್ಕೆ ತಂತ್ರಜ್ಞಾನ ಖರೀದಿಸಿದೆ.

ಒಂದು ತಿಂಗಳ ಹಿಂದೆ ಸಿಎಫ್‌ಟಿಆರ್‌ಐ ಈ ತಂತ್ರಜ್ಞಾನ ಅಭಿವೃದ್ಧಿಯನ್ನು ದೃಢೀಕರಿಸಿದ್ದು, ವಾಣಿಜ್ಯ ಉತ್ಪಾದನೆಗೆ ಪ್ರಮಾಣಪತ್ರವನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಪ್ರಥಮವಾಗಿ ಗ್ರೀನ್‌ ಕಾಫಿ ವಾಣಿಜ್ಯ ಉತ್ಪಾದನೆ ಶೀಘ್ರವೇ ಶುರುವಾಗಲಿದೆ.

ಏನಿದು ಗ್ರೀನ್‌ ಕಾಫಿ

ಗ್ರೀನ್‌ ಟೀ, ಬ್ಲ್ಯಾಕ್‌ ಕಾಫಿ ಬಗ್ಗೆ ಕೇಳಿರಬಹುದು. ಆದರೆ, ಗ್ರೀನ್‌ ಕಾಫಿಯ ಬಗ್ಗೆ ಹೆಚ್ಚು ಮಂದಿ ಕೇಳಿರಲಾರರು. ಇದು ಸಾಮಾನ್ಯ ಕಾಫಿಯಂತೆ, ಪುಡಿಯನ್ನು ಬೇಯಿಸಿ ಪಾನೀಯ ಮಾಡುವಂಥದ್ದಲ್ಲ. ಬದಲಿಗೆ, ಇನ್ನೂ ಹಸಿರಾಗೇ ಇರುವ ಕಾಫಿ ಬೀಜದ ಸಾರಾಂಶವನ್ನು ಸಂಗ್ರಹಿಸಿ, ಅದನ್ನು ಸಂಸ್ಕರಿಸಿ ಸಾಂದ್ರೀಕೃತ ರಸವೊಂದನ್ನು ತಯಾರಿಸಿರಲಾಗುತ್ತದೆ. 100 ಮಿಲಿ ಲೀಟರ್‌ ನೀರಿನೊಂದಿಗೆ 1 ಮಿಲಿ ಲೀಟರ್‌ ಹಸಿರು ಕಾಫಿ ರಸವನ್ನು ಬೆರೆಸಿ ಕುಡಿಯುವುದಷ್ಟೇ.

ಈ ರೀತಿಯ ಪದ್ಧತಿ ಮಲೆನಾಡು ಪ್ರದೇಶದಲ್ಲಿ ಸ್ಥಳೀಯವಾಗಿ ಈಗಾಗಲೇ ಜಾರಿಯಲ್ಲಿದೆ. ಅದಕ್ಕೀಗ ವಿಜ್ಞಾನದ ಲೇಪ ನೀಡಲಾಗಿದೆ. ಸಿಎಫ್‌ಟಿಆರ್‌ಐನ ಸಂಬಾರು ಪದಾರ್ಥ ಹಾಗೂ ಸ್ವಾದ ವಿಭಾಗದ ಹಿರಿಯ ವಿಜ್ಞಾನಿ ಡಾ.ಪುಷ್ಪಾ ಮೂರ್ತಿ, ಸತತ ಮೂರು ವರ್ಷ ಅಧ್ಯಯನ ನಡೆಸಿ ಈ ತಂತ್ರಜ್ಞಾನ ಶೋಧಿಸಿದ್ದಾರೆ.

ಕಾಫಿ ಬೀಜವನ್ನು ಒಣಗಿಸಿ, ಹುರಿದು ಪುಡಿ ಮಾಡಿದರೆ ಅದರಲ್ಲಿನ ಸಾಕಷ್ಟು ಜೀವಪೋಷಕ ಅಂಶಗಳು ನಾಶವಾಗುತ್ತವೆ. ‘ಕೆಫೀನ್‌’ (Caffeine) ಮಾತ್ರ ಉಳಿದಿರುತ್ತದೆ. ಹಾಗಾಗಿ, ಕಾಫಿಯ ಔಷಧೀಯ ಗುಣಗಳು ಕ್ಷೀಣಿಸುತ್ತದೆ. ಈ ವಿಚಾರ ತಿಳಿದಿರುವ ಸ್ಥಳೀಯರು ಕಾಫಿ ಬೀಜಗಳನ್ನು ಒಣಗಿಸದೇ, ಅದರ ರಸವನ್ನು ತೆಗೆದು ಔಷಧಿಯಾಗಿ ಬಳಸುತ್ತಿದ್ದಾರೆ. ಹಸಿರು ಕಾಫಿಯಲ್ಲಿ ‘ಕ್ಲೋರೊಜೆನಿಕ್ ಆಸಿಡ್’ (Chlorogenic Acid) ಹೆಚ್ಚಿರುತ್ತದೆ. ಬೀಜವನ್ನು ಹುರಿದಾಗ ಇದು ನಾಶವಾಗುತ್ತದೆ.

‘ಈ ರಾಸಾಯನಿಕವು ದೇಹದ ಬೊಜ್ಜನ್ನು ಕರಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ. ಡೊಳ್ಳು ಹೊಟ್ಟೆ ಕರಗಿಸುವಲ್ಲಿ ಇದರ ಪಾತ್ರ ಹಿರಿದು. ಹಾಗಾಗಿ, ನಾವು ಹಸಿರು ಕಾಫಿ ತಯಾರಿಸಿದ್ದೇವೆ. ಇದರಿಂದ ಕಾಫಿ ಔಷಧಿಯಾಗಿಯೂ ಬಳಕೆಯಾಗಲಿದೆ’ ಎಂದು ಡಾ.ಪುಷ್ಪಾ ‘ಪ್ರಜಾವಾಣಿ’ಗೆ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT