ಆಸ್ತಿ ನೋಂದಣಿ: ಮಾರ್ಗಸೂಚಿ ದರ ಶೇ 25ರಷ್ಟು ಹೆಚ್ಚಳ

7

ಆಸ್ತಿ ನೋಂದಣಿ: ಮಾರ್ಗಸೂಚಿ ದರ ಶೇ 25ರಷ್ಟು ಹೆಚ್ಚಳ

Published:
Updated:

ಬೆಂಗಳೂರು: ಮೂರು ವರ್ಷಗಳ ಬಳಿಕ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ 5ರಿಂದ ಶೇ 25ರವರೆಗೆ ಹೆಚ್ಚಿಸಲಾಗಿದ್ದು ಪರಿಷ್ಕೃತ ದರ ಸೋಮವಾರದಿಂದಲೇ ಜಾರಿಗೆ ಬಂದಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕರಡು ದರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ಬಳಿಕ ದರ ಪರಿಷ್ಕರಿಸಲಾಗಿದೆ. ಪರಿಷ್ಕೃತ ದರವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ’ಪ್ರಜಾವಾಣಿ‘ಗೆ ತಿಳಿಸಿದರು.

ಜಯನಗರದ 11ನೇ ಮುಖ್ಯ ರಸ್ತೆ 4ನೇ ಹಂತದಲ್ಲಿನ ವಾಣಿಜ್ಯ ನಿವೇಶನದ ದರವನ್ನು ಪ್ರತಿ ಚದರ ಮೀಟರ್‌ಗೆ ರೂ 4,57,400ಕ್ಕೆ ನಿಗದಿ ಮಾಡಲಾಗಿದೆ. ಎರಡನೇ ಹೆಚ್ಚು ಮೌಲ್ಯ ಹೊಂದಿದ ನಿವೇಶನ ಗಾಂಧಿನಗರ ವ್ಯಾಪ್ತಿಯ ಒಟಿಸಿ ರಸ್ತೆಯಲ್ಲಿದೆ. ಇದರ
ಮೌಲ್ಯ  ಪ್ರತಿ ಚದರ ಮೀಟರ್‌ಗೆ ರೂ 3,44,500 ಆಗಿದೆ.

ವಸತಿ ವಿಭಾಗದಲ್ಲಿ ಕಡಿಮೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಜಯನಗರ ವಲಯದಲ್ಲಿದೆ. ಇದರ ಮೌಲ್ಯ ಇವಿಡಬ್ಲ್ಯೂ ನಿವೇಶನಕ್ಕೆ ₹900. ಎರಡನೆಯ ಕಡಿಮೆ ಮೌಲ್ಯ ರೂ 1,800 ಆಗಿದೆ. ಇದು ಬಸವನಗುಡಿ ವಲಯ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿದೆ.

‘ಕೆಲವೊಂದು ಪ್ರದೇಶಗಳಲ್ಲಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನು ಕೆಲವು ಕಡೆ ಸ್ಥಿರವಾಗಿದೆ. ಬೇಡಿಕೆ ಮತ್ತು ಅಭಿವೃದ್ಧಿ ಬೆಳವಣಿಗೆಯ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗಿದೆ’ ಎಂದು ಆಯುಕ್ತರು ಹೇಳಿದರು.

‘2016ರ ಮಾರ್ಚ್‌ ತಿಂಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಲಾಗಿತ್ತು. ಎರಡು ವರ್ಷಗಳಿಂದ ಹೆಚ್ಚಳ ಮಾಡಿರಲಿಲ್ಲ. ಈ ಸಲ ಬಜೆಟ್‌ನಲ್ಲಿ ನೀಡಿರುವ ಗುರಿಗೂ ಇಲಾಖೆಯ ರಾಜಸ್ವ ಸಂಗ್ರಹಕ್ಕೂ ಶೇ 15ರಷ್ಟು ವ್ಯತ್ಯಾಸ ಇದೆ. ಹೀಗಾಗಿ, ದರ ಪರಿಷ್ಕರಣೆ ಅನಿವಾರ್ಯವಾಯಿತು’ ಎಂದು ತಿಳಿಸಿದರು.

‘ಕೆಲವು ಕಡೆಗಳಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರದ ನಡುವೆ ಭಾರಿ ಅಂತರ ಇರುವುದು ನೋಂದಣಿ ವಹಿವಾಟು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಇಂತಹ ಲೋಪಗಳನ್ನು ಸರಿಪಡಿಸುವುದಕ್ಕೆ ಈ ಬಾರಿಯ ಪರಿಷ್ಕರಣೆಯಲ್ಲಿ ಆದ್ಯತೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !