ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಬೆತ್ತಲೆ ಪ್ರಕರಣ ನಿರ್ವಹಿಸುವಲ್ಲಿ ಎಡವಿದರೇ ಪೊಲೀಸರು?

ಘಟನೆ ನಡೆದ ದಿನ ಸಂಧಾನ ಮಾಡಿಸಿದ್ದ ಪೊಲೀಸರು
Last Updated 15 ಜೂನ್ 2019, 16:42 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ಜೂನ್‌ 3ರಂದು ಪ್ರತಾಪ್‌ ಅವರ ಮೇಲೆ ನಡೆದ ಹಲ್ಲೆ ಹಾಗೂ ಬೆತ್ತಲೆ ಪ್ರಕರಣವನ್ನು ಪೊಲೀಸರು ನಿರ್ವಹಿಸಿದ ರೀತಿಯ ಬಗೆಗೆ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.

ಪ್ರತಾಪ್‌ ಅವರನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದ ಬಗ್ಗೆ ಮಾಹಿತಿ ಇದ್ದರೂ, ಮೊದಲ ದಿನವೇ ಈ ಪ್ರಕರಣವನ್ನು ಪೊಲೀಸರಿಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ದೇವಸ್ಥಾನದಿಂದ ಪ್ರತಾಪ್‌ ಅವರನ್ನು ಠಾಣೆಗೆ ಕರೆತಂದ ನಂತರ, ಅವರ ಕುಟುಂಬದ ಸದಸ್ಯರು ಹಾಗೂದೇವಸ್ಥಾನ ಆಡಳಿತ ಮಂಡಳಿಯವರ ನಡುವೆ ಮಧ್ಯಸ್ಥಿಕೆ ವಹಿಸಿ ದೂರು ದಾಖಲಾಗದಂತೆ ನೋಡಿಕೊಂಡಿದ್ದರು ಎಂದೂ ಆರೋಪಿಸಲಾಗುತ್ತಿದೆ.

ಮರಕ್ಕೆ ಕಟ್ಟಿ ಹೊಡೆಯುತ್ತಿರುವ, ಪೊಲೀಸ್‌ ಸಿಬ್ಬಂದಿ ಪ್ರತಾಪ್‌ ಅವರನ್ನು ವಾಹನದ ಬಳಿಗೆ ಕರೆದೊಯ್ಯುತ್ತಿರುವ, ವಿವಸ್ತ್ರರಾಗಿದ್ದ ಅವರನ್ನು ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ ತುಣುಕು ಜೂನ್‌ 10ರಂದು ವೈರಲ್‌ ಆಗುತ್ತಲೇ ಪ್ರಕರಣ ಗಂಭೀರವಾಯಿತು.

ಜೂನ್‌ 3ರಂದು ಬೆಳಿಗ್ಗೆ 6.45ರ ಹೊತ್ತಿಗೆ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವರು ತಕ್ಷಣ ಬಂದಿರಲಿಲ್ಲ. ಪ್ರಕರಣ ನಡೆದ ದಿನವೇ ಪೊಲೀಸರು ಕ್ಷಿಪ್ರವಾಗಿ ಕ್ರಮ ಕೈಗೊಂಡಿದ್ದರೆ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರಲಿಲ್ಲ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಪ್ರತಾಪ್‌ ದೇವಸ್ಥಾನದ ಆವರಣಕ್ಕೆ ಬಂದಿದ್ದನ್ನು ಕಂಡಿದ್ದಾಗಿ ಸ್ಥಳೀಯರೊಬ್ಬರು ಹೇಳಿದ್ದು, ಈ ಸಂದರ್ಭದಲ್ಲಿ ಅರ್ಚಕ ಶಿವಪ್ಪ ಮತ್ತು ಅವರು ಮಾತ್ರ ಅಲ್ಲಿದ್ದರು ಎಂದು ತಿಳಿಸಿದರು.

ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅವರು, ‘ದೇವಸ್ಥಾನಕ್ಕೆ ಬೆಳಿಗ್ಗೆ ಹೋಗಿದ್ದಾಗ ಪ್ರತಾಪ್‌ ಇದ್ದರು. ಮೈಮೇಲೆ ಬಟ್ಟೆ ಇರಲಿಲ್ಲ. ಕುಡಿಯಲು ನೀರು ಕೇಳಿದರು. ಕೊಟ್ಟೆವು. ನಂತರ ಏಕಾಏಕಿ ದೇವಸ್ಥಾನಕ್ಕೆ ನುಗ್ಗಿ ಅರ್ಚಕ ಶಿವಪ್ಪ ಅವರನ್ನು ತಳ್ಳಿ, ಮೂರ್ತಿಗಳನ್ನು ದ್ವಂಸಕ್ಕೆ ಮುಂದಾದರು. ತಕ್ಷಣ ನಾನು ಮತ್ತು ಶಿವಪ್ಪ ಠಾಣೆಗೆ ಹೋಗಿ ಪೊಲೀಸರಿಗೆ ತಿಳಿಸಿದೆವು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸ್ವಾಮಿಗೌಡ ಅವರು ದೇವಸ್ಥಾನಕ್ಕೆ ಹೋಗಿ ಪೊಲೀಸರಿಗೆ ಕರೆ ಮಾಡಿದ ನಂತರ, 8.15ರ ವೇಳೆಗೆ ಹೆದ್ದಾರಿ ಗಸ್ತು ಸಿಬ್ಬಂದಿಯೊಬ್ಬರು ವಾಹನದಲ್ಲಿ ಬಂದಿದ್ದರು.

ಮತ್ತೆ ಎಡವಿದ‍ಪೊಲೀಸರು:

ವಿಡಿ‌ಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ನಂತರ ಪ್ರತಾಪ್‌ ಸಂಬಂಧಿ ಕಾಂತರಾಜು ಹಾಗೂ ಇನ್ನಿತರರು 6ನೇ ತಾರೀಖಿನಂದು ಗುಂಡ್ಲುಪೇಟೆ ಠಾಣೆಗೆ ಹೋಗಿ, ಪೊಲೀಸರಿಗೆ ವಿಡಿಯೊಗಳನ್ನು ತೋರಿಸಿ ಪ್ರತಾಪ್‌ ವಿರುದ್ಧ ಜನರು ತೋರಿದ ವರ್ತನೆ ಬಗ್ಗೆ ತಿಳಿಸಿದ್ದರು.

‘ಆಗಲೂ ಪೊಲೀಸರು ದೂರು ಸ್ವೀಕರಿಸಲಿಲ್ಲ. ಅವರನ್ನು ಕರೆದು ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿ, ಪ್ರತಾಪ್‌ ತಪ್ಪು ಮಾಡಿದ್ದಾನೆ ಎಂಬರ್ಥದಲ್ಲಿ ಮಾತನಾಡಿದರು’ ಎಂಬುದು ಕಾಂತರಾಜು ಅವರ ಆರೋಪ.

ಮರುದಿನ, ಅಂದರೆ ಜೂನ್‌ 7ರಂದು ಸ್ವಾಮಿಗೌಡ ಅವರು ನೀಡಿದ ದೂರನ್ನು ಪೊಲೀಸರು ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT