ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಯಶಸ್ವಿನಿ: ಆಪತ್ತಿಗಿಲ್ಲ ಆರೋಗ್ಯ ಭಾಗ್ಯ

ಬಡವರಿಗೆ ಉಚಿತ ಚಿಕಿತ್ಸೆ ಎಂಬುದು ಗಗನಕುಸುಮ
Last Updated 13 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಎಚ್‌1ಎನ್‌1, ಡೆಂಗಿ ಮೊದಲಾದ ಕಾಯಿಲೆಗಳಿಗೆ ತುತ್ತಾದ ಬಡ– ಮಧ್ಯಮ ವರ್ಗದ ರೋಗಿಗಳಿಗೆ ರಾಜ್ಯದ ಖಾಸಗಿ ‘ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ಎಲ್ಲರಿಗೂ ಸಿಗಬೇಕಾದ ‘ಆರೋಗ್ಯ ಭಾಗ್ಯ’ವೇ ಈಗ ಅನಾರೋಗ್ಯಕ್ಕೆ ತುತ್ತಾಗಿದೆ.

ರೋಗಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಉಚಿತ ಚಿಕಿತ್ಸೆಯ ಭರವಸೆಯಿಂದ ‘ಆರೋಗ್ಯ ಕರ್ನಾಟಕ ಕಾರ್ಡ್‌’ ಹಿಡಿದುಹೋದರೆ ಈ ಆಸ್ಪತ್ರೆಗಳಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ‘ಕಾಸಿದ್ದರೆ ಬನ್ನಿ, ಕಾರ್ಡಿದ್ದರೆ ಹೋಗಿ’ ಎಂದು ಆಸ್ಪತ್ರೆಗಳು ನಿರ್ದಯೆ–ನಿರ್ದಾಕ್ಷಿಣ್ಯದಿಂದ ಹೇಳುತ್ತವೆ.

‘ಆರೋಗ್ಯ ಕರ್ನಾಟಕ’ ಕಾರ್ಡ್‌ ಬದಿಗಿಟ್ಟು, ಲಕ್ಷ ಲಕ್ಷ ಹಣ ತರುವ ಸಾಮರ್ಥ್ಯವಿದ್ದರಷ್ಟೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ಒಳಗೆ ಬಿಟ್ಟುಕೊಳ್ಳುವ ಪರಿಸ್ಥಿತಿ ಇದೆ. ಬಡ ರೋಗಿಗಳು ಜೀವ ಉಳಿಸಿಕೊಳ್ಳಬೇಕಿದ್ದರೆ, ಮನೆ– ಮಠ ಅಡವಿಡುವ ಸ್ಥಿತಿ ನಿರ್ಮಾಣವಾಗಿದೆ.

‘ಎಲ್ಲ ಬಡ ರೋಗಿಗಳಿಗೂ ಮಲ್ಟಿ ಸ್ಪೆಷಾಲಿಟಿ ದರ್ಜೆಯ ಆರೋಗ್ಯ ಒದಗಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ರೋಗಿಗಳು ದೂರುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಎಚ್‌1ಎನ್‌1 ಬಾಧಿತ ರೋಗಿಗಳ ಸಂಬಂಧಿಗಳು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಗ್ಗೆ ಆತಂಕ ಮತ್ತು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರದ ರಾಜೇಂದ್ರ ಎಂಬುವವರು ಇತ್ತೀಚೆಗೆ ಜ್ವರಕ್ಕೆ ತುತ್ತಾದರು. ಅದು ಉಲ್ಬಣವಾಗುವವರೆಗೆ ಇದ್ಯಾವ ಕಾಯಿಲೆ ಎಂಬ ಅರಿವೇ ಅವರಿಗೆ ಇರಲಿಲ್ಲ. ಎರಡೇ ದಿನಗಳಲ್ಲಿ ಜ್ವರ ಗಂಭೀರ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಒಯ್ದರು. ಅಲ್ಲಿ ಅದು ಎಚ್‌1ಎನ್‌1 ಎಂಬುದು ಗೊತ್ತಾಯಿತು. ಎರಡು ದಿನಗಳ ಚಿಕಿತ್ಸೆ ಬಿಲ್‌ ₹ 2 ಲಕ್ಷ ದಾಟಿತ್ತು. ಆದರೆ, ‘ಆರೋಗ್ಯ ಕರ್ನಾಟಕ ಕಾರ್ಡ್‌’ ಸ್ವೀಕರಿಸುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಸ್ಪಷ್ಟವಾಗೇ ಹೇಳಿದರು.

ಮತ್ತೊಂದು ಪ್ರಕರಣದಲ್ಲಿ ಬಡ ಅರ್ಚಕರೊಬ್ಬರು ಎಚ್1ಎನ್‌1ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಉಲ್ಬಣಿಸುವವರೆಗೆ ಅದು ಎಚ್‌1ಎನ್‌1 ಎಂಬುದು ಅವರಿಗೂ ಗೊತ್ತಿರಲಿಲ್ಲ. ಹೆಂಡತಿ– ಮಕ್ಕಳಿಗೆ ದಿಕ್ಕೇ ತೋಚದ ಸ್ಥಿತಿ. ಏಕಾಏಕಿ ಜ್ವರ ಏರಿ ಪ್ರಜ್ಞಾಹೀನರಾಗಿದ್ದ ಕಾರಣ ಮೊದಲಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಒಯ್ದರು. ಅಲ್ಲಿ ದುಬಾರಿ ಶುಲ್ಕ ತೆತ್ತರೂ ಪ್ರಯೋಜನ ಆಗಲಿಲ್ಲ. ಬಳಿಕ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ‘ಆರೋಗ್ಯ ಕಾರ್ಡ್‌’ ಸ್ವೀಕರಿಸುವುದಿಲ್ಲ ಎಂದರು. ಪ್ರಾಣಉಳಿಸಿಕೊಳ್ಳಬೇಕಾದ ಕಾರಣ ಅದೇ ಆಸ್ಪತ್ರೆಯಲ್ಲಿ ದಾಖಲಿಸಿದರು. ₹1.75 ಲಕ್ಷ ಬಿಲ್‌ ಬಂದಿತು. ಮೊದಲು ಸೇರಿಸಿದ್ದ ಆಸ್ಪತ್ರೆಯಲ್ಲಿ ₹1.50 ಲಕ್ಷ ಬಿಲ್‌ ಪಾವತಿಸಿದ್ದರು. ಇಷ್ಟಾದರೂ ಆರೋಗ್ಯ ಸುಧಾರಿಸುತ್ತಿಲ್ಲ. ಪತ್ನಿ ಮತ್ತು ಮಕ್ಕಳು ಆತಂಕದಲ್ಲಿದಿನದೂಡುತ್ತಿದ್ದಾರೆ.

ಆಪತ್ಕಾಲಕ್ಕೆ ಒದಗದ ಕಾರ್ಡ್‌

ದಿಢೀರನೇ ಅನಾರೋಗ್ಯಗಳಿಗೆ ತುತ್ತಾಗಿ ಜೀವಕ್ಕೆ ಕುತ್ತು ಬಂದಾಗ ‘ಆರೋಗ್ಯ ಕರ್ನಾಟಕ ಕಾರ್ಡ್‌’ ರೋಗಿಗಳಿಗೆ ಪ್ರಯೋಜನಕ್ಕೆ ಬರುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಕಾಯಿಲೆ ಲಕ್ಷಣಗಳೇ ಗೊತ್ತಾಗದಿರುವಾಗ ಸಹಜವಾಗಿ ಸಂಬಂಧಿಕರು ಸಮೀಪದ ಹೆಸರಾಂತ ಆಸ್ಪತ್ರೆಗಳಿಗೆ ಒಯ್ಯುತ್ತಾರೆ. ಆದರೆ, ಅಲ್ಲಿ ಆರೋಗ್ಯ ಕಾರ್ಡ್‌ಗಳನ್ನು ಸ್ವೀಕರಿಸುತ್ತಿಲ್ಲ.

ಸರ್ಕಾರದ ಪಟ್ಟಿಯಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಸೇರಿಲ್ಲ. ಈ ಆಸ್ಪತ್ರೆಗಳು ಕಾರ್ಡ್‌ಗಳನ್ನು ಸ್ವೀಕರಿಸಲು ನಿರಾಕರಿಸುತ್ತಿವೆ.ಇನ್ನು ಕೆಲವು ಆಸ್ಪತ್ರೆಗಳಲ್ಲಿ ಎಚ್‌1ಎನ್‌1 ಪೀಡಿತ ರೋಗಿಗಳನ್ನು ಸೇರಿಸಿಕೊಳ್ಳುವುದಿಲ್ಲ. ಒಂದು ವೇಳೆ ರೋಗಿ ಸಾವಿಗೀಡಾದರೆ, ಅದರ ಹೊಣೆ ಆಸ್ಪತ್ರೆಯ ತಲೆಗೆ ಸುತ್ತಿಕೊಳ್ಳುತ್ತದೆ ಎಂಬುದು ಪ್ರಮುಖ ಕಾರಣ.

ಈ ಹಿಂದೆ ಇದ್ದ ‘ಯಶಸ್ವಿನಿ’ ಕಾರ್ಡ್‌ ಅನ್ನು ಎಲ್ಲ ಆಸ್ಪತ್ರೆಗಳಲ್ಲೂ ಸ್ವೀಕರಿಸಲಾಗುತ್ತಿತ್ತು. ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಬಡವರಿಗೆ ಹೆಚ್ಚು ಅನುಕೂಲಕರವಾಗಿತ್ತು ಎಂಬುದು ಆರೋಗ್ಯ ಕರ್ನಾಟಕ ಕಾರ್ಡ್‌ ಬಳಕೆದಾರರ ಅಭಿಮತ.

ಎಚ್‌1ಎನ್‌1 ಸರ್ಕಾರದ ನಿಯಮವೇನು

ಆರೋಗ್ಯ ಕರ್ನಾಟಕ ಕಾರ್ಡ್‌ ನಿಯಮದ ಪ್ರಕಾರ ಎಚ್‌1ಎನ್1 ಪೀಡಿತರು ಮೊದಲಿಗೆ ಜಿಲ್ಲಾ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಅಲ್ಲಿ ಸೌಲಭ್ಯವಿಲ್ಲದಿದ್ದರೆ, ಜಿಲ್ಲಾ ಆರೋಗ್ಯಾಧಿಕಾರಿ ಬರೆದು ಕೊಡುವ ಖಾಸಗಿ ಆಸ್ಪತ್ರೆಗೆ ದಾಖಲಿಸಬಹುದು.

ಆದರೆ, ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಎಚ್‌1ಎನ್‌1 ಬಗ್ಗೆ ಅರಿವು ಇರುವುದಿಲ್ಲ. ಆರಂಭದಲ್ಲಿ ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಕಾಯಿಲೆ 2 ಅಥವಾ 3 ನೇ ಹಂತಕ್ಕೆ ತಲುಪಿದಾಗ, ಆಸ್ಪತ್ರೆಯತ್ತ ದೌಡಾಯಿಸುತ್ತಾರೆ.

ಮೊದಲ ಹಂತದಲ್ಲಿ ನೆಗಡಿ, ಶೀತ, ಜ್ವರ ಇತ್ಯಾದಿ ಇರುತ್ತದೆ. ಎಚ್‌1ಎನ್‌1 ಜ್ವರ ಇದೆಯೇ ಎಂಬುದನ್ನು ಪರೀಕ್ಷೆ ನಡೆಸಿ, ಅದನ್ನು ಖಚಿತಪಡಿಸಲು ಸಣ್ಣ– ಪುಟ್ಟ ನಗರಗಳಲ್ಲಿ ಕನಿಷ್ಠ 2 ದಿನಗಳಾದರೂ ಬೇಕಾಗುತ್ತದೆ. ಒಮ್ಮೆ ಎಚ್‌1ಎನ್‌1 ಎಂಬುದು ಖಚಿತವಾದ ಬಳಿಕ ಟಾಮಿಫ್ಲೂ ಔಷಧ ನೀಡಿ ಚಿಕಿತ್ಸೆ ನೀಡಲಾಗುತ್ತದೆ.

ವೈರಾಣು ಪರೀಕ್ಷೆಗೆ ವೆಚ್ಚ ₹2,000 ಆದರೆ, ಟಾಮಿಫ್ಲೂ ಔಷಧಕ್ಕೆ ₹ 200 ಆಗುತ್ತದೆ ಎನ್ನುತ್ತವೆ ಆರೋಗ್ಯ ಇಲಾಖೆ ಮೂಲಗಳು.

ಶ್ವಾಸಕೋಶ ಸೋಂಕಿಗೆ ಸಿಲುಕಿ ಕಫ ಕಟ್ಟುವುದರಿಂದ ಉಸಿರಾಟ ಕಷ್ಟವಾಗುತ್ತದೆ. ಇದಕ್ಕೆ ವೆಂಟಿಲೇಟರ್‌ ಅತ್ಯಗತ್ಯ. ಇದು ಸೋಂಕು ರೋಗವಾಗಿರುವುದರಿಂದ ರೋಗಿಯನ್ನು ಪ್ರತ್ಯೇಕಿಸಿ ಇಡಬೇಕಾಗುತ್ತದೆ.

* ಎಚ್‌1ಎನ್‌1 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಿಲ್ಲ. ಖಾಸಗಿಯವರು ಇಂತಹ ಪ್ರಕರಣಗಳಲ್ಲಿ ರಿಸ್ಕ್‌ ತೆಗೆದುಕೊಳ್ಳಲು ಬಯಸುವುದಿಲ್ಲ

ಡಾ.ರಾಜಶೇಖರ ಬಳ್ಳಾರಿ,ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಸ್ಥೆ

ಮುಖ್ಯಾಂಶಗಳು

* ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಲಭ್ಯ

* ಜಿಲ್ಲಾ ಆಸ್ಪತ್ರೆಗಳ ಶಿಫಾರಸು ಇದ್ದರಷ್ಟೇ, ಖಾಸಗಿಯಲ್ಲಿ ಚಿಕಿತ್ಸೆ

* ದಿಢೀರ್‌ ಅನಾರೋಗ್ಯಕ್ಕೆ ಕಾರ್ಡ್‌ನಿಂದ ಸಿಗದು ಪರಿಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT