ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕು: ಬಾಣಂತಿ ಸಾವು; ಎಚ್‌1ಎನ್‌1 ಶಂಕೆ

7

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕು: ಬಾಣಂತಿ ಸಾವು; ಎಚ್‌1ಎನ್‌1 ಶಂಕೆ

Published:
Updated:

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಗ್ರಾಮದ ಬಾಣಂತಿಯೊಬ್ಬರು ಪಕ್ಕದ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಎಚ್‌1ಎನ್‌1 ಪೀಡಿತರಾಗಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.

ಕಳೆದ ತಿಂಗಳಿನ ಕೊನೆಯ ವಾರದಲ್ಲಿ ಬಾಣಂತಿಯು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿಗೆ ಜನ್ಮ ನೀಡಿದ ಒಂದೆರಡು ದಿನಗಳ ನಂತರ ತೀವ್ರ ಕೆಮ್ಮು, ನೆಗಡಿಗೆ ಒಳಗಾದರು. ಜ್ವರ ಕೂಡ ಬಾಧಿಸತೊಡಗಿತು. ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಹಾಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಮರಣ ಹೊಂದಿದರು.

‘ಮೃತ ಮಹಿಳೆಗೆ ಎಚ್‌1ಎನ್‌1 ಸೋಂಕು ತಗುಲಿತ್ತು ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆದರೆ, ಅವರು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಾನದಂಡ ಪ್ರಕಾರ ಪರೀಕ್ಷೆ ಮಾಡಿಲ್ಲ. ಹೀಗಾಗಿ ಮಹಿಳೆಯ ಸಾವು ಎಚ್‌1ಎನ್‌1ನಿಂದಲೇ ಬಂದಿದೆ ಎಂದು ಈಗಲೇ ಅಧಿಕೃತವಾಗಿ ಹೇಳಲು ಸಾಧ್ಯವಾಗುವುದಿಲ್ಲ’ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ ತಿಳಿಸಿದರು.

‘ಖಾಸಗಿ ಆಸ್ಪತ್ರೆ ಸಂಗ್ರಹಿಸಿದ್ದ ಮಹಿಳೆಯ ಕಫ್‌ದ ಮಾದರಿಯನ್ನು ನಾವು ಡಬ್ಲುಎಚ್‌ಒ ಮಾನದಂಡದ ಪ್ರಕಾರ ಪರೀಕ್ಷೆಗೆ ಒಳಪಡಿಸುತ್ತೇವೆ. ಆ ನಂತರವಷ್ಟೇ ನಿಖರವಾಗಿ ಹೇಳಲು ಸಾಧ್ಯ’ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ 113 ಜನ ಶಂಕಿತರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದೇವು. ಅದರಲ್ಲಿ 23 ಜನರಲ್ಲಿ ಎಚ್‌1ಎನ್‌1 ಸೋಂಕು ದೃಢಪಟ್ಟಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !