ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ: ಅಮಿತ್ ಶಾ

Last Updated 27 ಮಾರ್ಚ್ 2018, 6:46 IST
ಅಕ್ಷರ ಗಾತ್ರ

ಶಿವಮೊಗ್ಗ: ಒಂದು ಕಾಲದಲ್ಲಿ ಬಿಜೆಪಿಯ ಭದ್ರಕೋಟೆಯಂತಿದ್ದ ಶಿವಮೊಗ್ಗದಲ್ಲಿ ಮತ್ತೆ ಕೇಸರಿ ಪತಾಕೆ ಹಾರಿಸುವ ಪ್ರತಿಜ್ಞೆಯನ್ನು ನಾಯಕರಿಗೆ, ಕಾರ್ಯಕರ್ತರಿಗೆ ಬೋಧಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬರಲಿರುವ ಚುನಾವಣೆಯಲ್ಲಿ ಹಿಂದುತ್ವವೇ ತಮ್ಮ ಕಾರ್ಯಸೂಚಿ ಎಂದು ಪ್ರತಿಪಾದಿಸಿದರು.

‘ಕರುನಾಡು ಜಾಗೃತಿ ಯಾತ್ರೆ’ ಅಂಗವಾಗಿ ಸೋಮವಾರ ರೋಡ್ ಶೋ ನಡೆಸಿದ ಬಳಿಕ ಗೋಪಿ ಸರ್ಕಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸಂಘಪರಿವಾರದ 20ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.  ಈ ಪರಿಸ್ಥಿತಿ ಬದಲಾಗಬೇಕಾದರೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪುನರುಚ್ಚರಿಸಿದರು.

ಮೊದಲು ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ ಮತ್ತು ವಾತಾವರಣ ಇತ್ತು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡುವ ಸುನಾಮಿ ಎದ್ದಿದೆ. ಬಿಜೆಪಿ ಗೆಲ್ಲಿಸುವ ಸಂಕಲ್ಪ ಮಾಡುವುದರ ಜತೆಗೆ, ಕಾಂಗ್ರೆಸ್‌ ಅನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ. ಅಂತಹ ಭರವಸೆಯನ್ನು ಕೊಡಿ ಎಂದು ಕಾರ್ಯಕರ್ತರಲ್ಲಿ ಕೋರಿದರು.

ಹಿಂದುತ್ವದ ಕಾರ್ಯಸೂಚಿ: ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ ವೇಳೆ ಹಿಂದುತ್ವದ ಕಾರ್ಯಸೂಚಿಯನ್ನು ಪ್ರತಿಪಾದಿಸಿ, ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಸಂಘ ಪರಿವಾರದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ್ದ ಅಮಿತ್ ಶಾ, ಶಿವಮೊಗ್ಗದಲ್ಲೂ ಅದನ್ನು ಮುಂದುವರಿಸಿದರು. ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ತೀರ್ಥಹಳ್ಳಿಯ ನಂದಿತಾ ಮನೆಗೆ ಭೇಟಿ ನೀಡಿದ ಶಾ, ಅವರ ಕುಟುಂಬಕ್ಕೆ  ಸಾಂತ್ವನ ಹೇಳಿದರು.

ಶಿವಮೊಗ್ಗದಲ್ಲಿ ಕೊಲೆಗೀಡಾಗಿದ್ದ ಸಂಘ ಪರಿವಾರದ ಕಾರ್ಯಕರ್ತ ವಿಶ್ವನಾಥ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾ,  ‘ಇದೇ ನೆಲದಲ್ಲಿ ಪಿಎಫ್‌ಐ ಕಾರ್ಯಕರ್ತರು ವಿಶ್ವನಾಥನನ್ನು ಕೊಲೆ ಮಾಡಿದ್ದರು. ಹಿಂದೂವಿನ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಸಂಕಲ್ಪ ಮಾಡೋಣ’ ಎಂದೂ ಕರೆ ನೀಡಿದರು.

ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ರೋಡ್ ಶೋ ಆರಂಭಿಸುವ ಮುನ್ನ ಅಲ್ಲಿನ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಾರ್ಗ ಮಧ್ಯೆ ಗಾಂಧಿ ಬಜಾರ್‌ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದರು. ಅದಾದ ಬಳಿಕ ಬಿ.ಎಚ್‌. ರಸ್ತೆಯಲ್ಲಿರುವ ಕೆಳದಿಯ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಮಠಾಧೀಶರ ಜತೆ ಚರ್ಚೆ: ಸಮಾವೇಶ ಮುಗಿದ ಬಳಿಕ 36ಕ್ಕೂ ಹೆಚ್ಚು ಮಠಾಧೀಶರ ಜತೆಗೆ ಅಮಿತ್‌ ಶಾ ಸಮಾಲೋಚನೆ ನಡೆಸಿದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ, ಬಿಳಕಿ ಮಠದ ರಾಚೋಟೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಏನು ಮಾಡಬೇಕು ಎಂದು ಸ್ವಾಮೀಜಿ ಅವರನ್ನು ಕೇಳಿದ ಶಾ, ಅವರಿಂದ ಸಲಹೆ ಪಡೆದರು.

ಕೇಸರಿ ರಂಗು: ಕಾರ್ಯಕರ್ತರಲ್ಲಿ ಅಮಿತೋತ್ಸಾಹ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಧ್ಯದ ಭಿನ್ನಮತದಿಂದಾಗಿ ಜಿಲ್ಲೆಯ ಕಾರ್ಯಕರ್ತರಲ್ಲಿ ಒಂದು ವರ್ಷದಿಂದ ಗೊಂದಲ ಮೂಡಿತ್ತು. ಈ ಇಬ್ಬರು ನಾಯಕರನ್ನು ಎಡ–ಬಲಕ್ಕೆ ನಿಲ್ಲಿಸಿಕೊಂಡು ರೋಡ್ ಶೋ ನಡೆಸಿದ ಶಾ, ನಾಯಕರ ಮಧ್ಯೆ ಒಗ್ಗಟ್ಟು ಮೂಡಿಸುವ ಯತ್ನವನ್ನೂ ಮಾಡಿದರು.

ಎರಡೂವರೆ ಗಂಟೆ ವಿಳಂಬವಾಗಿ ರೋಡ್ ಶೋ ಆರಂಭವಾದರೂ ಇಲ್ಲಿನ ಮಾರುಕಟ್ಟೆ ಪ್ರದೇಶವಾದ ಗಾಂಧಿ ಬಜಾರ್‌ ನ ಎರಡೂ ಕಡೆಗಳಲ್ಲಿ ನಿಂತಿದ್ದ ಸಾವಿರಾರು ಜನರು,  ‘ಮೋದಿ ಮೋದಿ, ಬಿಜೆಪಿಗೆ ಜಯವಾಗಲಿ’ ಎಂದು ಘೋಷಣೆ ಕೂಗುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿರುವ ಮನೆಯ ಮಹಡಿಯಲ್ಲಿ ನಿಂತ ಮಹಿಳೆಯರು, ಮಕ್ಕಳು ಹೂವುಗಳನ್ನು ನಾಯಕರ ಮೇಲೆ ತೂರಿ ಹರ್ಷ ವ್ಯಕ್ತಪಡಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ಕೇಸರಿ ಪತಾಕೆ, ತೋರಣಗಳು ರಾರಾಜಿಸುತ್ತಿದ್ದು ನಗರದ ತುಂಬ ಕೇಸರಿ ರಂಗೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT