ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರಿಂದ ಕಲ್ಲು ತೂರಾಟ

ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ
Last Updated 13 ಫೆಬ್ರುವರಿ 2019, 12:26 IST
ಅಕ್ಷರ ಗಾತ್ರ

ಹಾಸನ:ಸಂಸದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಘಟನೆಯಲ್ಲಿ ಪ್ರೀತಂ ಬೆಂಬಲಿಗ ರಾಹುಲ್‌ ತಲೆಗೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರೀತಂಗೌಡ, ಅನ್ಯಪಕ್ಷ ಶಾಸಕರನ್ನು ಬಿಜೆಪಿಗೆ ಆಹ್ವಾನಿಸುವ ವೇಳೆ ಜೆಡಿಎಸ್ ಅಗ್ರ ನಾಯಕರ ಬಗ್ಗೆ ಲಘುವಾಗಿ ಆಡಿದ್ದಾರೆ ಎನ್ನಲಾದ ಮಾತು, ದೇವೇಗೌಡರ ತವರು ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಚ್ಚಾಟಕ್ಕೆ ಎಡೆ ಮಾಡಿಕೊಟ್ಟಿದೆ.

ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ರಾಹುಲ್‌ ಅವರನ್ನು ಕರೆದೊಯ್ಯುತ್ತಿರುವ ದೃಶ್ಯ
ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ರಾಹುಲ್‌ ಅವರನ್ನು ಕರೆದೊಯ್ಯುತ್ತಿರುವ ದೃಶ್ಯ

ಬೈಕ್ ನಲ್ಲಿ ಮೆರವಣಿಗೆ ಬಂದು ನಂತರ ಧರಣಿ ನಡೆಸಿದ ಜೆಡಿಎಸ್ ನ ನೂರಾರು ಕಾರ್ಯಕರ್ತರು, ಪ್ರೀತಂ ವಿರುದ್ಧ ಘೋಷಣೆ ಕೂಗಿದರು. ಅಭಿವೃದ್ಧಿ ಮರೆತು ಕೀಳು ಮಟ್ಟದ ರಾಜಕೀಯ ಮಾಡುತ್ತಿರುವ ಕಮಲ ಶಾಸಕ, ಕೂಡಲೇ ದೇವೇಗೌಡರು, ಕುಮಾರಸ್ವಾಮಿ ಅವರ ಕ್ಷಮೆಯಾಚನೆಗೆ ಒತ್ತಾಯಿಸಿದರು.

ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮುಗಿಸಿ ವಾಪಸ್‌ ಹೋಗುತ್ತಿದ್ದ ವೇಳೆ, ಶಾಸಕರ ಮನೆಯೊಳಗಿದ್ದ ಅವರ ಕೆಲ ಬೆಂಬಲಿಗರು, ಪ್ರೀತಂ ಪರ ಘೋಷಣೆ ಕೂಗಿದರು.

ಇದಕ್ಕೆ ಪ್ರತಿಯಾಗಿ ಜೆಡಿಎಸ್ ನವರೂ ಧಿಕ್ಕಾರ ಕೂಗಲು ಆರಂಭಿಸಿದಾಗ, ಮಾತಿನ ಚಕಮಕಿ ಆರಂಭವಾಯಿತು. ಈ ವೇಳೆಗೆ ಜೆಡಿಎಸ್ ಪ್ರತಿಭಟನಾಕಾರರು, ಶಾಸಕರ ಮನೆಗೆ ನುಗ್ಗಲು ಯತ್ನಿಸಿದ್ದನ್ನು ಪೊಲೀಸರು ವಿಫಲಗೊಳಿಸಿದರು. ಈ ವೇಳೆ ನೂಗುನುಗ್ಗಲು ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ಈ ವೇಳೆ ಜೆಡಿಎಸ್ ಗುಂಪಿನಲ್ಲಿದ್ದ ಕೆಲ ಕಿಡಿಗೇಡಿಗಳು ಪ್ರೀತಂಗೌಡ ಮನೆಯ ಬಾಗಿಲತ್ತ ಕಲ್ಲು ತೂರಿದರು. ಇದು ಅಲ್ಲೇ ನಿಂತಿದ್ದ ಕಾರಿನ ಮೇಲೆ ಬಿದ್ದಿತ್ತಲ್ಲದೇ, ಶಾಸಕರ ಬೆಂಬಲಿಗ ರಾಹುಲ್ ಕಿಣಿ ಎಂಬಾತನ ಹಣೆ ಭಾಗಕ್ಕೂ ಬಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮಾರಾಮಾರಿ ಹಂತಕ್ಕೂ ತಲುಪಿತು. ಪೊಲೀಸರು ಹೆಚ್ಚಿನ ಅನಾಹುತ ನಡೆಯುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ರಾಜಕೀಯ ಪ್ರೇರಿತ:ಪ್ರೀತಂ ತಾಯಿ

ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಪ್ರೀತಂ ತಾಯಿ ನಾಗರತ್ನ,‘ ಇದು ರಾಜಕೀಯ ಪ್ರೇರಿತ. ಚುನಾವಣೆ ಹೊಸ್ತಿಲಲ್ಲಿ ಹೀಗೆ ಮಾಡುತ್ತಿದ್ದಾರೆ. ಇಂಥ ಘಟನೆಗಳಿಗೆ ಉಸ್ತುವಾರಿ ಸಚಿವರು ಅವಕಾಶ ಮಾಡಿಕೊಡಬಾರದು. ಇಂಥ ಬೆದರಿಕೆ ನಾವು ಹೆದರುವುದಿಲ್ಲ. ತಮ್ಮ ಮಗ ಯಾವುದೇ ತಪ್ಪು ಮಾಡುವವನಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಹಾಸನ ಬಂದ್‌ಗೆ ಚಿಂತನೆ
ಶಾಸಕರ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ನಾಳೆ (ಗುರುವಾರ) ಬಂದ್‌ ನಡೆಸಲು ಚಿಂತನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT