ಸರ್ಕಾರ ಉಳಿಸಲು ಅಖಾಡಕ್ಕಿಳಿದ ಎಚ್‌ಡಿಕೆ, ಡಿಕೆ ಜೋಡಿ

7
ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಸರಣಿ ಸಭೆ

ಸರ್ಕಾರ ಉಳಿಸಲು ಅಖಾಡಕ್ಕಿಳಿದ ಎಚ್‌ಡಿಕೆ, ಡಿಕೆ ಜೋಡಿ

Published:
Updated:

ಬೆಂಗಳೂರು: ಆಪರೇಷನ್ ಕಮಲದ ಸುಳಿಯಲ್ಲಿ ಸಿಲುಕಿದ್ದಾರೆ ಎನ್ನಲಾದ ಶಾಸಕರನ್ನು ಹಿಡಿದಿಟ್ಟುಕೊಂಡು ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಗುರುವಾರ ಸರಣಿ ಸಭೆ ನಡೆಸಿದ ಈ ನಾಯಕರು, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೆಣೆದು, ಸವಾಲುಗಳನ್ನು ಎದುರಿಸುವ ಬಗ್ಗೆ ಚರ್ಚೆ ನಡೆಸಿದರು.

ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಮೂಲಕ ಬಿಸಿ ಮುಟ್ಟಿಸಿದ ಬಿಜೆಪಿ, ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿತು. ಕಲಾಪ ಮುಂದೂಡುತ್ತಿದ್ದಂತೆ ಸಭಾಂಗಣದೊಳಗೇ ಇದ್ದ ಸಿದ್ದರಾಮಯ್ಯ ಬಳಿಗೆ ತೆರಳಿದ ಶಿವಕುಮಾರ್‌ ಕೆಲಹೊತ್ತು ಚರ್ಚಿಸಿದರು. ಸಿದ್ದರಾಮಯ್ಯ ಸದನದಿಂದ ತೆರಳಿದ ಬಳಿಕ, ಕುಮಾರಸ್ವಾಮಿ ಪಕ್ಕ ಬಂದು ಕುಳಿತ ಶಿವಕುಮಾರ್‌ ಒಂದು ಗಂಟೆಗೂ ಹೆಚ್ಚು ಹೊತ್ತು, ಸಮಾಲೋಚಿಸಿದರು. ಸದನದಿಂದ ಹೊರನಡೆದಿದ್ದ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಜೆಡಿಎಸ್ ಅಧ್ಯಕ್ಷರೂ ಆಗಿರುವ ಎಚ್. ವಿಶ್ವನಾಥ್ ಅವರನ್ನು ಅಲ್ಲಿಗೆ ಕರೆಯಿಸಿಕೊಂಡ ಕುಮಾರಸ್ವಾಮಿ, ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಶಾಸಕರ ಹೆಜ್ಜೆ ಕುರಿತು ಮಾಹಿತಿ ಪಡೆದರು.

ಸಚಿವರಾದ ಬಂಡೆಪ್ಪ ಕಾಶೆಂಪೂರ, ಎಸ್.ಆರ್. ಶ್ರೀನಿವಾಸ್, ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ಜತೆಯಾದರು.  ತಮ್ಮ ಜತೆಗೆ ಬರಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದ ಯಲ್ಲಾಪುರ ಶಿವರಾಂ ಹೆಬ್ಬಾರ್‌ ಕೂಡ ಕುಮಾರಸ್ವಾಮಿ ಹಿಂದೆಯೇ ನಿಂತಿದ್ದರು.

ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದ್ದ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರನ್ನೂ ಅಲ್ಲಿಗೆ ಕರೆಸಲಾಯಿತು. ಕುಮಾರಸ್ವಾಮಿ ಹಾಗೂ ಶಿವಕುಮಾರ್ ಅವರು ಈ ಇಬ್ಬರು ಶಾಸಕರ ಜತೆ ಪ್ರತ್ಯೇಕವಾಗಿ ಮಾತನಾಡಿ ಮಾಹಿತಿಯನ್ನೂ ಪಡೆದರು. ಯಾವ ಶಾಸಕರು ಬಿಜೆಪಿ ಪಾಳಯದಲ್ಲಿದ್ದಾರೆ ಎಂಬ ವಿವರ ಸಂಗ್ರಹಿಸಿದರು. ಪ್ರತಾಪಗೌಡ, ಭೀಮಾನಾಯ್ಕ ಇಬ್ಬರನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಸಭಾಧ್ಯಕ್ಷರ ಪೀಠದವರೆಗೆ ಹೋದ ಕುಮಾರಸ್ವಾಮಿ, ಅವರ ಕಿವಿಯಲ್ಲಿ ಪಿಸುಗುಟ್ಟಿದರು. 

‘2009ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ 11 ಶಾಸಕರು, ಐವರು ಸಚಿವರು ಸೇರಿ 16 ಮಂದಿ ರಾಜ್ಯಪಾಲರನ್ನು ಭೇಟಿಯಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲ ಎಂದು ಹೇಳಿದ್ದರು. ಆಗ ಸಭಾಧ್ಯಕ್ಷರನ್ನು ಬಳಸಿಕೊಂಡು ಅವರನ್ನೆಲ್ಲ ಅನರ್ಹಗೊಳಿಸಲಾಯಿತು. ಬಿಜೆಪಿಯ ಒಬ್ಬನೇ ಒಬ್ಬ ಶಾಸಕ ಕುಮಾರಸ್ವಾಮಿ ಮೇಲೆ ವಿಶ್ವಾಸವಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿಲ್ಲ. ಹಾಗಿದ್ದಾಗ ಆಪರೇಷನ್ ಏನೂ ನಡೆಯುವುದಿಲ್ಲ. ಒಂದು ವೇಳೆ ನಡೆದರೂ ಅದಕ್ಕೆ ಏನು ಮಾಡಬೇಕೆಂದು ಚರ್ಚಿಸಿದ್ದೇವೆ’ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು.

‘ಬಿಜೆಪಿಯವರು ನಾಲ್ವರ ರಾಜೀನಾಮೆ ಕೊಡಿಸಿದರೆ ನಾವು ಆ ಪಕ್ಷದ ಇಬ್ಬರ ರಾಜೀನಾಮೆ ಕೊಡಿಸಲಿದ್ದೇವೆ. ಕಾದು ನೋಡಿ’ ಎಂದು ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ಹೇಳಿದರು.

**

ಮುಖ್ಯಾಂಶಗಳು

* ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಬಿಜೆಪಿಗೆ ಪ್ರತಿತಂತ್ರ

* ಕೈ ಅತೃಪ್ತರ ಅಹವಾಲು ಆಲಿಸಿದ ಕುಮಾರಸ್ವಾಮಿ

* ಮೈತ್ರಿ ಭದ್ರ ಎಂಬ ವಿಶ್ವಾಸದಲ್ಲಿ ಸಚಿವರ ದಂಡು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !