ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಿವೃತ್ತಿ: ಎಚ್‌.ಡಿ.ಕುಮಾರಸ್ವಾಮಿ ಇಂಗಿತ

ತಂಗಿ ಕುಟುಂಬ ಬೀದಿಗೆ ತಂದ ನಾರಾಯಣಗೌಡ ಕ್ರಿಮಿನಲ್‌: ಎಚ್‌ಡಿಕೆ ಆರೋಪ
Last Updated 3 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ/ಹಾಸನ: ಹದಗೆಟ್ಟಿರುವ ಈಗಿನ ರಾಜಕೀಯ ವ್ಯವಸ್ಥೆಯಿಂದ ಹಿಂದೆ ಸರಿಯಬೇಕು ಎಂದುಕೊಂಡಿದ್ದು, ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಚ್ಚು ತಮಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹಾಗೂ ಹಾಸನದಲ್ಲಿ ಸುದ್ದಿಗಾರರೊಂದಿಗೆ ಇದೇ
ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಕುಮಾರಸ್ವಾಮಿ, ವೃದ್ಧಾಶ್ರಮವೊಂದನ್ನು ತೆರೆದು ಅಲ್ಲಿಯೇ ಇರಲು ನಿರ್ಧರಿಸಿದ್ದಾಗಿ ತಿಳಿಸಿದರು.

ಇವತ್ತು ಒಳ್ಳೆಯವರು ರಾಜಕಾರಣ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಜಾತಿ ಪ್ರಭಾವವು ರಾಜಕೀಯವನ್ನು ನಿಯಂತ್ರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಂಬಿದವರು ಜೊತೆಗೆ ನಿಲ್ಲಲಿಲ್ಲ ಎಂಬ ಅವರ ಆಕ್ರೋಶ ಕಣ್ಣೀರಾಗಿಯೂ ಹರಿಯಿತು.

‘ಈ ರಾಜಕಾರಣದಲ್ಲಿ ನಮ್ಮ ಕುಟುಂಬದ ಸ್ವಯಂಕೃತ ಅಪರಾಧವಿದೆ. ನನಗೆ ಅಧಿಕಾರ ಮುಖ್ಯವಲ್ಲ. ಸಂತೋಷ
ದಿಂದಲೇ ಸಿ.ಎಂ.ಕುರ್ಚಿ ಬಿಟ್ಟು ಬಂದಿದ್ದೇನೆ. ರಾಜಕೀಯದಿಂದ ಇಷ್ಟು ಹೊತ್ತಿಗೆ ನಿವೃತ್ತಿ ಘೋಷಣೆ ಮಾಡಿರುತ್ತಿದ್ದೆ. ಆದರೆ ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೇನೆ. ದೇವೇಗೌಡರ ರೀತಿಯಲ್ಲಿ ಇಳಿವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ’ ಎಂದರು.

ಉಪಚುನಾವಣೆಯಲ್ಲಿ ಕೆ.ನಿಖಿಲ್‌ ಮತ್ತು ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುವ ವಿಚಾರ ಕಪೋಲಕಲ್ಪಿತ ಎಂದ ಅವರು, ತಮ್ಮ ಕುಟುಂಬವನ್ನು ಪದೇ ಪದೇ ಎಳೆದು ತರುವುದು ಬೇಡ. ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ಉಳಿದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳಿದ್ದಾರೆ. ಆದರೂ ಇವರಿಬ್ಬರ ಹೆಸರನ್ನು ಯಾರೋ ತೇಲಿ ಬಿಟ್ಟಿದ್ದಾರೆ. ಇಂಥ ಸುದ್ದಿಗಳನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.

ತಂಗಿ ಕುಟುಂಬ ಬೀದಿಗೆ ತಂದ ಕ್ರಿಮಿನಲ್‌: ಅನರ್ಹಗೊಂಡ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಆತ ನನ್ನ ತಂಗಿ ಕುಟುಂಬವನ್ನು ಬೀದಿಗೆ ತಂದ ಕ್ರಿಮಿನಲ್‌’ ಎಂದು ಕಣ್ಣೀರಿಟ್ಟರು.

‘ನಾರಾಯಣಗೌಡನಂತಹ ಕ್ರಿಮಿನಲ್‌ ಮಂಡ್ಯ ಜಿಲ್ಲೆಯಲ್ಲಿ ಸಿಗುವುದಿಲ್ಲ. ಅವನಿಗೆ ಟಿಕೆಟ್‌ ಕೊಡುವುದು ಬೇಡ ಎಂದಿದ್ದೆ. ಕೃಷ್ಣ ಅವರಿಗೆ ಟಿಕೆಟ್‌ ಕೊಡಲು ಸಿದ್ಧನಿದ್ದೆ. ದೇವೇಗೌಡರನ್ನು ಮರಳು ಮಾಡಿ ಅಂದು ಟಿಕೆಟ್‌ ಪಡೆದಿದ್ದ. ನನ್ನ ತಂಗಿ ಅವನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದಳು. ಹಳ್ಳಿ ಹಳ್ಳಿ ಸುತ್ತಿ ವೋಟು ಕೇಳಿದಳು. ಆದರೆ ಈ ಕ್ರಿಮಿನಲ್‌ ಅವಳಿಗೆ ಕೊಟ್ಟ ಕೊಡುಗೆ ಏನು, ಅವಳ ಕುಟುಂಬವನ್ನು ಬೀದಿಗೆ ತಂದ’ ಎಂದು ಕಣ್ಣೀರು ಸುರಿಸಿದರು.

‘ನನ್ನ ತಂಗಿ ಮಗಳ ಮದುವೆಗೆ ದುಡ್ಡು ಕೊಟ್ಟೆ ಎಂದು ಹೇಳಿಕೊಂಡಿದ್ದಾನೆ. ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಹಣವನ್ನು ಕೆ.ಆರ್‌.ಪೇಟೆಗೆ ಕೊಟ್ಟಿದ್ದೆ. ನಮ್ಮ ಇಡೀ ಕುಟುಂಬ ಅವನ ಪರ ನಿಂತಿತ್ತು. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಹಣ ಕೊಟ್ಟೆ. ಈತ ರೈತ ಕುಟುಂಬಗಳಿಗೆ ಒಂದು ರೂಪಾಯಿಯನ್ನಾದರೂ ಕೊಟ್ಟಿದ್ದಾನಾ’ ಎಂದು ಪ್ರಶ್ನಿಸಿದರು.

ವೃದ್ಧರ ಜೊತೆ ಬದುಕಲು ಚಿಂತನೆ
‘ನಾನು ಸಂಪಾದನೆ ಮಾಡಿರುವ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಿಸಲು ನಿರ್ಧರಿಸಿದ್ದೇನೆ. ಕೇತೋಗಾನಹಳ್ಳಿಯಲ್ಲಿ ಆಶ್ರಮ ನಿರ್ಮಿಸಿ ವೃದ್ಧರ ಜೊತೆ ಇರಲು ಚಿಂತಿಸುತ್ತಿದ್ದೇನೆ. ನಿಖಿಲ್‌ಗೆ ಚುನಾವಣೆಗೆ ನಿಲ್ಲದಂತೆ ಹೇಳಿದ್ದೆ. ಶಾಸಕರು ಒತ್ತಾಯಪೂರ್ವಕವಾಗಿ ಕಣಕ್ಕಿಳಿಸಿದರು. ಆದರೆ ಮಾಧ್ಯಮಗಳು ನನ್ನನ್ನು, ನನ್ನ ಮಗನನ್ನು ಖಳನಾಯಕರಂತೆ ಬಿಂಬಿಸಿದವು. ಈಗಲೂ ಈ ಸಭೆಯಲ್ಲಿ ಕೆಟ್ಟ ನಡವಳಿಕೆ ನಡೆಯುವುದನ್ನೇ ಮಾಧ್ಯಮಗಳು ಕಾಯುತ್ತಿವೆ’ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘ನಾರಾಯಣಗೌಡ ಒಬ್ಬ ಸೇಲ್ಸ್‌ಮನ್‌. ಅವನಿಂದ ನಾವು ಪಾಠ ಕಲಿಯಬೇಕಿಲ್ಲ. ಮುಂದಿನ ಉಪ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು’ ಎಂದರು.

*
ಇನ್ನು ಮುಂದೆ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಬೇಡವೇ ಬೇಡ.
-ಎಚ್‌.ಡಿ.ಕುಮಾರಸ್ವಾಮಿ,ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT