ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ದಾಳ: ಕಾಂಗ್ರೆಸ್‌ ತಳಮಳ

ಸುದ್ದಿ ವಿಶ್ಲೇಷಣೆ
Last Updated 17 ಮಾರ್ಚ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನೊಳಗೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಉರುಳಿಸುತ್ತಿರುವ ದಾಳಗಳಿಗೆ ಕಾಂಗ್ರೆಸ್‌ ನಾಯಕರ ವಿಲವಿಲ ಒದ್ದಾಡತೊಡಗಿದ್ದಾರೆ. ರಾಜ್ಯದಲ್ಲಿ ಪಕ್ಷಕ್ಕೆ ಎದುರಾಗಲಿರುವ ‘ಗತಿ’ಯನ್ನು ನೆನೆದು ನೀರೊಳಗಿದ್ದೂ ಬೆವರುತ್ತಿರುವ ಪರಿಸ್ಥಿತಿ ಅವರದ್ದಾಗಿದೆ.

ಎಂತದೇ ಬೆಲೆ ತೆತ್ತಾದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ತನ್ಮೂಲಕ ಪ್ರಧಾನಿ ನರೇಂದ್ರ ಮೋದಿ–ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ‘ಕಾಂಗ್ರೆಸ್ ಮುಕ್ತ ಭಾರತ’ದ ಕನಸು ಭಗ್ನ ಮಾಡಬೇಕು ಎಂಬ ತವಕದಲ್ಲಿ 37 ಶಾಸಕರ ಬಲದ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ‘ಆಯಕಟ್ಟಿ’ನ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್‌ ಧುರೀಣರು ಈಗ ಪರಿತಪಿಸಲಾರಂಭಿಸಿದ್ದಾರೆ.

ಲೋಕಸಭೆ ಕ್ಷೇತ್ರಗಳ ಹಂಚಿಕೆಯಲ್ಲಿ ಪಟ್ಟು ಬಿಡದ ದೇವೇಗೌಡರು, ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮಾಡಿಕೊಂಡ ಲಿಖಿತ ಒಪ್ಪಂದದಂತೆ 3:1ರ ಅನುಪಾತದಲ್ಲಿ ಎಲ್ಲವೂ ಹಂಚಿಕೆಯಾಗಬೇಕಿತ್ತು. ಆ ಲೆಕ್ಕದಲ್ಲೇ 12 ಲೋಕಸಭೆ ಕ್ಷೇತ್ರಗಳಿಗೆ ಗೌಡರು ‘ಹಕ್ಕು’ ಮಂಡಿಸಿದ್ದರು. ‘ಅದನ್ನು ಎಂಟಕ್ಕೆ ಇಳಿಸಿದ್ದೇವೆ’ ಎಂಬ ಲೆಕ್ಕವನ್ನು ಕಾಂಗ್ರೆಸ್ ನಾಯಕರು ಕೊಡುತ್ತಾರಾದರೂ ಗೆದ್ದವರ ಮುಖದಲ್ಲಿ ಕಾಣಸಿಗುವ ‘ಹೆಮ್ಮೆ’ಯ ಗೆರೆಗಳು ಅವರಲ್ಲಿ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಸಂಸದರಿರುವ ತುಮಕೂರು, ಒಬ್ಬ ಜೆಡಿಎಸ್‌ ಶಾಸಕನೂ ಇಲ್ಲದ ಉಡುಪಿ–ಚಿಕ್ಕಮಗಳೂರು, ಉತ್ತರಕನ್ನಡ ಕ್ಷೇತ್ರಗಳನ್ನು ಜೆಡಿಎಸ್‌ ತೆಕ್ಕೆಗೆ ಬಿಟ್ಟುಕೊಟ್ಟಾಗಿದೆ. ಶಿವಮೊಗ್ಗವೂ ಅದೇ ಮಾದರಿಯೊಳಗೆ ಇದೆ. ಇನ್ನು ಬೆಂಗಳೂರು ಉತ್ತರದಲ್ಲಿ ಇಬ್ಬರು ಜೆಡಿಎಸ್ ಶಾಸಕರಿದ್ದರೂ ಇಲ್ಲಿನ ಕಾಂಗ್ರೆಸ್‌ ಶಾಸಕರ ಬಲದ ಮುಂದೆ ಅದೇನೋ ದೊಡ್ಡ ಸಂಖ್ಯೆಯೂ ಅಲ್ಲ.

ಹೀಗಾಗಿ, ಮೈತ್ರಿಯಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬುದು ಕಾಂಗ್ರೆಸ್‌ ಪಡಸಾಲೆಯಲ್ಲಿ ಅನುರಣಿಸುತ್ತಿರುವ ಮಾತು. ದೇವೇಗೌಡರು ಬಳಸುವ ಸಾಮ, ದಾನ, ಭೇದ, ದಂಡದ ತಂತ್ರಗಳ ಮರ್ಮ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಕಾಣಿಸುವಷ್ಟು ದೇವೇಗೌಡರು‍‘ಪುಣ್ಯಕೋಟಿ’ಯಲ್ಲ ಎಂಬುದನ್ನು ಸಿದ್ದರಾಮಯ್ಯ ಬಲ್ಲರು. ಈ ಕಾರಣಕ್ಕಾಗಿ, ಮೈತ್ರಿಯ ಬಗ್ಗೆ ಮೊದಲಿನಿಂದಲೂ ‘ಅಪಸ್ವರ’ ವೆಂಬ ಅಡ್ಡಗೋಡೆ ಕಟ್ಟಿಕೊಂಡೇ ಬಂದಿದ್ದಾರೆ.

ಹಾಸನ, ಮಂಡ್ಯದ ಬಳಿಕ ಗೌಡರು ತಮ್ಮ ವಾಮನ ಪಾದವನ್ನು ಮೈಸೂರಿನಲ್ಲಿ ಊರಿ, ಎಲ್ಲರನ್ನೂ ‘ಬಲಿ’ ಹಾಕುವರು ಎಂಬ ಕಾರಣಕ್ಕೆ ಈಕ್ಷೇತ್ರ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಈಗ ರಹಸ್ಯವಲ್ಲ.

ಗೌಡರ ‘ಗಣಿತ’: ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಗೌಡರು ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಈಗ ರಕ್ಷಣಾತ್ಮಕ ಆಟವನ್ನು ತುಸು ಆಕ್ರಮಣಕಾರಿಯಾಗಿ ಆಡತೊಡಗಿದ್ದಾರೆ. ಲೋಕಸಭೆಯಲ್ಲಿ ಸದ್ಯ ಎರಡು ಇರುವ ಸಂಖ್ಯೆಯನ್ನು ಏಳೆಂಟಕ್ಕೆ ಏರಿಸಿಕೊಳ್ಳುವುದು ಅವರ ಲೆಕ್ಕಾಚಾರ.

ಇಲ್ಲೊಂದು ವಿಚಿತ್ರ ಸತ್ಯವಿದೆ. ಸಮನ್ವಯ ಸಮಿತಿ ಹಾಗೂ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಕ್ಷೇತ್ರ ಹಂಚಿಕೆಯಾಗಬೇಕಿತ್ತು. ಆದರೆ, ಅದಕ್ಕೂ ಮೊದಲೇ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿಗಳು ಎಂದು ದೇವೇಗೌಡರು ಘೋಷಿಸಿದರು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರನ್ನೂ ಹರಿಯಬಿಟ್ಟರು.

‘ಹಾಲಿ ಸಂಸದರು ಇರುವ ಕ್ಷೇತ್ರ ಬಿಟ್ಟುಕೊಡುವುದಿಲ್ಲ; ಚುನಾವಣಾ ಸಮಿತಿ ಸಭೆಗೆ ಮುನ್ನ ವರಿಷ್ಠರ ಜತೆ ಮತ್ತೊಂದು ಸುತ್ತಿನ ಸಭೆ ನಡೆಸುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಲೇ ಇದ್ದರು. ಅದೇ ಹೊತ್ತಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಜೆಡಿಎಸ್‌ನ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಪಟ್ಟಿ ಅಖೈರುಗೊಳಿಸಿಯೇ ಬಿಟ್ಟರು.

ಪಟ್ಟಿ ಮಾಧ್ಯಮಗಳಲ್ಲಿ ಪ್ರಕಟವಾಗುವವರೆಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕೂಡ ಜೆಡಿಎಸ್‌ಗೆ ಯಾವ ಕ್ಷೇತ್ರ ಬಿಟ್ಟುಕೊಡಲಾಗಿದೆ ಎಂಬ ಸಂಗತಿ ಗೊತ್ತಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಕಾಂಗ್ರೆಸ್‌ನ ರಾಜ್ಯನಾಯಕರನ್ನು ಬದಿಗಿಟ್ಟು, ಕ್ಷೇತ್ರ ಕಿತ್ತುಕೊಳ್ಳುವಲ್ಲಿ ಗೌಡರು ಯಶಸ್ವಿಯಾದರು.

ಗೌಡರೇನೂ ಸುಖಾಸುಮ್ಮನೆ ಈ ಸೀಟುಗಳನ್ನು ಹಂಚಿಕೆ ಮಾಡಿಸಿದ್ದಲ್ಲ. ಅದರ ಹಿಂದೆ ದೂರಗಾಮಿ ಆಲೋಚನೆಗಳು, ಭವಿಷ್ಯದ ಕನಸುಹರಡಿಕೊಂಡಿವೆ. ಕರ್ನಾಟಕದಲ್ಲಿ 5–6 ಸ್ಥಾನ ಗೆಲ್ಲಿಸಿಕೊಳ್ಳುವುದು ಮೊದಲ ಆದ್ಯತೆ. ಜತೆಗೆ ಅರುಣಾಚಲ ಪ್ರದೇಶದಲ್ಲಿ 23 ವರ್ಷ ಮುಖ್ಯಮಂತ್ರಿಯಾಗಿದ್ದ ಗೆಗಾಂಗ್ ಅಪಾಂಗ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಗೌಡರು ಅಲ್ಲಿಯೂ ತೆನೆ ಹೊತ್ತ ಮಹಿಳೆಯ ಖದರು ಬೆಳೆಸಲು ತಂತ್ರ ಹೆಣೆದಿದ್ದಾರೆ.

ಅವರ ಆಲೋಚನೆಯ ಹರಿವು ಅಷ್ಟಕ್ಕೆ ನಿಂತಿಲ್ಲ; ಡ್ಯಾನಿಷ್ ಅಲಿ ಹೊತ್ತಿದ್ದ ತೆನೆ ಇಳಿಸಿ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಆನೆಯ ಮೇಲೆ ಕೂರಿಸಿದ್ದಾರೆ. ಇಲ್ಲಿಯವರೆಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಸದಸ್ಯರಾಗಿ, ಕರ್ನಾಟಕದ ರಾಜಕಾರಣದ ಬಗ್ಗೆ ರಾಹುಲ್ ಗಾಂಧಿ, ವೇಣುಗೋಪಾಲ್ ಜತೆ ಮಾತುಕತೆಯಾಡುತ್ತಿದ್ದ ಅಲಿ, ಇನ್ನುಮುಂದೆ ಬಿಎಸ್‌ಪಿ ಸದಸ್ಯ.

ಈ ಬೆಳವಣಿಗೆ ಬೆನ್ನಲ್ಲೇ, ಮತ್ತೊಂದು ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಜತೆ ಮೈತ್ರಿಗೆ ಸಂಧಾನಕಾರನಾಗಿದ್ದ ಡ್ಯಾನಿಷ್, ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಇದ್ದರೆ ಆಗ ಬಿಎಸ್‌ಪಿಯ ಸಂಧಾನಕಾರರಾಗಿ ಬಿಜೆಪಿಯ ಅಮಿತ್ ಶಾ, ನರೇಂದ್ರ ಮೋದಿ ಅಥವಾ ನಿತಿನ್ ಗಡ್ಕರಿ ಜತೆ ‘ಮಾತುಕತೆ’ ನಡೆಸುವ ಹೊಣೆ ಹೊರಲಿದ್ದಾರಾ ಎಂಬ ಪ್ರಶ್ನೆ ಕಾಂಗ್ರೆಸ್ ನಡುಮನೆಯಲ್ಲಿ ಎದ್ದಿದೆ.

ಮೈತ್ರಿಯಲ್ಲಿ ಈಗಲೇ ಮುನಿಸು ಬಿರುಸುಗೊಂಡಿದೆ. ಒಂದು ವೇಳೆ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಗೆಲ್ಲದೇ ಹೋದರೆ ಕಾಂಗ್ರೆಸ್‌ ದೂಷಿಸಿ ಮೈತ್ರಿ ಮುರಿಯಲು ಇದೊಂದು ನೆವವಾಗಲಿದೆ. ಹಾಸನ–ಮಂಡ್ಯದಲ್ಲಿ ಸೋತರೆ ‘ಮಿತ್ರ’ರು ಕೈಕೊಟ್ಟರು ಎಂದು ರಸ್ತೆಯಲ್ಲಿ ‘ಅಳುತ್ತಾ’ ರಾಜಕಾರಣ ಮಾಡುವುದು ಗೌಡರಿಗೆ ಗೊತ್ತಿಲ್ಲದ ವಿದ್ಯೆಯಲ್ಲ. ಆ ಹೊತ್ತಿನಲ್ಲಿ ‘ಕೈ’ಕೊಟ್ಟಿದ್ದನ್ನೇ ಮುಂದಿಟ್ಟು ಬಿಜೆಪಿಯತ್ತ ವಾಲುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು.

ಐದಕ್ಕಿಂತ ಹೆಚ್ಚು ಸ್ಥಾನಗೆದ್ದು ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನ ಬರದೇ ಇದ್ದರೆ ಆಗ ಜೆಡಿಎಸ್‌ನವರು ವಂಚಿಸಿದರು ಎಂದು ಕಾಂಗ್ರೆಸ್‌ನವರೇ ಶಪಿಸುತ್ತಾ ಹಾದಿರಂಪ ಬೀದಿರಂಪ ಮಾಡುವುದು ಖಚಿತ. ಮೈತ್ರಿಯಿಂದ ನಷ್ಟವಾಯಿತು ಎಂಬ ಅಪವಾದಕ್ಕೆ ಆಗ ಸಾಕ್ಷಿ, ಪುರಾವೆಗಳು ಸೃಷ್ಟಿಯಾಗಲಿವೆ. ಅಂತಹ ಹೊತ್ತಿನೊಳಗೆ ಕಾಂಗ್ರೆಸ್ ಪಕ್ಷವೇ ಮೈತ್ರಿಯಿಂದ ಹೊರಬರಬಹುದು. ಅಂತಹ ಸನ್ನಿವೇಶದಲ್ಲಿ ಬಿಜೆಪಿ ಜತೆಗೆ ಕೈಗೂಡಿಸಲು ಜೆಡಿಎಸ್‌ ಹಿಂದೇಟು ಹಾಕಲಾರದು ಎಂದೂ ಹೇಳುತ್ತಾರೆ ಅವರು.

ಲೋಕಸಭೆ ಫಲಿತಾಂಶದತ್ತ ಗೌಡರು ದೃಷ್ಟಿ ನೆಟ್ಟಿದ್ದು, ಅದು ಲಾಭವಾದರೆ ಒಂದು ಲೆಕ್ಕ, ನಷ್ಟವಾಗಿ ‘ಕೈ’ ಸುಟ್ಟರೆ ಮತ್ತೊಂದು ತರ್ಕ ಎಂಬುದು ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಮಾತು. ಜೂನ್ ಮೊದಲ ವಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಏನೂ ಆಗಬಹುದು. ‘ಐದು ವರ್ಷ’ ಸರ್ಕಾರ ಎನ್ನುತ್ತಿರುವ ಗೌಡರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ; ನಾವಂತೂ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧ ಎನ್ನುತ್ತಿದ್ದಾರೆ ಕಾಂಗ್ರೆಸ್‌ ನಾಯಕರು. ಇದು ಸದ್ಯದ ವಿದ್ಯಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT