ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಲು ದೇವೇಗೌಡ ಸಿದ್ಧತೆ

12 ಸ್ಥಾನ ನೀಡದಿದ್ದರೆ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ
Last Updated 30 ಡಿಸೆಂಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತೀರ್ಮಾನಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರೆ ಗೆಲುವು ಸುಲಭ ಎಂಬುದು ದೇವೇಗೌಡರ ಲೆಕ್ಕಾಚಾರ.

ಈ ಹಿಂದೆ ಈ ಕ್ಷೇತ್ರದಿಂದ ಬಿಜೆಪಿಯ ಡಿ.ಬಿ. ಚಂದ್ರೇಗೌಡ ಮತ್ತು ಡಿ.ವಿ. ಸದಾನಂದಗೌಡ ಗೆಲುವು ಸಾಧಿಸಿದ್ದಾರೆ. ಒಕ್ಕಲಿಗರ ಭದ್ರಕೋಟೆ ಆಗಿರುವುದರಿಂದ ಮತದಾರರು ತಮ್ಮ ಕೈ ಹಿಡಿಯುವುದು ಖಚಿತ ಎಂಬುದು ದೇವೇಗೌಡರ ಗಟ್ಟಿ ನಂಬಿಕೆ ಎಂದು ಮೂಲಗಳು ತಿಳಿಸಿವೆ.

ದೇವೇಗೌಡರು ಬೆಂಗಳೂರು ಉತ್ತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರವಿತ್ತು. ಆದರೆ, ಗೌಡರು ಈಗಾಗಲೇ ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಲು ಸದ್ದುಗದ್ದಲವಿಲ್ಲದೆ ಸಿದ್ಧತೆಗಳನ್ನು ಆರಂಭಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಖಚಿತಪಡಿಸಿದ್ದಾರೆ.

ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯಿಂದ ಬೆಂಗಳೂರು ನಗರದ ಮೂರೂ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಸಾಧ್ಯ. ಅಷ್ಟೇ ಅಲ್ಲ, ಹೊಂದಾಣಿಕೆಯಿಂದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳನ್ನು ಮಿತ್ರ ಪಕ್ಷಗಳು ಅನಾಯಾಸವಾಗಿ ಗೆಲ್ಲಬಹುದು. ಈ ಮೂಲಕ ರಾಜ್ಯದ ಅರ್ಧದಷ್ಟು ಭಾಗದಲ್ಲಿ ಪಕ್ಷದ ತಳಹದಿ ವಿಸ್ತರಿಸುವುದರ ಜತೆಗೆ ಸಂಘಟನೆಯನ್ನೂ ಸುಲಭವಾಗಿ ಬಲಪಡಿಸಬಹುದು. ಭವಿಷ್ಯದಲ್ಲಿ ಪಕ್ಷಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದು ದೇವೇಗೌಡರ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

ಚೌಕಾಶಿಗಿಳಿದರೆ 28 ಕಡೆಯೂ ಸ್ಪರ್ಧೆ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್‌ ಧೋರಣೆ ಬದಲಾಗಿದೆ. ರಾಜ್ಯದಲ್ಲಿ 5–6 ಕ್ಷೇತ್ರಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವುದು ಬೇಡ ಎಂಬ ಮಾತೂ ಕಾಂಗ್ರೆಸ್‌ ವಲಯದಲ್ಲಿದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

‘12 ಕ್ಷೇತ್ರಗಳನ್ನು ನೀಡದಿದ್ದರೆ, ಎಲ್ಲ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಲಾಗುವುದು. ಕಾಂಗ್ರೆಸ್‌ ಪಕ್ಷದ ರಾಜ್ಯ ನಾಯಕರು ಹೈಕಮಾಂಡ್‌ ಮಾತನ್ನು ಒಪ್ಪಲೇ ಬೇಕಾಗುತ್ತದೆ. ಇಲ್ಲವಾದರೆ, ನಮ್ಮ ದಾರಿ ನಮಗೆ ಇದ್ದೇ ಇದೆ’ ಎಂಬುದನ್ನು ಕಾಂಗ್ರೆಸ್‌ಗೆ ತಿಳಿಸಲು ಜೆಡಿಎಸ್‌ ಸಿದ್ಧವಾಗಿದೆ.

ಜೆಡಿಎಸ್‌ ಬಯಸಿರುವ 12 ಕ್ಷೇತ್ರಗಳು

ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ರಾಯಚೂರು, ವಿಜಯಪುರ ಮತ್ತು ಬೀದರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT