ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪೂರ್ಣಗೊಳ್ಳದ ‘ಆರೋಗ್ಯ ಸಮೀಕ್ಷೆ’

ರೋಗಿಗಳನ್ನು ಗುರುತಿಸಿ, ಚಿಕಿತ್ಸೆಗೆ ಒಳಪಡಿಸಲು ತೊಡಕು
Last Updated 10 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಇದು, ವಿವಿಧ ರೀತಿಯ ಕಾಯಿಲೆ ಇರುವವರನ್ನು ಗುರುತಿಸಿ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಹಾಗೂ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಮತಗಟ್ಟೆವಾರು ಸಮೀಕ್ಷೆ ನಡೆಸುವಂತೆ ಸರ್ಕಾರವು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ನೌಕರರನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಮನೆ–ಮನೆಗೆ ಭೇಟಿ ನೀಡಿ ಎಲ್ಲರ ಮಾಹಿತಿ ಸಂಗ್ರಹಿಸುವ ಸಮೀಕ್ಷೆ ಇದು. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಈ ಕಾರ್ಯ ಆರಂಭಿಸಲಾಗಿದೆ. ಕೊರೊನಾ ಸೋಂಕಿನ ಭೀತಿಯಲ್ಲೂ ಕೊರೊನಾ ವಾರಿಯರ್‌ಗಳು ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರವಾಗಿರುವುದರಿಂದ ತ್ವರಿತವಾಗಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಎಲ್ಲ ಕ್ಷೇತ್ರಗಳಲ್ಲೂ:

ಜಿಲ್ಲಾಡಳಿತದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,434 ಮತಗಟ್ಟೆಗಳಿವೆ. ಆ ವ್ಯಾಪ್ತಿಯಲ್ಲಿನ ಒಟ್ಟು ಮತದಾರರ ಸಂಖ್ಯೆಯು 38,15,956 ಆಗಿದೆ. ಒಟ್ಟು 13,10,317 ಕುಟುಂಬಗಳಿವೆ (ಇಲ್ಲಿ ಮನೆಗಳು ಎಂದು ಪರಿಗಣಿಸಲಾಗಿದೆ). ಈ ಪೈಕಿ 12,66,273 ಕುಟುಂಬಗಳ ಸಮೀಕ್ಷೆಯಷ್ಟೇ ನಡೆದಿದೆ. ಇನ್ನೂ 44,044 ಮನೆಗಳಲ್ಲಿ ಸಮೀಕ್ಷಾ ಕಾರ್ಯ ನಡೆಯುವುದು ಬಾಕಿ ಇದೆ. ಅಂಕಿ–ಅಂಶ ಗಮನಿಸಿದರೆ, ಹುಕ್ಕೇರಿ ತಾಲ್ಲೂಕಿನಲ್ಲಿ ಕೆಲವೇ ಮನೆಗಳ ಸಮೀಕ್ಷೆಯಷ್ಟೇ ಆಗಬೇಕಿದೆ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 10,841 ಕುಟುಂಬಗಳ ಆರೋಗ್ಯ ಸ್ಥಿತಿಗತಿಯನ್ನು ದಾಖಲಿಸಬೇಕಾಗಿದೆ. ನಂತರದ ಸ್ಥಾನದಲ್ಲಿ ಗೋಕಾಕ (8,566 ಕುಟುಂಬಗಳು) ತಾಲ್ಲೂಕು ಇದೆ.

ಕೊರೊನಾ ರೋಗ ಲಕ್ಷಣಗಳಿದ್ದರೆ ಗುರುತಿಸಿ, ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಪಡಿಸುವುದು ಹಾಗೂ ಲಕ್ಷಣಗಳಿದ್ದಲ್ಲಿ ಚಿಕಿತ್ಸೆಗೆ ದಾಖಲಿಸುವ ನಿಟ್ಟಿನಲ್ಲಿ ಸಮೀಕ್ಷೆಯು ಮಹತ್ವದ್ದಾಗಿದೆ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಐಎಲ್‌ಐ (ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ) ರೋಗದ ಲಕ್ಷಣಗಳನ್ನು ಹೊಂದಿರುವ 65 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಪರೀಕ್ಷೆಗೊಳಪಡಿಸುವ ಉದ್ದೇಶ ಹೊಂದಲಾಗಿದೆ. ಏಕೆಂದರೆ, ತೀವ್ರ ಉಸಿರಾಟದ ಸಮಸ್ಯೆ ಅಥವಾ ಐಎಲ್‌ಐ ಇದ್ದವರಿಗೆ ಕೊರೊನಾ ಸೋಂಕು ತಗುಲಿದರೆ ಪ್ರಾಣಕ್ಕೆ ಅಪಾಯ ಹೆಚ್ಚು ಎನ್ನುವುದು ತಜ್ಞರ ವರದಿಯಾಗಿದೆ. ಹೀಗಾಗಿ, ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಯೋಜಿಸಲಾಗಿದೆ.

ಸಲಹೆ ನೀಡಲಾಗಿದೆ:

‘ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯು ಮಹತ್ವದ್ದಾಗಿದೆ. ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಅವರು ಅನಗತ್ಯವಾಗಿ ಮನೆಯಿಂದ ಹೊರಬಾರದಂತೆಯೂ ತಿಳಿಸಲಾಗಿದೆ. ಆಗಾಗ ಅವರ ಆರೋಗ್ಯ ಸ್ಥಿತಿಗತಿ ಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

‘ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಹಾಗೂ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರತ್ತ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಮೂರ್ನಾಲ್ಕು ದಿನಗಳಿಗೊಮ್ಮೆ ತಪಾಸಣೆ ನಡೆಸುವಂತೆ ತಿಳಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT