ಸೋಮವಾರ, ಆಗಸ್ಟ್ 26, 2019
28 °C
ಬೆಳಗಾವಿ– ಸುಬ್ರಹ್ಮಣ್ಯದಲ್ಲಿ ರೈಲು ಮಾರ್ಗ ಹಾನಿ

ಮಹಾಮಳೆ; ಭೋರ್ಗರೆದ ಹೊಳೆ; ನಾಲ್ಕು ಜಿಲ್ಲೆಗಳಲ್ಲಿ ಐದು ಸಾವು

Published:
Updated:
Prajavani

ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳು, ಕರಾವಳಿ, ಮಲೆನಾಡು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆ ಬಿರುಸು ಪಡೆದುಕೊಂಡಿದ್ದು, ಈ ಭಾಗದ ಜನರು ತತ್ತರಿಸಿದ್ದಾರೆ. ಮಳೆ ಹಾಗೂ ನೆರೆಯಿಂದಾಗಿ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.

ಮಳೆ ಸಂಬಂಧಿ ಅನಾಹುತಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೆಳಗಾವಿ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದಾರೆ. ಮಳೆ ಮುಂದುವರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಎರಡು ದಿನ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಸಂಚಾರ ಬಂದ್: ಮಂಗಳೂರು– ಬೆಂಗಳೂರು ಮಾರ್ಗದ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನ ಸಮೀಪ ಬೃಹತ್‌ ಮರವೊಂದು ಮಂಗಳವಾರ ರಾತ್ರಿ ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಮರ ಉರುಳಿಬಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಭೂಕುಸಿತವೂ ಸಂಭವಿಸಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಪುಣೆ– ಬೆಂಗಳೂರು ಹೆದ್ದಾರಿ, ಶಿರಸಿ– ಯಲ್ಲಾಪುರ– ಕುಮಟಾ, ಶಿರಸಿ– ಕಾರವಾರ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಬಂದ್ ಆಗಿದೆ. ಭಾಗಮಂಡಲ– ತಲಕಾವೇರಿ– ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಮಹಾರಾಷ್ಟ್ರ, ಹುಬ್ಬಳ್ಳಿ ಭಾಗಕ್ಕೆ ತೆರಳಬೇಕಿದ್ದ 85 ಬಸ್ ಸಂಚಾರವನ್ನು ರದ್ದುಪಡಿಸಿದೆ.

ರೈಲು ಸಂಚಾರ ರದ್ದು: ಬೆಳಗಾವಿ– ಖಾನಾಪುರ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದು, ರೈಲು ಮಾರ್ಗಕ್ಕೆ ಹಾನಿಯಾಗಿದೆ. ಪಟ್ನಾ– ವಾಸ್ಕೊ, ಹುಬ್ಬಳ್ಳಿ– ವಾಸ್ಕೊ, ಹಜರತ್ ನಿಜಾಮುದ್ದೀನ್– ವಾಸ್ಕೊ ರೈಲುಗಳು ಬೆಳಗಾವಿ ನಿಲ್ದಾಣದಲ್ಲೇ ನಿಂತಿದ್ದು, ಮುಂದಿನ ಪ್ರಯಾಣ ರದ್ದುಪಡಿಸಲಾಗಿದೆ.

ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮರ ಬಿದ್ದು, ರೈಲು ಸಂಚಾರ ವ್ಯತ್ಯಯವಾಗಿತ್ತು. ಸುಬ್ರಹ್ಮಣ್ಯ– ಸಿರಿಬಾಗಿಲು ನಿಲ್ದಾಣದ ಮಧ್ಯೆ ಮತ್ತೆ ಭೂಕುಸಿತ ಉಂಟಾಗಿದ್ದು, ಯಶವಂತಪುರ– ಕಾರವಾರ ರೈಲನ್ನು ಹಾಸನ– ಮಂಗಳೂರು ಮಾರ್ಗದ ಮಧ್ಯೆ ರದ್ದುಪಡಿಸಲಾಗಿದೆ.

ಉತ್ತರ ಕರ್ನಾಟಕ ಭಾಗದ ವಿವಿಧ ನದಿ ತೀರದ ಹಳ್ಳಿಗಳಿಂದ 2 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲೇ 140ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ತೀವ್ರವಾಗಿದ್ದು, ಕೃಷ್ಣಾ ನದಿ ಉಕ್ಕಿಹರಿಯುತ್ತಿದ್ದು, ಒಳಹರಿವು ಹೆಚ್ಚಾದ ಕಾರಣ ಆಲಮಟ್ಟಿ ಜಲಾಶಯದಿಂದ 4.3 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. 2005ರ ನಂತರ ಇದು ಗರಿಷ್ಠ ಹೊರಹರಿವು. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, 1.65 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ಇದು ಈವರೆಗಿನ ದಾಖಲೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಇದರಿಂದಾಗಿ ಕೈಗಾ ಉಷ್ಣ ವಿದ್ಯುತ್ ಸ್ಥಾವರದ ಮೈಲಾಪುರ ಟೌನ್‌ಶಿಪ್‌ಗೂ ನೀರು ನುಗ್ಗಿದ್ದು, ಹತ್ತು ಗ್ರಾಮಗಳು ಜಲಾವೃತವಾಗಿವೆ. ಲಿಂಗನಮಕ್ಕಿ, ತುಂಗಾ, ಭದ್ರಾ ನದಿಗಳು ಮೈದುಂಬಿಕೊಂಡಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿಗಳ ಭೋರ್ಗರೆತ, ಮತ್ತೊಂದೆಡೆ ಆಲಮಟ್ಟಿ ನಾರಾಯಣಪುರ, ಹಿಪ್ಪರಗಿ ಜಲಾಶಯಗಳ ಹಿನ್ನೀರು ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಜಮಖಂಡಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

 

ಇನ್ನಷ್ಟು..

* ಕೊಡಗಿನಲ್ಲಿ ವರ್ಷಧಾರೆ: ಭಾಗಮಂಡಲ ಜಲಾವೃತ 

* 11 ಸಾವಿರ ಕುಟುಂಬಗಳ ಸ್ಥಳಾಂತರ; ನೊಯ್ಡಾದಲ್ಲಿ ಇಬ್ಬರು ಬಾಲಕಿಯರ ಸಾವು

* ಕೃಷ್ಣೆಗೂ ಕಾಳಿಗೂ ಜುಗಲ್‌ಬಂದಿ: ಜನ ಜಲಬಂಧಿ

Post Comments (+)