ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಬಿರುಸಾದ ಮಳೆ

Last Updated 7 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಮಂಗಳವಾರ ಮಳೆ ಬಿರುಸಾಗಿದೆ. ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಪೌಂಡ್‌ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗೋಳಿತೊಟ್ಟು ಬಾಲಮಂದಿರ ಬಳಿ ಕಾಂಪೌಂಡ್‌ ಕುಸಿದು ಶೋಭಾ (49) ಮೃತಪಟ್ಟಿದ್ದಾರೆ.ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಬಯ್ಯಬೆ, ಪುಣಚ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ, ಕಾಪು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಗಾಳಿ ಮಳೆಯ ಅಬ್ಬರಕ್ಕೆ ಶಿರೂರು ಗ್ರಾಮದಲ್ಲಿ ಮನೆಗೆ ಭಾಗಶಃ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು, ಕೊಟ್ಟಿಗೆಹಾರದಲ್ಲಿ ಧಾರಾಕಾರವಾಗಿ ಸುರಿದಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಮಳೆ ಬಿರುಸಾಗಿತ್ತು. ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ನೀರಿನಮಟ್ಟ ಹೆಚ್ಚಳವಾಗಿದೆ.

ಮೈದುಂಬಿದ ಕಾವೇರಿ ನದಿ:ಕೊಡಗು ಜಿಲ್ಲೆಯ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. ಸ್ನಾನಘಟ್ಟವು ಮುಳುಗುವ ಹಂತ ತಲುಪಿದೆ.

ನಾಪೋಕ್ಲು, ತಲಕಾವೇರಿಯಲ್ಲೂ ಬಿಡದೆ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯು ಕೊಡಗಿನಲ್ಲಿ ಮೈದುಂಬಿ ಹರಿಯುತ್ತಿದೆ. ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಕಿರು ಸೇತುವೆ ಮೇಲೆ, ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್‌ ಆಗಿದೆ.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ 99.80 ಅಡಿ ತಲುಪಿದೆ. ಇದೇ ರೀತಿ ಮಳೆ ಮುಂದುವರಿದರೆ ಜುಲೈ ಅಂತ್ಯದ ವೇಳೆ ಜಲಾಶಯ ಭರ್ತಿಯಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಉತ್ತಮ ಮಳೆ:ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿತುಂತುರು ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕಾಗಿದ್ದು, ಶಿರಸಿ ಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೇ ಸುರಿಯಿತು. ಸಿದ್ದಾಪುರ ದಲ್ಲೂ ಇಡೀ ದಿನ ರಭಸದ ಮಳೆ ಆಯಿತು.ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಧಾರಣ ಮಳೆ ಯಾಗಿದೆ.ಧಾರವಾಡ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾ ಯಿತು.ರಾಯಚೂರು ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ.

ಮಳೆ ಎಲ್ಲಿ, ಎಷ್ಟು: ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಮಂಗಳವಾರ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಭಾಗಮಂಡಲ 13, ಕೊಲ್ಲೂರು, 7, ಸಿದ್ದಾಪುರ, ಪುತ್ತೂರು, ಹೊಸನಗರ 6, ಸುಬ್ರಹ್ಮಣ್ಯ 5, ಬೆಳ್ತಂಗಡಿ, ಕೋಟಾ 4, ಮಂಗಳೂರು, ಕಾರ್ಕಳ, ಕುಂದಾಪುರ, ಗೋಕರ್ಣ, ಮೂಡುಬಿದಿರೆ, ಶೃಂಗೇರಿ, ಸಾಗರ 3, ಉಡುಪಿ, ಸಕಲೇಶಪುರ, ಮಡಿಕೇರಿ, ಹಾಸನ 2, ಶಿವಮೊಗ್ಗ, ಬೇಲೂರು, ಶಿಕಾರಿಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇದೇ 8ರಿಂದ 12ರವರೆಗೆ ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಐದೂ ದಿನ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ. ಸಮುದ್ರದಿಂದ ವೇಗವಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಜು.9ರಿಂದ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ.

ತಲಕಾವೇರಿ ಬಳಿ ಭೂಕುಸಿತ

ಮಡಿಕೇರಿ: ಭಾಗಮಂಡಲ– ತಲ ಕಾವೇರಿ ನಡುವೆ ಮಂಗಳವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಈ ಭಾಗದಲ್ಲಿ ಜನವಸತಿಯಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ತಲಕಾವೇರಿಗೆ ವಾಹನ ಸಂಚಾರ ಬಂದ್‌ ಆಗಿದೆ.

ಮಡಿಕೇರಿಯ ಆಕಾಶವಾಣಿ ಟವರ್‌ ಬಳಿಯೂ ಮಣ್ಣು ಕುಸಿದಿದ್ದು, ತಡೆಗೋಡೆ ಕಾಮಗಾರಿಯಲ್ಲಿ ನಿರತರಾಗಿದ್ದ 7 ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ಆಕಾಶವಾಣಿ ಬಳಿ ನಿರ್ಮಾಣ ಹಂತದ ತಡೆಗೋಡೆ ಬಳಿ ಮಂಗಳವಾರ ಮಣ್ಣು ಕುಸಿದಿರುವುದು

ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಣ್ಣು ತೇವಗೊಂಡು ಮಂಗಳವಾರ ದಿಢೀರ್‌ ಕುಸಿದಿದೆ. 2018ರಲ್ಲೂ ಇದೇ ಸ್ಥಳದಲ್ಲಿ ಗುಡ್ಡ ಕುಸಿದಿತ್ತು. ಇದೀಗ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿತ್ತು.

ಮಣ್ಣು ಕುಸಿಯುತ್ತಿರುವುದು ಗಮನಕ್ಕೆ ಬಂದ ತಕ್ಷಣವೇ ಕಾರ್ಮಿಕರು ರಸ್ತೆಗೆ ಓಡಿಬಂದಿದ್ದರಿಂದ ದುರಂತ ತಪ್ಪಿದೆ. ಅಪಾಯದ ಅರಿವಿದ್ದರೂ ತಡೆಗೋಡೆ ಕಾಮಗಾರಿ ವಿಳಂಬ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT