ಭಾನುವಾರ, ಆಗಸ್ಟ್ 18, 2019
26 °C
ಅಡುಗೆ ಅನಿಲ ಸಿಲಿಂಡರ್, ನೀರಿಲ್ಲದಿರುವುದರಿಂದ ಬಂದ್

ಇಂದಿರಾ ಕ್ಯಾಂಟೀನ್‌’ ಮುಚ್ಚಿಸಿದ ಮಳೆ; ನೀಗಿಸುತ್ತಿಲ್ಲ ಹಸಿವು

Published:
Updated:
Prajavani

ಬೆಳಗಾವಿ: ನಗರದ 6 ಕಡೆಗಳಲ್ಲಿ ಸರ್ಕಾರದಿಂದ ಆರಂಭಿರುವ ‘ಇಂದಿರಾ ಕ್ಯಾಂಟೀನ್‌’ಗಳನ್ನು ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಅಡುಗೆ ಅನಿಲ ಸಿಲಿಂಡರ್‌ಗಳು ಮತ್ತು ಕುಡಿಯುವ ನೀರಿನ ಪೂರೈಕೆ ಕೊರತೆಯಿಂದಾಗಿ ವಾರದಿಂದಲೂ ಮುಚ್ಚಲಾಗಿದೆ. ಇದನ್ನು ನಂಬಿರುವ ಶ್ರಮಿಕ ವರ್ಗದ ಸಾವಿರಾರು ಮಂದಿ ಹೆಚ್ಚಿನ ಹಣ ನೀಡಿ ಹೋಟೆಲ್‌ಗಳ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅತಿಹೆಚ್ಚು ಜನಸಂದಣಿ ಕಂಡುಬರುವ ಕೇಂದ್ರ ಬಸ್‌ ನಿಲ್ದಾಣ ಸಮೀಪ, ಜಿಲ್ಲಾಸ್ಪತ್ರೆ, ಎಪಿಎಂಸಿ ರಸ್ತೆಯ ನೆಹರೂನಗರ, ರುಕ್ಮಿಣಿನಗರ, ಗೋವಾವೇಸ್‌ ಹಾಗೂ ನಾಥ ಪೈ ವೃತ್ತದಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ₹ 5ಕ್ಕೆ ಉಪಾಹಾರ, ತಲಾ ₹ 10ಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಇಲ್ಲಿ ಸಿಗುತ್ತಿತ್ತು. ಕ್ಯಾಂಟೀನ್‌ ಒಂದರಲ್ಲಿ ನಿತ್ಯ 1,500 ಮಂದಿಗೆ ಕೂಪನ್‌ ಸಿಗುತ್ತಿತ್ತು. ಉತ್ತಮ ಪ್ರತಿಕ್ರಿಯೆಯೂ ಇತ್ತು. ಅವುಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲು ಧಾರಾಕಾರ ಮಳೆ ಕಾರಣವಾಗಿದೆ. ಇದರಿಂದಾಗಿ, ಬಡ–ಮಧ್ಯಮ ವರ್ಗದವರು ತೊಂದರೆ ಅನುಭವಿಸುವಂತಾಗಿದೆ.

ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ:

ನೆರೆಯಿಂದಾಗಿ ವಿವಿಧೆಡೆ, ವಿಶೇಷವಾಗಿ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಟ್ರಕ್‌ಗಳು ಸೇರಿದಂತೆ ಗೂಡ್ಸ್ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ಅಡುಗೆ ಅನಿಲ ಸಿಲಿಂಡರ್‌ಗಳು ಪೂರೈಕೆಯಾಗಿಲ್ಲ. ಇದರ ‘ಬಿಸಿ’ ಇಂದಿರಾ ಕ್ಯಾಂಟೀನ್‌ಗಳಿಗೂ ತಟ್ಟಿದೆ. ನಗರಕ್ಕೆ ನೀರು ಪೂರೈಸುವ ಹುಕ್ಕೇರಿ ತಾಲ್ಲೂಕಿನ ‍ಹಿಡಕಲ್‌ ಹಾಗೂ ಹಿಂಡಲಗಾ ‍ಪಂಪ್‌ಹೌಸ್‌ ಮುಳುಗಡೆ ಆಗಿರುವುದರಿಂದ, ನೀರಿನ ಕೊರತೆ ಉಂಟಾಗಿದೆ.

ನಿತ್ಯವೂ ಸಾವಿರಾರು ಮಂದಿ ಅವಲಂಬಿಸಿರುವ ಈ ಕ್ಯಾಂಟೀನ್‌ಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪಂಪ್‌ಹೌಸ್‌ ಇನ್ನೂ ದುರಸ್ತಿಯಾಗಿಲ್ಲ. ಹೀಗಾಗಿ, ಇನ್ನಷ್ಟು ದಿನಗಳವರೆಗೆ ಕ್ಯಾಂಟೀನ್‌ಗಳ ಪುನರಾರಂಭವಾಗುವ ಸಾಧ್ಯತೆ ಇಲ್ಲ.

ಹಸಿವು ನೀಗಿಸುತ್ತಿಲ್ಲ:

ಉಪಾಹಾರ ಹಾಗೂ ಊಟದ ಸಮಯಕ್ಕೆ ಇಲ್ಲಿಗೆ ಬರುವವರು ಬೀಗ ಹಾಕಿರುವುದನ್ನು ನೋಡಿ ಹಸಿವಿನಿಂದಲೇ ವಾಪಸಾಗುತ್ತಿದ್ದಾರೆ. ಪ್ರವಾಹಪೀಡಿತರಿಗೆ ಈ ಕ್ಯಾಂಟೀನ್‌ಗಳಿಂದ ಪ್ರಯೋಜನ ದೊರೆಯುತ್ತಿಲ್ಲ.

‘ಪ್ರವಾಹದಿಂದಾಗಿ ಅಡುಗೆ ಅನಿಲ ಸಿಲಿಂಡರ್, ನೀರಿನ ಪೂರೈಕೆ ಇರಲಿಲ್ಲ. ಆದ್ದರಿಂದ, ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿಯವರ ಬಳಿ ನೀರು ಖರೀದಿಸಿ ಆಹಾರ ತಯಾರಿಸುವುದರಿಂದ, ಜನರಿಗೆ ಆರೋಗ್ಯ ಸಮಸ್ಯೆ ಆಗಬಾರದೆಂದು ನಿರ್ಧರಿಸಿದ್ದೆವು. ಸಿಲಿಂಡರ್‌ಗಳು ಬಂದ ಮಾಹಿತಿ ಇದೆ. ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್ಎಸ್‌ಬಿ) ಅಧಿಕಾರಿ ಜೊತೆ ಮಾತಾಡಿದ್ದೇನೆ. ಟ್ಯಾಂಕರ್ ನೀರು (‌ಬಾವಿಗಳಿಂದ) ಪೂರೈಸುವುದಾಗಿ ತಿಳಿಸಿದ್ದಾರೆ. ಎಲ್ಲ ಕಡೆಗೂ ವ್ಯವಸ್ಥೆಯಾದ ನಂತರ ಕ್ಯಾಂಟೀನ್‌ಗಳು ಪುನರಾರಂಭಗೊಳ್ಳಲಿವೆ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಗಳಿಗೂ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಗಸ್ಟ್‌ ಮೊದಲ ವಾರ ಬುಕ್‌ ಮಾಡಿದವರಿಗೇ ಇನ್ನೂ ಸಿಕ್ಕಿಲ್ಲ.

Post Comments (+)