ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಬಿರುಸಿನ ಮಳೆ: 10 ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'

Last Updated 25 ಏಪ್ರಿಲ್ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ಗುಡುಗು ಸಹಿತ, ಧಾರಾಕಾರ ಮಳೆಯಾಗಿದೆ. ಚಳ್ಳಕೆರೆಯಲ್ಲಿ ಸಿಡಿಲು ಬಡಿದು 10 ಮೇಕೆಗಳು ಸತ್ತಿವೆ. ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಚಾವಣಿ ಬಿದ್ದು ಒಬ್ಬರಿಗೆ ಪೆಟ್ಟಾಗಿದೆ.

ಚಿಕ್ಕಬಳ್ಳಾಪುರ ನಗರ ಹಾಗೂ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಮಳೆ ಸುರಿಯಿತು.ಚಿಂತಾಮಣಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಯಿತು. ಕೆಲವೆಡೆ ಮನೆ, ಅಂಗಡಿಗಳ ಚಾವಣಿ ಶೀಟ್‌ಗಳು ಹಾರಿವೆ. ತುಮಕೂರು ನಗರ, ತುರುವೇಕೆರೆ ಪಟ್ಟಣದಲ್ಲಿ ಹದವಾದ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಉತ್ತಮ ಮಳೆ ಸುರಿದಿದೆ.ನಗರದಲ್ಲಿ ಈ ವರ್ಷದ ಮೊದಲ ಮಳೆ ಇದಾಗಿದೆ.ಮಂಗಳೂರು, ಉಳ್ಳಾಲ, ತೊಕ್ಕೊಟ್ಟು, ಬೊಂದೇಲ್‌, ಪಂಡಿತ್‌ಹೌಸ್‌, ನಂತೂರು, ದೇರಳಕಟ್ಟೆ, ಬೋಳಾರ ಸಹಿತ ಹಲವು ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ಸರ್ಕಾರಿ ಪಾಠಶಾಲೆಯ ರಂಗಮಂದಿರದ ಚಾವಣಿ ಪಕ್ಕದ ಮನೆ ಮೇಲೆ ಬಿದ್ದು, ಒಬ್ಬರಿಗೆ ಪೆಟ್ಟಾಗಿದೆ.

ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಅರ್ಧ ಗಂಟೆ ಕಾಲ ಉತ್ತಮ ಮಳೆಯಾಗಿದೆ.

10 ಮೇಕೆಗಳ ಸಾವು:ಚಳ್ಳಕೆರೆ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದೆ. ದೇವರಹಳ್ಳಿ ಗ್ರಾಮದ ಅಂಜಿನಪ್ಪ ಮತ್ತು ಹನುಮಂತಪ್ಪ ಅವರ ತಲಾ ಐದು ಮೇಕೆಗಳು ಸಿಡಿಲು ಬಡಿದು ಮೃತಪಟ್ಟಿವೆ.

10 ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'
ಬೆಂಗಳೂರು: ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇದೇ 26ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಭಾನುವಾರದವರೆಗೆ 'ಯೆಲ್ಲೊ ಅಲರ್ಟ್' ಘೋಷಿಸಿದೆ.

ದಕ್ಷಿಣ ಒಳನಾಡಿನಲ್ಲಿ ಏ.27ರಿಂದ ಮಳೆ ಕಡಿಮೆಯಾಗಲಿದ್ದು, ಗುಡುಗು, ಸಿಡಿಲು ಹೆಚ್ಚಾಗಿರಲಿದೆ. ಕರಾವಳಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಜೋರು ಮಳೆ ಸುರಿದಿದ್ದು, ಮಂಗಳೂರಿನಲ್ಲಿ ಗರಿಷ್ಠ 5 ಸೆಂ.ಮೀ ಮಳೆಯಾಗಿದೆ. ಪಣಂಬೂರು, ಮಧುಗಿರಿ 3, ಹಿರಿಯೂರು, ಚಿಕ್ಕಮಗಳೂರು ಹಾಗೂ ಆಲೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರ್ಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, ಮಡಿಕೇರಿಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT