ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ 25 ಸೇತುವೆ ಮುಳುಗಡೆ: ಕೃಷ್ಣಾ ನದಿ ತೀರದಲ್ಲಿ ಹೈಅಲರ್ಟ್‌

8 ಗಂಜಿ ಕೇಂದ್ರ ಸ್ಥಾಪನೆ
Last Updated 4 ಆಗಸ್ಟ್ 2019, 11:57 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ನಗರ ಮತ್ತು ತಾಲ್ಲೂಕಿನಾದ್ಯಂತ, ಖಾನಾಪುರದಲ್ಲಿ ಭಾನುವಾರ ಭಾರಿ ಮಳೆ ಮುಂದುವರಿದಿದೆ. ಬೈಲಹೊಂಗಲ, ಹುಕ್ಕೇರಿ, ಗೋಕಾಕ, ಹಿರೇಬಾಗೇವಾಡಿ, ಹಾರೋಗೇರಿಯಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, 6 ಗೇಟ್‍ಗಳಿಂದ 65ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಕೃಷ್ಣಾ ನದಿ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ 94.20 ಟಿಎಂಸಿ ನೀರು ಸಂಗ್ರಹವಾಗಿದೆ. ಕೊಯ್ನಾದಲ್ಲಿ 242 ಮಿ.ಮೀ., ವಾರಣಾದಲ್ಲಿ 230 ಮಿ.ಮೀ., ಮಹಾಬಲೇಶ್ವರದಲ್ಲಿ 252 ಮಿ.ಮೀ. ಹಾಗೂ ನವಜಾದಲ್ಲಿ 196 ಮಿ.ಮೀ. ಮಳೆಯಾಗಿದೆ. ಹೀಗಾಗಿ, ಕೊಯ್ನಾ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಪರಿಣಾಮ, ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿವೆ. ಸಾವಿರಾರು ಎಕರೆ ಜಮೀನುಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.96 ಲಕ್ಷ ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದಲೂ 34ಸಾವಿರ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತಿದೆ. ಜಿಲ್ಲೆಯಲ್ಲಿ 25 ಬ್ರಿಡ್ಜ್‌ ಕಂ ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಪ್ರವಾಹ ಭೀತಿಯು ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.

ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಕಾಗವಾಡ ತಾಲ್ಲೂಕುಗಳ ನಾಗನೂರ ಪಿ.ಕೆ., ಸಪ್ತಸಾಗರ, ಕುಸನಾಳ, ಜಂಜರವಾಡ, ಇಂಗಳಿ, ಕಲ್ಲೋಳ, ಸಿದ್ದಾಪುರ, ಗೋಕಾಕ ತಾಲ್ಲೂಕು ಕುಂದರಗಿಯ ಅಡವಿಸಿದ್ದೇಶ್ವರ ಮಠದಲ್ಲಿದ್ 15 ಮಂದಿ ಸೇರಿ ಒಟ್ಟು 850 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನಡುಗಡ್ಡಯಾಗಿದ್ದ ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿಯ ದೋಣಿ ಪ್ರದೇಶದಲ್ಲಿದ್ದ ಬಾಣಂತಿ, ಮಗು ಹಾಗೂ ಪೋಷಕರನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಬೋಟ್‌ನಲ್ಲಿ ಸುರಕ್ಷಿತ ಪ್ರದೇಶಕ್ಕೆ ಕರೆತಂದರು. ಸ್ಥಳೀಯರ ಒತ್ತಾಯದ ಮೇರೆಗೆ, 100ಕ್ಕೂ ಹೆಚ್ಚಿನ ಜಾನುವಾರುಗಳನ್ನೂ ಬೋಟುಗಳಲ್ಲಿ ಸಾಗಿಸಿದರು.

‘ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ತಾಲ್ಲೂಕುಗಳ ವಿವಿಧ ಹಳ್ಳಿಗಳಿಂದ ಸ್ಥಳಾಂತರಿಸಲಾದ ಜನರಿಗಾಗಿ ಇಂಗಳಿ, ಯಡೂರವಾಡಿ, ಶಿವಗೂರ, ಜುಗುಳ ಶಹಾಪುರ, ರಡ್ಡೇರಟ್ಟಿ, ಸಪ್ತ ಸಾಗರ, ನಾಗನೂರ, ಬಣಜವಾಡ ಗ್ರಾಮಗಳ ಸರ್ಕಾರಿ ಶಾಲೆ, ಸಮುದಾಯ ಭವನಗಳಲ್ಲಿ 8 ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರವಾಹ ಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಚಿಕ್ಕೋಡಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

‘ಇಂಗಳಿ, ಮಾಂಜರಿ, ಯಡೂರ ಹಾಗೂ ಅಥಣಿಯಲ್ಲಿ ಪರಿಹಾರ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್ ತಂಡದ 45 ಮಂದಿ, ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದ ಸೇನೆಯ 90 ಹಾಗೂ ಅಗ್ನಿಶಾಮಕ ದಳದ 75 ಸಿಬ್ಬಂದಿ ನಿಯೋಜಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಪೊಲೀಸರನ್ನೂ ಬಳಸಲಾಗುತ್ತಿದೆ. ಸದ್ಯ 30 ಬೋಟ್‌ಗಳನ್ನು ಬಳಸಲಾಗುತ್ತಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಬೈಲಹೊಂಗಲ ತಾಲ್ಲೂಕಿನ ತಿಗಡಿ ಹರಿನಾಲಾ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರು ಹೊರಬಿಡಲಾಗುತ್ತಿದೆ. 2015ರ ನಂತರ ಇದು ತುಂಬಿರಲಿಲ್ಲ.

ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿಯ ಎನ್‌.ಎಚ್‌.–4 ಪಕ್ಕದ ಹಳೆ ಸೇತುವೆ ಮುಳುಗಡೆಯಾಗಿದೆ. ನದಿ ಅಕ್ಕ-ಪಕ್ಕದ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪ ಸಂಪೂರ್ಣ ಮುಳುಗುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT