ಭಾನುವಾರ, ಆಗಸ್ಟ್ 9, 2020
25 °C

61 ಎಪಿಪಿಗಳ ಅಮಾನತು ಆದೇಶ ಎತ್ತಿಹಿಡಿದ ಕೆಎಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಿಖಿತ ಪರೀಕ್ಷೆಯಲ್ಲಿ ನಕಲು ಹಾಗೂ ಉತ್ತರ ಪತ್ರಿಕೆಗಳ‌ ಮೌಲ್ಯಮಾಪನದ ಅಕ್ರಮಕ್ಕೆ ಸಂಬಂಧಿಸಿದಂತೆ 61 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು (ಎಪಿಪಿ)‌ ಸೇವೆಯಿಂದ ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಎತ್ತಿಹಿಡಿದಿದೆ.

ಈ ಸಂಬಂಧ ಕುಮುದಿನಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಆರ್. ಬಿ. ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ಎನ್. ಶಿವಶೈಲಂ ಅವರನ್ನು ಒಳಗೊಂಡ ನ್ಯಾಯಪೀಠ ಈ ಕುರಿತ ಆದೇಶ ಪ್ರಕಟಿಸಿದೆ.

ಸರ್ಕಾರದ ಪರವಾದ ಮಂಡಿಸಿದ್ದ ವಕೀಲ ಜಿ.ರಮೇಶ್ ನಾಯಕ್, 'ಈಗಾಗಲೇ ಅರ್ಜಿದಾರರ ವಿರುದ್ಧದ ಆರೋಪಗಳು ತನಿಖೆಯಲ್ಲಿ ದೃಢಪಟ್ಟಿವೆ. ಹಾಗಾಗಿಯೇ ಸರ್ಕಾರ ಅಮಾನತು ನಿರ್ಧಾರ ಕೈಗೊಂಡಿದೆ' ಎಂದು ವಿವರಿಸಿದ್ದರು.

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, 'ಈ ಪ್ರಕರಣದಲ್ಲಿ ವ್ಯಾಪಕ ಅಕ್ರಮಗಳ ಆರೋಪ ಇರುವ ಕಾರಣ ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇದೆ. ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ಹೇಳಿದೆ.

ಪಿಐಎಲ್: '192 ಎಪಿಪಿಗಳ ನೇಮಕ ಅಕ್ರಮದಲ್ಲಿ 61 ಅಭ್ಯರ್ಥಿಗಳು ಕಳಂಕಿತರು ಎಂದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆದರೆ, ಈ ವರದಿ ಆಧರಿಸಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ವಕೀಲ ಎಸ್. ಉಮಾಪತಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಕಳಂಕಿತ 61 ಎಪಿಪಿಗಳನ್ನು ರಾಜ್ಯ ಪ್ರಾಸಿಕ್ಯೂಷನ್ ಇಲಾಖೆ 2020ರ ಮಾರ್ಚ್ 20ರಂದು ಅಮಾನತುಗೊಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು