ಭಾನುವಾರ, ಆಗಸ್ಟ್ 25, 2019
27 °C
ಹೆಚ್ಚುತ್ತಿದೆ ಗೌರವ ಡಾಕ್ಟರೇಟ್‌ ಪಡೆಯುವ ಹುಚ್ಚು

ಸ್ವಾಮೀಜಿ, ಎಫ್‌ಡಿಎ,ದಿನಸಿ ವ್ಯಾಪಾರಿಯೂ ‘ಸಾಧಕರು’!

Published:
Updated:

ದಾವಣಗೆರೆ: ದೇಶ–ವಿದೇಶಗಳ ವಿಶ್ವವಿದ್ಯಾಲಯ, ಸಂಸ್ಥೆಗಳು ಬಿಕರಿ ಮಾಡುವ ‘ಗೌರವ ಡಾಕ್ಟರೇಟ್‌’ (ಗೌಡಾ) ಪದವಿ ಪಡೆದು ಬೀಗುವ ‘ಸಾಧಕರು’ ಜಿಲ್ಲೆಯಲ್ಲೂ ಸದ್ದು ಮಾಡುತ್ತಿದ್ದಾರೆ.

ಜಿಲ್ಲೆಯ ದಿನಸಿ ಅಂಗಡಿ ವ್ಯಾಪಾರಿ, ಪ್ರೌಢಶಾಲೆಯ ಎಫ್‌ಡಿಎ, ಶಿಕ್ಷಕರು, ಸ್ವಾಮೀಜಿ, ಜನಪದ ಕಲಾವಿದರು ಹಾಗೂ ಪತ್ರಕರ್ತರು ಸಹ ‘ಗೌಡಾ’ ಗಿಟ್ಟಿಸಿಕೊಂಡು ಬಂಧು–ಬಳಗದವರಿಂದ ಸನ್ಮಾನ ಮಾಡಿಸಿ
ಕೊಂಡು ಅಭಿನಂದನೆಗಳ ಮಹಾಪೂರದಲ್ಲಿ ಸಂಭ್ರಮಿಸುವುದು ಸುದ್ದಿಯಾಗುತ್ತಿದೆ.

‘ಬಸವತತ್ವ ಪ್ರಸರಣ, ಶಿಕ್ಷಣ ದಾಸೋಹ’ ಮಾಡಿರುವ ಸಾಧನೆಗಾಗಿ ಜಿಲ್ಲೆಯ ಸ್ವಾಮೀಜಿಯೊಬ್ಬರಿಗೆ ಅಮೆರಿಕದ ವಿಶ್ವವಿದ್ಯಾಲಯವೊಂದು ಕಳೆದ ವರ್ಷ ಗೌಡಾ ನೀಡಿತ್ತು. ಬಳಿಕ ಭಕ್ತರೆಲ್ಲ ಸೇರಿ ಸ್ವಾಮೀಜಿಗೆ ಅದ್ದೂರಿಯಾಗಿ ಸನ್ಮಾನವನ್ನೂ ಮಾಡಿದ್ದರು.

‘ನಮ್ಮ ಸಮಾಜದ ಕ್ಲಬ್‌ನ ಅಧ್ಯಕ್ಷನಾಗಿದ್ದ ನಾನು ದೇವಸ್ಥಾನ ಟ್ರಸ್ಟ್‌ನಲ್ಲಿದ್ದು, ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೆ. ನನ್ನ ಕೆಲಸವನ್ನು ನೋಡಿದ ನಿವೃತ್ತ ಪ್ರಾಂಶುಪಾಲರೊಬ್ಬರು ನಾನು ಗೌರವ ಡಾಕ್ಟರೇಟ್‌ಗೆ ಅರ್ಹನಾಗಿದ್ದು, ಬೆಂಗಳೂರಿನ ಸಂಸ್ಥೆಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಅರ್ಜಿ ಸಲ್ಲಿಸಿದ ಬಳಿಕ ಸಂಸ್ಥೆಯ ಕೋರಿಕೆ ಮೇರೆಗೆ ₹ 15 ಸಾವಿರದ ಡಿಡಿ ಕಳುಹಿಸಿಕೊಟ್ಟಿದ್ದೆ. ಕಳೆದ ವರ್ಷ ಕಠ್ಮಂಡುವಿನಲ್ಲಿ ಪದವಿ ಪ್ರದಾನ ಸಮಾರಂಭ ಇಟ್ಟುಕೊಂಡಿದ್ದರು. ಅಲ್ಲಿಗೆ ಹೋಗಲು ಆಗಿರಲಿಲ್ಲ. ಮನೆಗೇ ಪ್ರಮಾಣಪತ್ರ ಕಳುಹಿಸಿಕೊಟ್ಟಿದ್ದರು. ಅದೇ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶಾಲೆಯೊಂದರ ಪ್ರಾಂಶುಪಾಲರಿಗೂ ಗೌರವ ಡಾಕ್ಟರೇಟ್‌ ಪದವಿ ನೀಡಲಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ‘ಗೌರವ ಡಾಕ್ಟರೇಟ್‌’ ಪಡೆದುಕೊಂಡಿರುವ ದಿನಸಿ ಅಂಗಡಿ ವ್ಯಾಪಾರಿ ಮಾಹಿತಿ ನೀಡಿದರು.

 ಜಿ.ಪಂ ಸದಸ್ಯರಿಗೂ ‘ಗೌರವ’

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಅಮೆರಿಕ ವಿಶ್ವವಿದ್ಯಾಲದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಇದಕ್ಕಾಗಿ ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಅವರು ಪಾಲ್ಗೊಳ್ಳುವ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿನ ಜತೆ ‘ಡಾ’ ಇರಬೇಕು ಎಂದು ಅಪೇಕ್ಷೆ ಪಡುತ್ತಾರೆ. ಇಲ್ಲವಾದರೆ, ‘ಶಿಷ್ಟಾಚಾರ ಪಾಲನೆ ಮಾಡಲು ಬರುವುದಿಲ್ವ’ ಎಂದು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಅಮೆರಿಕ ವಿಶ್ವವಿದ್ಯಾಲಯದ ಹೆಸರಿನಲ್ಲಿ ಈ ಪದವಿಯನ್ನು ₹ 20 ಸಾವಿರದಿಂದ ₹ 25 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ರಾಜಕಾರಣಿಗಳ ಗುಂಪೊಂದು ಏಕಕಾಲಕ್ಕೆ ಇಂತಹ ಪದವಿಗೆ ಭಾಜನವಾಗಿದೆ. ಹೀಗೆ ಪದವಿ ಪಡೆದ ಪ್ರಭಾವಿ ರಾಜಕಾರಣಿಯೊಬ್ಬರು ವಿಧಾನಸಭಾ ಚುನಾವಣೆಯ ಅಖಾಡಕ್ಕೂ ಇಳಿದಿದ್ದರು.

**

ಹಣ ಪಡೆದು ಗೌಡಾ ನೀಡುವ ವಿ.ವಿ, ಸಂಸ್ಥೆಗಳ ಮಾನ್ಯತೆಯನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು.
- ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ, ಜಿಲ್ಲಾ ಕಸಾಪ ಅಧ್ಯಕ್ಷ

Post Comments (+)