ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌: ಗ್ಯಾಂಗ್‌ ಸೆರೆ

ಅಶ್ಲೀಲ ಸಿ.ಡಿ ಬಳಸಿ ಬಿಜೆಪಿ ಶಾಸಕರೊಬ್ಬರ ಬ್ಲ್ಯಾಕ್‌ಮೇಲ್‌
Last Updated 28 ನವೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರತಿನಿಧಿಗಳನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಇಬ್ಬರು ಯುವತಿಯರ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.

ಸೈಬರ್‌ ಕ್ರೈಂ ಠಾಣೆಯಲ್ಲಿ ನ. 23ರಂದು ದಾಖಲಾದ ದೂರಿನ ಬೆನ್ನುಬಿದ್ದ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್‌ ನೇತೃತ್ವದ ತಂಡ, ಜಾಲದ ಪ್ರಮುಖ ಆರೋಪಿ ರಾಘವೇಂದ್ರ ಅಲಿಯಾಸ್‌ ರಘು, ಆತನ ಗೆಳತಿ ಪುಷ್ಪ, ಮಂಜುನಾಥ್‌, ಆತನ ಸ್ನೇಹಿತೆ ಪುಷ್ಪಾವತಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದೆ.

ಆರೋಪಿಗಳು, ಬಿಜೆಪಿ ಶಾಸಕರೊಬ್ಬರ ಅಶ್ಲೀಲ ಸಿ.ಡಿ ಇಟ್ಟುಕೊಂಡು ₹ 10 ಕೋಟಿ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಪ್ರಮುಖ ಆರೋಪಿ ರಘು ಮನೆಯಿಂದ ಪೆನ್‌ಡ್ರೈವ್‌ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಯುವತಿಯ ಸೊಂಟ ಸವರುತ್ತಿರುವ ಫೋಟೊವನ್ನು ಆರಂಭದಲ್ಲಿ ಶಾಸಕಗೆ ಕಳುಹಿಸಿದ್ದ ರಘು, ₹ 50 ಕೋಟಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎನ್ನುವುದು ಗೊತ್ತಾದ ಬಳಿಕ ಫೋಟೊದಲ್ಲಿದ್ದ ಯುವತಿ, ತಾನೇ ಮಾತುಕತೆಗೆ ಮುಂದಾಗಿ ₹ 10 ಕೋಟಿ ಕೊಡುವಂತೆ ಒಪ್ಪಿಸಲು ಯತ್ನಿಸಿದ್ದಳು ಎಂದೂ ಹೇಳಲಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಜಯಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯ ಬೆನ್ನುಬಿದ್ದ ಸಿಸಿಬಿ ತಂಡ, ಹುಬ್ಬಳ್ಳಿಯಲ್ಲಿ ಬಂಧಿಸುವಲ್ಲಿ ಯಶಸ್ವಿ ಆಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪರಪ್ಪನ ಅಗ್ರಹಾರ ನಿವಾಸಿಯಾದ ರಘು ವಿರುದ್ಧ ಸೈಬರ್ ಕ್ರೈಂ‌ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೊಬೈಲ್ ಆ್ಯಪ್‌ ಮೂಲಕ ಕೆಲವರ ಖಾಸಗಿ ಸಂದೇಶಗಳನ್ನು ತನ್ನ ಮೊಬೈಲ್‌ಗೆ ಬರುವಂತೆ ಆರೋಪಿ ಮಾಡಿಕೊಂಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಈ ಜಾಲದಲ್ಲಿ ಕಿರುತೆರೆಯ ಹಲವು ನಟಿಯರು ಭಾಗಿಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT