ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ ಅಖಾಡದಲ್ಲೊಂದು ಸುತ್ತು| ಕಾಂಗ್ರೆಸ್–ಬಿಜೆಪಿಗೆ ‘ಕುಕ್ಕರ್‌’ ತಾಪ

ಸ್ವಾಭಿಮಾನ–ಪಕ್ಷಾಂತರದ್ದೇ ಚರ್ಚೆ: ಕೋಟಿ ಕುಳಗಳ ದರ್ಬಾರ್
Last Updated 3 ಡಿಸೆಂಬರ್ 2019, 15:01 IST
ಅಕ್ಷರ ಗಾತ್ರ

ಹೊಸಕೋಟೆ: ಶತಕೋಟಿ–ಸಹಸ್ರ ಕೋಟಿ ಆಸ್ತಿಯ ಒಡೆಯರೇ ಅಖಾಡದಲ್ಲಿರುವ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ತಮ್ಮ ಚುನಾವಣಾ ಗುರುತಾದ ‘ಕುಕ್ಕರ್‌’ ಮುಂದಿಟ್ಟುಕೊಂಡು ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ಆತಂಕ ಹೆಚ್ಚಿಸಿದ್ದಾರೆ.

‘ಕೈ’–‘ಕಮಲ’ದಿಂದ ಕ್ಷೇತ್ರ ಕಿತ್ತುಕೊಳ್ಳಲು ‘ಸ್ವಾಭಿಮಾನಿ’ ಘೋಷಣೆ ಯಡಿ ಕಣಕ್ಕೆ ಇಳಿದಿರುವ ಶರತ್ ಹರಸಾಹಸ ಪಡುತ್ತಿದ್ದರೆ, ಇತ್ತೀಚಿನ ಚುನಾವಣೆಗಳಲ್ಲಿ ಎರಡು ಬಾರಿ ‘ಹಸ್ತ’ದ ಆಸರೆಯಿಂದ ಗೆದ್ದಿದ್ದ ಎಂ.ಟಿ.ಬಿ. ನಾಗರಾಜು ಈಗ ‘ಕಮಲ’ ಅರಳಿಸಲು ಶ್ರಮ ಹಾಕುತ್ತಿದ್ದಾರೆ. ಕೊನೆ ಗಳಿಗೆಯಲ್ಲಿ ಸ್ಪರ್ಧೆಗೆ ಧುಮುಕಿದ ಪದ್ಮಾವತಿ ಸುರೇಶ್, ಕಾಂಗ್ರೆಸ್‌ ನಾಮಸ್ಮರಣೆಯೇ ಗೆಲುವು ತಂದುಕೊಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

‘ನನ್ನ ಎದೆ ಬಗೆದರೆ ಸಿದ್ದರಾಮಯ್ಯನವರೇ ಕಾಣಿಸುತ್ತಾರೆ’ ಎಂದು ಹೇಳುತ್ತಿದ್ದ ನಾಗರಾಜು, ಬಿಜೆಪಿಗೆ ಜಿಗಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಎದೆಯಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದಾರೆ. ನಾಗರಾಜು ‘ದ್ರೋಹ’ ಎಸಗಿದ್ದಾರೆಂದು ಸಿದ್ದರಾಮಯ್ಯ, ‘ವಿಶ್ವಾಸ’ ಕೊಟ್ಟಿದ್ದಾ ರೆಂದು ಯಡಿಯೂರಪ್ಪ ನಂಬಿರುವುದರಿಂದಾಗಿ ಈ ಉಪಚುನಾವಣೆ ಇಬ್ಬರು ನಾಯಕರಿಗೂ ಪ್ರತಿಷ್ಠೆಯಾಗಿದೆ.

ಸಿದ್ದರಾಮಯ್ಯನವರ ನಾಮಬಲ, ಜಾತಿಬಲದ ಜತೆಗೆ ಹಣದ ‘ಔದಾರ್ಯ’ದಿಂದಾಗಿ ನಾಗರಾಜು ಅವರು, ಈ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಇಟ್ಟುಕೊಂಡಿರುವ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರ ಎದುರು ಎರಡು ಬಾರಿ ಗೆದ್ದಿದ್ದರು. 2013ರಲ್ಲಿ ಬಚ್ಚೇಗೌಡ, 2018ರಲ್ಲಿ ಬಚ್ಚೇಗೌಡರ ಪುತ್ರ ಶರತ್‌ಗೆ ಮುಖಾಮುಖಿಯಾಗಿದ್ದ ನಾಗರಾಜು, ಗೆಲ್ಲಲು ಪ್ರಯಾಸಪಟ್ಟಿದ್ದರು. ಕ್ಷೇತ್ರದಲ್ಲಿ ಅಂದಾಜು 40 ಸಾವಿರ ಮತಗಳು ಕಾಂಗ್ರೆಸ್‌ನ ಪಾರಂಪರಿಕ ಮತಗಳಂತಿದ್ದು, ಉಳಿದವು ಜಾತಿ, ಹಣ ಹಾಗೂ ಬೇರೆಯದೇ ಕಾರಣಕ್ಕೆ ಬೀಳುತ್ತಿದ್ದರಿಂದಾಗಿ ನಾಗರಾಜು ಅವರು ಬಚ್ಚೇಗೌಡರ ಕುಟುಂಬಕ್ಕೆ ಸವಾಲೊಡ್ಡಿ ಗೆದ್ದಿದ್ದರು. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿ.

‘ಕ್ಷೇತ್ರದಲ್ಲಿ ಬಿಜೆಪಿ ನಿಷ್ಠ ಮತಗಳು ಆ ಪಕ್ಷದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವಷ್ಟು ನಿರ್ಣಾಯಕವಾಗಿಲ್ಲ; ಇಲ್ಲಿ ಬಿಜೆಪಿ ಎಂದರೆ ‘ಬಚ್ಚೇಗೌಡ ಜನತಾ ಪಕ್ಷ’ ಅಷ್ಟೆ. ಬಿಜೆಪಿ ಗೆಲುವು ಇಲ್ಲಿ ಸಲೀಸಲ್ಲ’ ಎಂಬುದು ಶರತ್‌ ಅಭಿಮಾನಿಗಳ ಮಾತು.

ಮಗನಿಗೆ(ಶರತ್‌) ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಚ್ಚೇಗೌಡರು ಮುನಿಸಿಕೊಂಡಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೂ ಬಂದಿಲ್ಲ. ಬೆಂಗಳೂರಿನಲ್ಲಿ ಕುಳಿತುಕೊಂಡು ಕ್ಷೇತ್ರದ ತಮ್ಮ ‘ಹಿತೈಷಿ’ಗಳನ್ನು ಕರೆಸಿಕೊಂಡು ಮಗನ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ. ಇದು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ.

‘ಅಭಿವೃದ್ಧಿಗಾಗಿ ಸ್ಥಳೀಯನಾದ ನನಗೆ ಮತಹಾಕಿ. ದುಡ್ಡು–ಅಧಿಕಾರ ಕ್ಕಾಗಿ ಮತದಾರರಿಗೆ ದ್ರೋಹ ಬಗೆದು ಪಕ್ಷಾಂತರ ಮಾಡಿರುವ ನಾಗರಾಜ್ ಸೋಲಿಸಿ. ಸ್ವಾಭಿಮಾನ ಗೆಲ್ಲಿಸಿ’ ಎಂದು ಪ್ರಚಾರ ಮಾಡುತ್ತಿದ್ದಾರೆ ಶರತ್‌.

‘ಬಚ್ಚೇಗೌಡರು ಐದು ಬಾರಿ ಗೆದ್ದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ನಾನು ಗೆದ್ದ ಮೇಲೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವನ್ನು ಕಲ್ಪಿಸಿದ್ದೇನೆ. ಕ್ಷೇತ್ರ ಮಾದರಿಯಾಗಬೇಕಾದರೆ ಯಡಿಯೂರಪ್ಪನವರ ಕೈ ಬಲಪಡಿಸಬೇಕು. ಅದಕ್ಕಾಗಿ ನನ್ನನ್ನು ಗೆಲ್ಲಿಸಿ’ ಎಂಬುದು ನಾಗರಾಜು ಮನವಿ.

ಒಕ್ಕಲಿಗರು, ಕುರುಬರು, ಮುಸ್ಲಿಂ ಹಾಗೂ ಪರಿಶಿಷ್ಟ ಜಾತಿಯವರು ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು. ಹಾಗಂತ ಒಕ್ಕಲಿಗ ಮತಗಳು ಖುಲ್ಲಂಖುಲ್ಲಾ ಬಚ್ಚೇಗೌಡರ ಬುಟ್ಟಿಯಲ್ಲಿ ಇಲ್ಲ. ಕಾಂಗ್ರೆಸ್‌ ಹಾಗೂ ನಾಗರಾಜು ಜತೆಯಲ್ಲೂ ಒಕ್ಕಲಿಗರು ಇದ್ದಾರೆ.

ರಾಜಕೀಯ ಅಳಿವು ಉಳಿವಿನ ಪ್ರಶ್ನೆ

ಕಳೆದ ಚುನಾವಣೆಯಲ್ಲಿ 7,597 ಮತಗಳಿಂದ ಸೋತಿದ್ದ ಶರತ್, ಈಗ ಅನುಕಂಪ ಕೈಹಿಡಿಯುತ್ತದೆ ಎಂಬ ಉಮೇದಿನಲ್ಲಿದ್ದಾರೆ. ಆದರೆ, ಈ ಬಾರಿ ಅವರಿಗೆ ಬಿಜೆಪಿ ಮತಗಳು ಕೈತಪ್ಪುವುದು ದಿಟ. ನಾಗರಾಜು ಹಾಗೂ ಶರತ್ ಇಬ್ಬರಿಗೂ ಈ ಚುನಾವಣೆ ರಾಜಕೀಯ ಅಳಿವು–ಉಳಿವಿನ ಪ್ರಶ್ನೆಯಾಗಿದೆ. ಇಬ್ಬರ ಜಗಳದಲ್ಲಿ ಕ್ಷೇತ್ರ ಕಿತ್ತುಕೊಂಡು ತಮ್ಮ ಪತ್ನಿ ಪದ್ಮಾವತಿ ಅವರನ್ನು ಪಟ್ಟಕ್ಕೇರಿಸಲು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್‌ ಸೆಣಸಾಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT