ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಮಾವು ಕೆರೆ ದಂಡೆ ಒಡೆದು ಹೊರ ನುಗ್ಗಿದ ನೀರು: 800 ಮನೆ ಜಲಾವೃತ

Last Updated 25 ನವೆಂಬರ್ 2019, 1:19 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್‌ನಲ್ಲಿರುವ ಹುಳಿಮಾವು ಕೆರೆಯ ದಂಡೆ ಒಡೆದು ಏಕಾಏಕಿ ನೀರು ನುಗ್ಗಿದ್ದರಿಂದ ಆರು ಬಡಾವಣೆಗಳ 800ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕೆರೆಗಿಂತ ತಗ್ಗು ಪ್ರದೇಶದಲ್ಲಿರುವ ಕೃಷ್ಣ ಬಡಾವಣೆ, ಅವನಿ ಶೃಂಗೇರಿನಗರ ಬಡಾವಣೆ, ಆರ್‌.ಆರ್‌ ಬಡಾವಣೆ, ನ್ಯಾನಪ್ಪನ ಹಳ್ಳಿ, ಹುಳಿಮಾವು ಕೆರೆ ಪಕ್ಕದ ಗ್ರಾಮ ಹಾಗೂ ಸಾಯಿಬಾಬಾ ದೇವಸ್ಥಾನ ರಸ್ತೆಯ ಆಸುಪಾಸಿನ ಮನೆಗಳು ಜಲಾವೃತಗೊಂಡವು.

ಸುಮಾರು 140 ಎಕರೆಗಳಷ್ಟು ವಿಸ್ತೀರ್ಣದ ಈ ಕೆರೆಯು ಮಳೆಗಾಲದಲ್ಲಿ ಭರ್ತಿಯಾಗಿತ್ತು. ಕೆರೆಯ ದಕ್ಷಿಣ ಭಾಗದಲ್ಲಿ ಕೋಡಿಯ ಬಳಿ ಯಾರೊ ಜೆಸಿಬಿ ತಂದು ಭಾನುವಾರ ಬೆಳಿಗ್ಗೆ ದಂಡೆಯನ್ನು ಅಗೆದಿದ್ದರು. ಆಗ ಕೆರೆಯ ನೀರು ಏಕಾಏಕಿ ಹೊರ ನುಗ್ಗಲಾರಂಭಿಸಿತು. ಇದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಕೆಲಸಗಾರರು ಕಾಲ್ಕಿತ್ತಿದ್ದರು. ಅವರು ಏಕೆ ಅಗೆದಿದ್ದಾರೆ ಎಂಬುದು ನಿಗೂಢವಾಗಿದೆ.

‘ಬೆಳಿಗ್ಗೆ 11.30ರಿಂದ ನೀರು ಹೊರ ಹರಿಯಲಾರಂಭಿಸಿತು. ಕ್ರಮೇಣ ನೀರು ರಭಸದಿಂದ ತಗ್ಗು ಪ್ರದೇಶದ ಮನೆಗಳತ್ತ ನುಗ್ಗಲಾರಂಭಿಸಿತು. ಮಧ್ಯಾಹ್ನ 3ಗಂಟೆ ವೇಳೆಗೆ ಕೆಲವು ಮನೆಗಳ ನೆಲಮಹಡಿಗಳಲ್ಲಿ ಐದಾರು ಅಡಿಗಳಷ್ಟು ನೀರು ನಿಂತಿತ್ತು. ರೆಫ್ರಿಜರೇಟರ್‌, ಟಿ.ವಿ. ಮತ್ತಿತರ ಪರಿಕರಗಳು, ದವಸ ಧಾನ್ಯ, ದಿನಸಿ ಸಾಮಗ್ರಿಗಳು ನೀರಿನಲ್ಲಿ ತೋಯ್ದು ಹೋದವು.

ದಂಡೆ ಒಡೆದ ಜಾಗಕ್ಕೆ ಸಮೀಪದಲ್ಲೇ ಬನ್ನೇರುಘಟ್ಟ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ನಡೆಯುತ್ತಿತ್ತು. ಅವರ ಲಾರಿಗಳ ಮೂಲಕ ಮಣ್ಣನ್ನು ತಂದು ದಂಡೆ ಒಡೆದ ಜಾಗಕ್ಕೆ ಸುರಿದರು. ರಾತ್ರಿ 9 ಗಂಟೆಗೆ ನೀರಿನ ಹರಿವನ್ನು ಹತೋಟಿಗೆ ತಂದರು.

ಆಸ್ಪತ್ರೆಗೆ ನೀರು

ಕೆರೆಯ ನೀರು ನುಗ್ಗಿದ್ದರಿಂದ ಸಾಯಿಬಾಬಾ ರಸ್ತೆ ಬಳಿಯ ಇಲ್ಲಿನ ನ್ಯಾನೊ ಆಸ್ಪತ್ರೆಯೊಳಗೂ ನುಗ್ಗಿತ್ತು. ಇದರಿಂದ ರೋಗಿಗಳು ಸಮಸ್ಯೆ ಎದುರಿಸಿದರು. ಆಸ್ಪತ್ರೆಯ ಪರಿಕರಗಳನ್ನು ತರಾತುರಿ ಯಲ್ಲಿ ಹೊರಗೆ ಸಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT