ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು ಕ್ಷೇತ್ರ: ಬಲಿಷ್ಠ ನಾಯಕರಿಗೆ ಬಿಜೆಪಿ ಗಾಳ

ಹುಣಸೂರು ಉಪಚುನಾವಣೆ: ತವರಿನಲ್ಲಿ ಸಿದ್ದರಾಮಯ್ಯ ಪ್ರಭಾವ ತಗ್ಗಿಸಲು ತಂತ್ರ
Last Updated 1 ಡಿಸೆಂಬರ್ 2019, 14:08 IST
ಅಕ್ಷರ ಗಾತ್ರ

ಮೈಸೂರು: ಹುಣಸೂರು ಉಪಚುನಾವಣೆ ಗೆಲ್ಲಲು ಹಾಗೂ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ ಸ್ಥಳೀಯವಾಗಿ ಬಲಿಷ್ಠರಾಗಿರುವ ನಾಯಕರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮುಖಂಡ ಸಿ.ಎಚ್‌.ವಿಜಯಶಂಕರ್‌, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.

ಎರಡು ವರ್ಷಗಳ ಹಿಂದೆ ವಿ.ಶ್ರೀನಿವಾಸಪ್ರಸಾದ್‌ ಅವರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರ, ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವುದು ಈ ಪ್ರಯತ್ನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈಗ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಅವರ ಬೆಂಬಲವೂ ದೊರೆತಿದೆ.

ಇದೇ ಉತ್ಸಾಹದಿಂದ ವಿಜಯಶಂಕರ್‌ ಮೇಲೆ ಕಣ್ಣಿಟ್ಟಿದೆ. ಇವರು 1994ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಗೆಲುವು ಸಾಧಿಸಿದ್ದರು. ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಸೋತರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದ್ದರು.

‘ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸಪ್ರಸಾದ್‌ ಹಾಗೂ ವಿಶ್ವನಾಥ್‌ ಬಹಳ ದಿನಗಳಿಂದ ಕತ್ತಿ ಮಸೆಯುತ್ತಿದ್ದಾರೆ. ಕುರುಬ ಸಮುದಾಯದ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖಭಂಗ ಉಂಟು ಮಾಡಲು ಇವರಿಬ್ಬರೂ ಒಟ್ಟಾಗಿ ಯೋಜನೆ ರೂಪಿಸಿದ್ದಾರೆ. ಇದರ ಭಾಗವಾಗಿಯೇ ವಿಜಯಶಂಕರ್‌ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ವಿಶ್ವನಾಥ್‌ ಕಣಕ್ಕಿಳಿಯಲು ಸಾಧ್ಯವಾಗದಿದ್ದರೆ ಜೆಡಿಎಸ್‌ನ ಹರೀಶ್‌ ಗೌಡ ಅವರಿಗೆ ಟಿಕೆಟ್‌ ನೀಡಲು ಕೂಡ ಬಿಜೆಪಿ ಪ್ರಯತ್ನಿಸುತ್ತಿದೆ. ಈ ಮೂಲಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಯೋಜನೆ ಹೊಂದಿದೆ. ಸದ್ಯಕ್ಕೆ ತಟಸ್ಥರಾಗಿರುವುದಾಗಿ ಈ ಸಮುದಾಯದ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡ ಹೇಳಿರುವುದು ಬಿಜೆಪಿ ಪ್ರಯತ್ನಕ್ಕೆ ಇಂಬು ನೀಡಿದೆ.

ರಾಜಕೀಯ ಅಸ್ತಿತ್ವಕ್ಕಾಗಿ ಮತ್ತೆ ಬಿಜೆಪಿ ಸೇರಲು ವಿಜಯಶಂಕರ್‌ ಕೂಡ ಸನ್ನದ್ಧರಾಗಿದ್ದಾರೆ. ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರ ಸಭೆ ಕೂಡ ನಡೆಸುತ್ತಿದ್ದಾರೆ.

‘ವಿಜಯಶಂಕರ್‌ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ ‍ಪ್ರತಿಕ್ರಿಯಿಸಿದರು.

ಅತಂತ್ರವಾಗಿದ್ದೇನೆ. ಎಲ್ಲಿ ಭವಿಷ್ಯ ಅಡಗಿದೆಯೋ ಆ ಪಕ್ಷ ಸೇರಿ ಕೆಲಸ ಮಾಡಬೇಕು. ಬಿಜೆಪಿ ಸೇರ್ಪಡೆಗೆ ಅಭಿಪ್ರಾಯ ಪಡೆಯುತ್ತಿದ್ದೇನೆ
-ಸಿ.ಎಚ್‌.ವಿಜಯಶಂಕರ್‌
ಕಾಂಗ್ರೆಸ್‌ ಮುಖಂಡ

ವಿಜಯಶಂಕರ್‌ ಸೆಳೆಯಲು ಬಿಜೆಪಿ ಒತ್ತಡ ಹೇರುತ್ತಿದೆ. ಕುರುಬ ಜಾತಿಯ ಮತ ವಿಭಜಿಸಿದರೆ ಕಾಂಗ್ರೆಸ್‌ ಮಣಿಸಬಹುದು ಎಂಬ ಹುನ್ನಾರ ಅಡಗಿದೆ
-ಬಿ.ಜೆ.ವಿಜಯಕುಮಾರ್‌
ಅಧ್ಯಕ್ಷ, ಮೈಸೂರು ಜಿಲ್ಲಾ ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT