‘ಐಎಂಎ’ ಪ್ರಕರಣ: ಪೊಲೀಸರು ಮೈಮರೆತರೇ?

ಶನಿವಾರ, ಜೂಲೈ 20, 2019
25 °C

‘ಐಎಂಎ’ ಪ್ರಕರಣ: ಪೊಲೀಸರು ಮೈಮರೆತರೇ?

Published:
Updated:

ಬೆಂಗಳೂರು: ‘ಐಎಂಎ ಜ್ಯುವೆಲ್ಸ್‌ ಕಂಪನಿ ಸಂಸ್ಥಾಪಕ ಮಹಮದ್‌ ಮನ್ಸೂರ್‌ ಖಾನ್‌ ವಿರುದ್ಧ ಪೊಲೀಸರು ಸಕಾಲಿಕ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದರೇ?’ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಎರಡು ಸಂದರ್ಭಗಳಲ್ಲಿ ಮನ್ಸೂರ್‌ ಖಾನ್‌ ಅವರನ್ನು ವಿಚಾರಣೆಗೆ ಒಳಪಡಿಸಿ, ವಶಕ್ಕೆ ಪಡೆಯಲು ಅವಕಾಶ ಇತ್ತು. ಪೊಲೀಸರು ಈ ಅವಕಾಶ ಕಳೆದುಕೊಂಡರು. ಇದರಿಂದ ಆರೋಪಿ ಪರಾರಿಯಾಗಲು ಅನುಕೂಲವಾಯಿತು ಎಂಬ ಆಕ್ಷೇಪಗಳೂ ಕೇಳಿ ಬಂದಿವೆ.

ಐಎಂಎ ಕಂಪನಿ ಹಣಕಾಸು ವ್ಯವಹಾರ ಕುರಿತು ಪರಿಶೀಲಿಸುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ರಾಜು ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಸಿಸಿಬಿಯ ಹೆಚ್ಚುವರಿ ಕಮಿಷನರ್‌ ಅಲೋಕ್‌ ಕುಮಾರ್‌ ಕಳೆದ ಮೇ 1ರಂದು ಮನ್ಸೂರ್ ಖಾನ್‌ ಅವರನ್ನು ಕರೆದು ಐದು ಗಂಟೆ ವಿಚಾರಣೆ ನಡೆಸಿದ್ದರು. ದಾಖಲೆಗಳ ಸಮೇತ ಜೂನ್‌ 6ರಂದು ಪುನಃ ಬರುವಂತೆ ಹೇಳಿದ್ದರು. ವಿಚಾರಣೆಗೆ ಹಾಜರಾಗದೆ ಕೈಕೊಟ್ಟ ಆರೋಪಿ, ಜೂನ್‌ 8ರಂದು ಪರಾರಿಯಾಗಿದ್ದಾನೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆಂಬಿಡೆಂಟ್‌ ಕಂಪನಿ ವಂಚನೆ ಬಯಲಾದ ಬಳಿಕ ಇಂಥ ಕಂಪನಿಗಳ ವಿರುದ್ಧ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರ ನೇತೃತ್ವದಲ್ಲಿ 2018ರ ಜೂನ್‌ನಲ್ಲಿ ದೂರು ಪ್ರಾಧಿಕಾರ ರಚಿಸಿತ್ತು. ಆದರೆ ಯಾವುದೇ ದೂರುಗಳು ಬರಲಿಲ್ಲ. ಈ ವೇಳೆ,  ನಾಗರಾಜ್‌ ಅವರು ಪೊಲೀಸ್‌ ಕಮಿಷನರ್‌ಗೆ ಪತ್ರವೊಂದನ್ನು ಬರೆದು ಐಎಂಎ ಜ್ಯುವೆಲ್ಸ್‌ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

‘ಸಿಐಡಿ ಈ ಕಂಪನಿ ವ್ಯವಹಾರವನ್ನು ಈಗಾಗಲೇ ಪರಿಶೀಲಿಸಿದೆ. ಯಾರೂ ದೂರು ಕೊಡದಿದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ’ ಎಂಬ ಪತ್ರ ಜಿಲ್ಲಾಧಿಕಾರಿಗಳ ಕೈಸೇರಿತು. ಆನಂತರ ಪ್ರಕರಣ ತಣ್ಣಗಾಯಿತು. ಪೊಲೀಸರು ಆ ಸಮಯದಲ್ಲೇ ಎಚ್ಚೆತ್ತುಕೊಂಡಿದ್ದರೆ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆ ಮಾಡಬಹುದಿತ್ತು ಎಂದೂ ಹೇಳಲಾಗುತ್ತಿದೆ.

ಕ್ರಮಕ್ಕೆ ಅವಕಾಶವಿರಲಿಲ್ಲ: ಐಎಂಎ ಕಂಪನಿ ವಿರುದ್ಧ ನಿರ್ದಿಷ್ಟ ದೂರುಗಳಿಲ್ಲದಿದ್ದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 109ರ ಅನ್ವಯ ದಂಡಾಧಿಕಾರಿಗಳು ಮಾತ್ರ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಅಲ್ಲದೆ, ಈ ಅಧಿಕಾರಿಗಳ ವ್ಯಾಪ್ತಿಯೂ ದೊಡ್ಡದಿರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಂಬಿಡೆಂಟ್‌ನಲ್ಲೂ ಹಣ ಹೂಡಿದ್ದರು!

‘ಐಎಂಎ ಜ್ಯುವೆಲ್ಸ್‌’ ಕಂಪನಿಯಿಂದ ವಂಚನೆಗೆ ಒಳಗಾಗಿರುವ ಬಹುತೇಕ ಷೇರುದಾರರು ‘ಆಂಬಿಡೆಂಟ್‌’  ಕಂಪನಿಯಲ್ಲೂ ಹಣ ಹೂಡಿಕೆ ಮಾಡಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಆಂಬಿಡೆಂಟ್‌’ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಶೇ 60ರಿಂದ 70ರಷ್ಟು ಜನ ಐಎಂಎ ಜ್ಯುವೆಲ್ಸ್‌ನಲ್ಲೂ ಹಣ ಹೂಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !