ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ | ಕಾಂಗ್ರೆಸ್‌–ಬಿಜೆಪಿ ಸಹವಾಸ ಬೇಡವೇ ಬೇಡ: ಎಚ್‌.ಡಿ.ದೇವೇಗೌಡ

Last Updated 30 ಅಕ್ಟೋಬರ್ 2019, 7:41 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿ ಹೆಚ್ಚಲ್ಲ, ಕಾಂಗ್ರೆಸ್ ಕಡಿಮೆಯಲ್ಲ. ಇವರಿಬ್ಬರನ್ನೂ ನಂಬಲು ಆಗಲ್ಲ. ಇವರ ಜೊತೆಗೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳುವ ಮೂಲಕ ಡಿ.5ರ ಉಪಚುನಾವಣೆಯಲ್ಲಿ ಮೈತ್ರಿ ಸಾಧ್ಯತೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸ್ಪಷ್ಟವಾಗಿ ತಳ್ಳಿ ಹಾಕಿದರು.

ಡಿ.15ರ ಉಪಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಮತ್ತು ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.

‘ನಿಜ ಹೇಳಬೇಕು ಎಂದರೆ ಮೇ 2018ರಲ್ಲಿ ಫಲಿತಾಂಶ ಹೊರಬಂದ ನಂತರ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಾನು ಹಿಂಜರಿದಿದ್ದೆ. ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್‌ ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಮನವೊಲಿಸಿತು. ಮೊದಮೊದಲು ನಾನು ಒಪ್ಪಲಿಲ್ಲ. ಕಾಂಗ್ರೆಸ್‌ನ ಸುದೀರ್ಘ ಮನವೊಲಿಕೆ ಯತ್ನಗಳ ನಂತರ ಮನಸ್ಸು ಬದಲಿಸಿದೆ’ ಎಂದು ಅವರು ನುಡಿದರು.

‘ಉಪಚುನಾವಣೆಗಳಿಗೆ ಜೆಡಿಎಸ್ ಕಾರ್ಯತಂತ್ರವೇನು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ–ಕಾಂಗ್ರೆಸ್ ಕಟ್ಟಿಕೊಂಡು ನಮಗೆ ಏನೂ ಆಗಬೇಕಿಲ್ಲ. ಉಪಚುನಾವಣೆಗಳನ್ನು ನಾವು ಸ್ವತಂತ್ರವಾಗಿ ಎದುರಿಸುತ್ತೇವೆ. ಅವರಿಗೆ ಅಗತ್ಯಬಿದ್ದಾಗ ನಮ್ಮನ್ನು ಬಳಸಿಕೊಳ್ಳುತ್ತಾರೆ. ಅವರ ಕೆಲಸ ಮುಗಿದ ಮೇಲೆ ನಮ್ಮನ್ನು ನಾಶಪಡಿಸಲು ಯತ್ನಿಸುತ್ತಾರೆ. ಎರಡೂ ಪಕ್ಷಗಳ ಸ್ವಭಾವ ಒಂದೇ ರೀತಿ ಇದೆ’ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ನಿಮ್ಮನ್ನು ಹೊಗಳಿದ್ದಾರೆ. ಬಿಜೆಪಿ ಬಗ್ಗೆ ಈಗ ನಿಮ್ಮಲ್ಲಿ ಮೃದು ಧೋರಣೆ ಮೂಡಿದೆಯೇ ಎಂಬ ಪ್ರಶ್ನೆಗೆ ‘ಹಾಗೇನೂ ಇಲ್ಲ’ ಎಂದಷ್ಟೇ ಹೇಳಿದರು.

ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ರಮೇಶ್‌ ಕುಮಾರ್ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದ 17 ಮಂದಿಯ ರಾಜೀನಾಮೆಯನ್ನು ಒಪ್ಪಿಕೊಳ್ಳದೆ, ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿತ್ತು.

ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಅನರ್ಹರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದ್ದು, ತೀರ್ಪು ಬಾಕಿಯಿದೆ. ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಶಾಸಕರು 2018ರ ಚುನಾವನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಬಾಕಿಯಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳ ಉಪಚುನಾವಣೆಯನ್ನು ಆಯೋಗ ಘೋಷಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT