ಐಎಂಎ: ಸಿಬಿಐಗೆ ತುರ್ತು ನೋಟಿಸ್‌

ಭಾನುವಾರ, ಜೂಲೈ 21, 2019
22 °C

ಐಎಂಎ: ಸಿಬಿಐಗೆ ತುರ್ತು ನೋಟಿಸ್‌

Published:
Updated:
Prajavani

ಬೆಂಗಳೂರು: ‘ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದ ಐಎಂಎ (ಐ ಮಾನಿಟರಿ ಅಡ್ವೈಸರಿ) ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂಬ ಕೋರಿಕೆಗೆ ಸಂಬಂಧಿಸಿದಂತೆ ಸಿಬಿಐಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ನಗರದ ನಿವೃತ್ತ ತೆರಿಗೆ ಅಧಿಕಾರಿ ಎಸ್‌.ಎಂ.ಇಕ್ಬಾಲ್‌ ಅಹ್ಮದ್‌ ಸೇರಿದಂತೆ 17 ಜನ ಹೂಡಿಕೆದಾರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

‘ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್‌ ಖಾನ್‌, ಹೂಡಿಕೆದಾರರಿಂದ ₹ 13 ಸಾವಿರ ಕೋಟಿ ಸಂಗ್ರಹಿಸಿದ್ದಾರೆ. ಇದರಲ್ಲಿ ನೂರಾರು ಕೋಟಿ ಮೊತ್ತವನ್ನು ವಿವಿಧ ರಾಜಕೀಯ ಪಕ್ಷಗಳ ಶಾಸಕರು ಮತ್ತು ಮಂತ್ರಿಗಳಿಗೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೂ ಈ ಹಗರಣದಲ್ಲಿ ಲಂಚ ಪಡೆದಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

‘ಪ್ರಕರಣವನ್ನು ಎಸ್‌ಐಟಿಗೆ ನೀಡಲಾಗಿದೆ. ಆದರೆ, ಎಸ್‌ಐಟಿ ಇತಿಹಾಸ ಗಮನಿಸಿದರೆ ಅದರ ತನಿಖೆ ಎಷ್ಟೊಂದು ಜಡವಾಗಿದೆ ಎಂಬುದು ವೇದ್ಯವಾಗುತ್ತದೆ. ಆದ್ದರಿಂದ ಇದನ್ನು ಸಿಬಿಐಗೆ ಒಪ್ಪಿಸಿ‌’ ಎಂದು ಕೋರಲಾಗಿದೆ. ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ.

ಮತ್ತೊಂದು ಪ್ರಕರಣ: ‘ಐಎಂಎ ಕಂಪನಿಯ ಹೂಡಿಕೆದಾರರ ಹಿತರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಮಾಹಿತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ನಿರ್ದೇಶಿಸಿದೆ.

‘ಐಎಂಎ ಮತ್ತು ಆ್ಯಂಬಿಡೆಂಟ್ ವಂಚಕ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಿ ರಶೀದ್‌ನಗರದ ಇಮ್ರಾನ್ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಪೀಠ, ‘ಈವರೆಗೆ ಪೊಲೀಸರು ನಡೆಸಿರುವ ತನಿಖೆಯ ಪ್ರಗತಿ ವಿವರ ಸಲ್ಲಿಸಿ’ ಎಂದು ಸೂಚಿಸಿದೆ. ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಲಾಗಿದೆ.

ಕಾನೂನು ನೆರವಿಗೆ ಮನವಿ

‘ಹೂಡಿಕೆದಾರರಲ್ಲಿ ಶೇಕಡ 35ರಷ್ಟು ಮುಸ್ಲಿಂ ಮಹಿಳೆಯರೇ ಇದ್ದು ಅವರಿಗೆಲ್ಲಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೆರವು ಒದಗಿಸಲು ನಿರ್ದೇಶಿಸಬೇಕು’ ಎಂದು ಕೋರಿ ವಕೀಲ ಮಿಯಾಜ್‌ ಅಹಮದ್ ಖಾನ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಅರ್ಜಿದಾರರ ಪರ ಶೇಕ್‌ ಇಸ್ಮಾಯಿಲ್‌ ಜಬೀವುಲ್ಲಾ ವಕಾಲತ್ತು ವಹಿಸಿದ್ದು, ‘ಹೂಡಿಕೆದಾರರು ಸಾಕಷ್ಟು ಬಡವರಿದ್ದಾರೆ. ಅವರೆಲ್ಲಾ ಕಾನೂನು ಹೋರಾಟದಲ್ಲಿ ಮತ್ತಷ್ಟು ಬಸವಳಿಯದಂತೆ ನೋಡಿಕೊಳ್ಳಲು ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !