ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ರೋಷನ್‌ ಬೇಗ್‌ ಬಿಟ್ಟು ಕಳುಹಿಸಿದ ಎಸ್‌ಐಟಿ

ಯಾವುದೇ ಹಣ ಪಡೆದಿಲ್ಲ ಎಂದ ಶಾಸಕ
Last Updated 16 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ ಶಿವಾಜಿನಗರ ಶಾಸಕ ಆರ್‌. ರೋಷನ್ ಬೇಗ್ ಅವರನ್ನು ರಾತ್ರಿಯಿಡಿ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಮಂಗಳವಾರ ಮಧ್ಯಾಹ್ನ ಬಿಟ್ಟು ಕಳುಹಿಸಿದ್ದಾರೆ.

ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್ ಅವರಿಂದ ಸಾಲ ಪಡೆದು ವಾಪಸ್ ನೀಡದ ಆರೋಪ ಎದುರಿಸುತ್ತಿರುವ ರೋಷನ್ ಬೇಗ್, ಸೋಮವಾರ ರಾತ್ರಿ 8.30ಕ್ಕೆ ವಿಶೇಷ ವಿಮಾನದಲ್ಲಿ ಪುಣೆಗೆ ಹೊರಡಲು ಮುಂದಾಗಿದ್ದರು.

ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕರೆ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ವಿಶೇಷ ವಿಮಾನ ಹೊರಡದಂತೆ ತಡೆಯಲು ಸೂಚಿಸಿದ್ದರು. ನಂತರವೇ ನಿಲ್ದಾಣಕ್ಕೆ ಹೋಗಿ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದರು.

ವಿಶೇಷ ವಿಮಾನವನ್ನು ರದ್ದುಪಡಿಸಿ ನಿಲ್ದಾಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಡಿಸಿಪಿ ಎಸ್‌. ಗಿರೀಶ್ ಅವರ ಕಾರಿನಲ್ಲೇ ರೋಷನ್‌ ಬೇಗ್‌ ಅವರನ್ನು ಎಸ್‌ಐಟಿ ಕಚೇರಿಗೆ ಕರೆತರಲಾಯಿತು. ನಸುಕಿನ 3.30ರವರೆಗೂ ಬೇಗ್‌ ಅವರ ವಿಚಾರಣೆ ನಡೆಸಿದ ಅಧಿಕಾರಿಗಳು, ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.

ವಿಚಾರಣೆ ಮುಗಿಸಿ ನಿದ್ರೆಗೆ ಜಾರಿದ್ದ ಬೇಗ್, ಮಂಗಳವಾರ ಬೆಳಿಗ್ಗೆ 7.30ಕ್ಕೆ ಎಚ್ಚರಗೊಂಡು ನಿತ್ಯ ಕರ್ಮ ಮುಗಿಸಿದರು. ಮನೆಯಿಂದ ಮಗ ರುಮಾನ್ ತಂದಿದ್ದ ತಿಂಡಿಯನ್ನು ತಿಂದರು.

ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.45ರವರೆಗೆ ವಿಚಾರಣೆ ಶುರು ಮಾಡಿದ ಅಧಿಕಾರಿಗಳು, ನಂತರವೇ ರೋಷನ್ ಬೇಗ್ ಅವರನ್ನು ಬಿಟ್ಟು ಕಳುಹಿಸಿದರು. ಜುಲೈ 19ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿರುವುದಾಗಿ ತಿಳಿದುಬಂದಿದೆ.

ಯಾವುದೇ ಹಣ ಪಡೆದಿಲ್ಲ: ‘ಮನ್ಸೂರ್ ಖಾನ್‌ ನನಗೆ ಪರಿಚಯ. ಆದರೆ, ಆತನಿಂದ ಯಾವುದೇ ಹಣ ಪಡೆದಿಲ್ಲ’ ಎಂದು ರೋಷನ್‌ ಬೇಗ್ ವಿಚಾರಣೆ ವೇಳೆ ಹೇಳಿರುವುದಾಗಿ ಗೊತ್ತಾಗಿದೆ.

‘ನೀವು ನೀಡಿರುವ ನೋಟಿಸ್‌ ಸ್ವೀಕರಿಸಿದ್ದೇನೆ. ಜುಲೈ 19ರಂದು ವಿಚಾರಣೆಗೆ ಬರಲಿದ್ದೇನೆ. ಏಕಾಏಕಿ ವಶಕ್ಕೆ ಪಡೆದಿರುವುದು ಏಕೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿರುವುದಾಗಿ ಮೂಲಗಳು ಹೇಳಿವೆ.

ವಶಕ್ಕೆ ಪಡೆದಿದ್ದನ್ನು ಸಮ‌ರ್ಥಿಸಿಕೊಂಡಿದ್ದ ಡಿಸಿಪಿ ಗಿರೀಶ್, ‘ಸಾವಿರಾರು ಜನರಿಗೆ ವಂಚನೆ ಆಗಿದೆ. ಪ್ರಮುಖ ಆರೋಪಿ ಬಿಡುಗಡೆ ಮಾಡಿರುವ ವಿಡಿಯೊದಲ್ಲೂ ನಿಮ್ಮ ಹೆಸರಿದೆ. ಆತ ಬೆಂಗಳೂರಿಗೆ ಬರುವುದಾಗಿ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದಾನೆ. ಆತ ಬಂದರೆ, ನೀವು ನಗರದಲ್ಲಿ ಇರಬೇಕಾಗುತ್ತದೆ. ಹೀಗಾಗಿಯೇ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ನನ್ನನ್ನು ಹಿಂಬಾಲಿಸುತ್ತಿದ್ದಾರೆ’

‘ಸಚಿವನಾಗಿ ಕೆಲಸ ಮಾಡಿರುವ ನಾನು, ಈಗ ಶಾಸಕ. ಕೆಲವು ದಿನಗಳಿಂದ ಕೆಲವರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ತುಂಬಾ ಬೇಜಾರಾಗುತ್ತಿದೆ’ ಎಂದು ಶಾಸಕ ರೋಷನ್‌ ಬೇಗ್‌ ಹೇಳಿದರು.

ತಮ್ಮ ಮನೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿನ್ನೆ ರಾತ್ರಿಯೂ ನಾನು ಪುಣೆಗೆ ಹೊರಟಿದ್ದೆ. ಕೆಲವರು ವಾಹನದಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣದವರೆಗೂ ಬಂದಿದ್ದರು. ಅವರೇ ಎಸ್‌ಐಟಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದರು.

‘ಐಎಂಎ ಸಮೂಹ ಕಂಪನಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ನಾನೇ ಒತ್ತಾಯಿಸುತ್ತಿದ್ದೇನೆ. ಈಗ ಎಸ್‌ಐಟಿಯವರು ನನ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ’ ಎಂದು ಹೇಳಿದರು.

‘ಸೋಮವಾರ ರಾತ್ರಿ ನಾನೊಬ್ಬನೇ ನಿಲ್ದಾಣದಲ್ಲಿ ಇದ್ದೆ. ಬೇರೆ ಯಾರೂ ಇರಲಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಬೇಗ್‌

ಬೆಂಗಳೂರು: ‘ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ನನ್ನ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು ಹಾಗೂ ನನ್ನ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸದಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ)ಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಶಾಸಕ ರೋಷನ್‌ ಬೇಗ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಬೇಗ್‌ ಪರ ವಕೀಲ ಎಂ.ಎಸ್‌.ಶ್ಯಾಮಸುಂದರ್, ‘ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳಾದ ರವಿಕಾಂತೇಗೌಡ ಹಾಗೂ ಗಿರೀಶ್ ಸರ್ಕಾರದ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ಹಗೆ ತೀರಿಸಿಕೊಳ್ಳಲು ಎಸ್‌ಐಟಿ ಬಳಕೆ: ಬಿಜೆಪಿ ಟೀಕೆ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಾಜಕೀಯ ಹಗೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಮುಖ್ಯಮಂತ್ರಿಯವರು ಶಾಸಕರ ಹಕ್ಕುಗಳನ್ನು ದಮನ ಮಾಡುತ್ತಿರುವುದರಿಂದ ರಾಜ್ಯಪಾಲರು ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮನವಿ ಮಾಡಿದ್ದಾರೆ.

ಬೇಗ್‌ ಕಾರ್ಯನಿಮಿತ್ತ ಎಲ್ಲಿಗೋ ಹೊರಟಿರುವಾಗ ಅವರಿಗೆ ನೋಟಿಸ್‌ ನೀಡದೇ, ಸಭಾಧ್ಯಕ್ಷರ ಅನುಮತಿಯನ್ನೂ ಪಡೆಯದೇ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕುಮಾರಸ್ವಾಮಿಯವರು ಎಸ್‌ಐಟಿಯನ್ನು ತಮ್ಮ ಖಾಸಗಿ ಭದ್ರತಾ ಪಡೆಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಬೇಗ್‌ ಜತೆಯಲ್ಲಿ ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಇದ್ದರು ಎಂಬುದು ಸುಳ್ಳು. ಸ್ಥಳದಲ್ಲಿ ಇರಲೇ ಇಲ್ಲ ಎಂದು ಸಂತೋಷ್‌ ಹೇಳಿದ್ದಾರೆ. ಅಂದ ಮೇಲೆ ಎಸ್‌ಐಟಿಯನ್ನು ನೋಡಿ ಓಡಿ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಖ್ಯಮಂತ್ರಿಯಾದವರು ಇಂತಹ ವಿಚಾರಗಳ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೇ ಅಗೌರವ ತಂದಿದ್ದಾರೆ ಎಂದು ರವಿಕುಮಾರ್‌ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT