ಮಂಗಳವಾರ, ಮೇ 11, 2021
27 °C
* ಜೂನ್ 5ರಿಂದ ಬಂದ್‌ ಆಗಿರುವ ಕಚೇರಿ * ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್‌ಐಆರ್

ಐಎಂಎ ಜ್ಯುವೆಲ್ಸ್‌ ಮಾಲೀಕನ ‘ಆತ್ಮಹತ್ಯೆ’ ಆಡಿಯೊ; ಮಳಿಗೆ ಎದುರು ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂರಾರು ಕೋಟಿ ರೂಪಾಯಿ ಷೇರು ಸಂಗ್ರಹಿಸಿದ್ದ ‘ಐಎಂಎ ಸಮೂಹ ಕಂಪನಿ’ಯ ಪ್ರಧಾನ ಕಚೇರಿ ಇದೇ 5ರಿಂದ ಬಂದ್‌ ಆಗಿರುವುದರಿಂದ ಆತಂಕಕ್ಕೊಳಗಾದ ಸಾವಿರಾರು ಹೂಡಿಕೆದಾರರು ಕಚೇರಿ ಎದುರು ಸೋಮವಾರ ಭಾರಿ ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದರು.

‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್‌ ಹೆಸರಿನಲ್ಲಿ ಆಡಿಯೊವೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದರಿಂದ ಆತಂಕಕ್ಕೊಳಗಾದ ಹೂಡಿಕೆದಾರರು ಏಕಕಾಲಕ್ಕೆ ಶಿವಾಜಿನಗರದಲ್ಲಿರುವ ಕಚೇರಿ ಎದುರು ಜಮಾಯಿಸಿದ್ದರು.

ಆಭರಣ ಮಳಿಗೆ, ಆಸ್ಪತ್ರೆ, ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆ, ಮುದ್ರಣ, ಬಿಲ್ಡರ್ಸ್‌, ಸುಗಂಧ ದ್ರವ್ಯ, ಔಷಧ ಮಳಿಗೆ, ಷೇರು ವ್ಯವಹಾರ... ಹೀಗೆ ಹಲವು ಉದ್ಯಮ ಹೊಂದಿರುವ ಕಂಪನಿ, ಸಾರ್ವಜನಿಕರಿಂದ ₹1 ಲಕ್ಷದಿಂದ ₹1 ಕೋಟಿವರೆಗೂ ಷೇರು ಸಂಗ್ರಹಿಸಿದೆ. ಹೂಡಿಕೆಯ ಹಣಕ್ಕೆ ಪ್ರತಿ ತಿಂಗಳು ಶೇ 3ರಿಂದ ಶೇ 4ರಷ್ಟು ಲಾಭ ನೀಡುತ್ತಿತ್ತು. ಅದರಿಂದ ಆಕರ್ಷಿತರಾಗಿ ಸಾವಿರಾರೂ ಮಂದಿ ಹಣ ಹೂಡಿದ್ದರು.

ರಂಜಾನ್ ಪ್ರಯುಕ್ತ ಜೂನ್ 5ರಿಂದ 9ರವರೆಗೆ ಕಚೇರಿಗೆ ರಜೆ ನೀಡಲಾಗಿತ್ತು. ಆ ಕುರಿತು ಕಚೇರಿ ಎದುರು ನಾಮಫಲಕವನ್ನೂ ಅಂಟಿಸಲಾಗಿತ್ತು. ಆದರೆ, ಸೋಮವಾರವೂ ಕಚೇರಿ ಬಾಗಿಲು ತೆರೆದಿರಲಿಲ್ಲ.

 

ಕಂಗಾಲಾಗಿ ಪ್ರತಿಭಟನೆ ನಡೆಸಿದ ಹೂಡಿಕೆದಾರರು, ‘ಐಎಂಎ ಜ್ಯುವೆಲ್ಸ್‌’ ಆಭರಣ ಮಳಿಗೆಯೂ ಇರುವ ಮೂರು ಅಂತಸ್ತಿನ ಕಟ್ಟಡದೊಳಗೆ ನುಗ್ಗಲು ಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಟ್ಟಡದ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಿ ಜನರನ್ನು ತಡೆದರು. 

ಆಗ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತುಕೊಂಡು ಘೋಷಣೆ ಕೂಗಿದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ರಸ್ತೆ ಬಿಟ್ಟು ಕದಲಲಿಲ್ಲ. ರಾತ್ರಿಯವರೆಗೂ ಪ್ರತಿಭಟನಾಕಾರರು ಸ್ಥಳದಲ್ಲಿದ್ದರು. ಶಿವಾಜಿನಗರ ಹಾಗೂ ಸುತ್ತಮುತ್ತ ವಾಹನಗಳ ದಟ್ಟಣೆ ಉಂಟಾಗಿದ್ದು ಕಂಡುಬಂತು.

ಹೂಡಿಕೆದಾರರ ಸಂಖ್ಯೆ ಹೆಚ್ಚಿದ್ದರಿಂದ ಶಿವಾಜಿನಗರದ ಮೈದಾನದಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯಲಾಗಿತ್ತು.

20 ಸಾವಿರ ಮಂದಿಗೆ ವಂಚನೆ: ಪ್ರತಿಭಟನಾ ಸ್ಥಳದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಗೂಡಂಗಡಿ ವ್ಯಾಪಾರಿ ನಾಸೀರ್ ಅಹ್ಮದ್, ‘2006ರಲ್ಲಿ ಸ್ಥಾಪನೆಯಾದ ಸಂಸ್ಥೆ ಇದು. 20 ಸಾವಿರಕ್ಕೂ ಹೆಚ್ಚು ಮಂದಿ ಹೂಡಿಕೆ ಮಾಡಿದ್ದು, ಅವರೆಲ್ಲರಿಗೂ ಈಗ ವಂಚನೆ ಆಗಿದೆ’ ಎಂದು ದೂರಿದರು.

‘ಮಗಳ ಮದುವೆಗಾಗಿ ₹ 4 ಲಕ್ಷ ಉಳಿತಾಯ ಮಾಡಿದ್ದೆ. ಇನ್ನಷ್ಟು ಹಣ ಸಿಗಬಹುದು ಎಂಬ ಆಸೆಯಿಂದ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದೆ. ಅದಕ್ಕೆ ರಶೀದಿ ಹಾಗೂ ಬಾಂಡ್‌ ಸಹ ಕೊಟ್ಟಿದ್ದರು. ಈಗ ಕಚೇರಿಗೆ ಬೀಗ ಜಡಿಯಲಾಗಿದ್ದು, ಮಗಳ ಮದುವೆ ಹೇಗೆ ಮಾಡಲಿ’ ಎಂದು ಕಣ್ಣೀರಿಟ್ಟರು.

ಗೃಹಿಣಿ ನೂರ್‌ಜಾನ್, ‘ಮೂರುವರೆ ವರ್ಷದಿಂದ ಹಣ ಹೂಡಿಕೆ ಮಾಡಿಕೊಂಡು ಬರುತ್ತಿದ್ದೇನೆ. ಪ್ರತಿ ತಿಂಗಳು ಮೊದಲ ವಾರದಲ್ಲಿ ಲಾಭದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದರು. ಏಪ್ರಿಲ್‌ನಿಂದ ಹಣ ಬಂದಿರಲಿಲ್ಲ’ ಎಂದು ದುಃಖ ತೋಡಿಕೊಂಡರು. 

‘ಷೇರು ವ್ಯವಹಾರ ಹಾಗೂ ಬಿಟ್‌ ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳುತ್ತಿದ್ದ ಕಂಪನಿಯ ಪ್ರತಿನಿಧಿಗಳು, ಅದರಲ್ಲಿ ಬಂದ ಲಾಭವನ್ನು ಹೂಡಿಕೆದಾರರಿಗೆ ನೀಡುವುದಾಗಿ ಭರವಸೆ ನೀಡುತ್ತಿದ್ದರು. ಅವರ ಮಾತು ನಂಬಿ ಹಣ ಕಟ್ಟಿದ್ದೆವು’ ಎಂದು ವ್ಯಾಪಾರಿ ಅಮೀರ್ ಹೇಳಿದರು.

‘ಐಎಂಎ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿಮಿಡೆಟ್‌ ಸಹ ಸ್ಥಾಪನೆ ಮಾಡಲಾಗಿದೆ. ಕೆಲವರು ಖಾತೆ ತೆರೆದಿದ್ದಾರೆ. ಈಗ ಆ ಸೊಸೈಟಿ ಕೂಡಾ ಬಂದ್ ಆಗಿದೆ’ ಎಂದರು. 

ಮನ್ಸೂರ್ ಖಾನ್ ನಾಪತ್ತೆ

ಜೂನ್‌ 5ರಿಂದಲೇ ಮನ್ಸೂರ್ ಖಾನ್ ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಮಾಡಲು ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿದೆ.

‘ಮನ್ಸೂರ್ ಖಾನ್ ಸ್ನೇಹಿತರೇ ಆಗಿರುವ ಹೂಡಿಕೆದಾರ ಖಾಲಿದ್ ಎಂಬುವರು ವಂಚನೆ ಸಂಬಂಧ ದೂರು ನೀಡಿದ್ದಾರೆ.

***

ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನಗೂ ಈ ಕಂಪನಿಗೂ ಯಾವುದೇ ಸಂಬಂಧವಿಲ್ಲ.

- ರೋಷನ್ ಬೇಗ್, ಶಾಸಕ

ಮನ್ಸೂರ್ ಖಾನ್ ಸುರಕ್ಷಿತವಾಗಿದ್ದಾರೆ. ಯಾರೋ ಕಿಡಿಗೇಡಿಗಳು ಸುಳ್ಳು ಆಡಿಯೊ ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಹೂಡಿಕೆದಾರರಿಗೆ ಹಣ ವಾಪಸು ಬರಲಿದೆ

– ಐಎಂಎ ಆಭರಣ ಮಳಿಗೆ ಸಿಬ್ಬಂದಿ

ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಮುಖ್ಯಮಂತ್ರಿ ಜತೆ ಈ ಬಗ್ಗೆ ಚರ್ಚಿಸುತ್ತೇನೆ.

- ಎಂ.ಬಿ.ಪಾಟೀಲ, ಗೃಹ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು