ಮಂಗಳವಾರ, ಆಗಸ್ಟ್ 3, 2021
28 °C

ಕೊಡಗು, ಹುಬ್ಬಳ್ಳಿ, ಚಿಕ್ಕಮಗಳೂರು ಸೇರಿ ರಾಜ್ಯದ ಹಲವೆಡೆ ಗುರುವಾರ ಮುಂದುವರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕೊಡಗು, ಚಿಕ್ಕಮಗಳೂರು, ಹುಬ್ಬಳ್ಳಿ, ಕಾರವಾರ ಸೇರಿದಂತೆ ಹಲವೆಡೆ ಗುರುವಾರ ಬೆಳಿಗ್ಗೆಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.


ಕೊಡಗಿನಲ್ಲಿ ಗುರುವಾರ ಧಾರಾಕಾರ ಮಳೆ

ಮಡಿಕೇರಿ ವರದಿ

ಕೊಡಗು ಜಿಲ್ಲೆಯ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಗುರುವಾರವೂ ಮಳೆ ಮುಂದುವರಿದಿದೆ.  ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ಭಾಗದಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕಾವೇರಿ  ನದಿಯಲ್ಲಿ ನೀರಿನಮಟ್ಟ ಮತ್ತಷ್ಟು ಏರಿಕೆಯಾಗಿದೆ. ಮಡಿಕೇರಿ,‌ ಗಾಳಿಬೀಡು, ಸುಂಟಿಕೊಪ್ಪ ಹಾಗೂ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ.


ಹುಬ್ಬಳ್ಳಿಯಲ್ಲಿ ಗುರುವಾರ ಜಿಟಿಜಿಟಿ ಮಳೆ

ಹುಬ್ಬಳ್ಳಿ: ಮಳೆಯಲ್ಲೇ ವ್ಯಾಪಾರ, ನಿತ್ಯ ಚಟುವಟಿಕೆ

ಹುಬ್ಬಳ್ಳಿ ನಗರದಲ್ಲಿ ‌ಮೂರ್ನಾಲ್ಕು ದಿನಗಳಿಂದ ಮೇಲಿಂದ ಮೇಲೆ ಕೆಲವೊಮ್ಮೆ ಜಿಟಿ ಜಿಟಿ ಹಾಗೂ ಜೋರಾಗಿ ಮಳೆ ಸುರಿಯುತ್ತಿದೆ.


ಹುಬ್ಬಳ್ಳಿಯಲ್ಲಿ ಮಳೆಯಲ್ಲಿಯೇ ವ್ಯಾಪಾರ ಮಾಡುತ್ತಿರುವ ವ್ಯಕ್ತಿ

ಇದರಿಂದ ಮಳೆಯಲ್ಲೇ‌ ನಿತ್ಯದ ಚಟುವಟಿಕೆಗಳು ಸಾಗುತ್ತಿವೆ. ಜನತಾ ಬಜಾರ್, ದುರ್ಗದ ಬೈಲ್ ಮಾರುಕಟ್ಟೆ ಮತ್ತು ನಗರದ ವಿವಿಧೆಡೆ ರಸ್ತೆ ಬದಿಯಲ್ಲಿನ ವ್ಯಾಪಾರಿಗಳು ‌ಮಳೆಯಲ್ಲಿ ತೋಯ್ದು ವ್ಯಾಪಾರ ಮಾಡುತ್ತಿದ್ದಾರೆ.


ಹುಬ್ಬಳ್ಳಿಯಲ್ಲಿ ಮಳೆಯಲ್ಲಿಯೇ ಫುಟ್ ಪಾತ್ ವ್ಯಾಪಾರಿ ನಿಂತಿರುವುದು

ಮಹಾನಗರ ಪಾಲಿಕೆ ಮಳೆಗಾಲಕ್ಕೂ ಮುನ್ನವೇ ನಗರದ ರಸ್ತೆಗಳನ್ನು ದುರಸ್ತಿ‌ ಮಾಡುವುದಾಗಿ ಹೇಳಿ, ಯಾವ ದುರಸ್ತಿ ಕಾರ್ಯ ಮಾಡಿಲ್ಲ. ಇದರಿಂದ ಜನ ಗುಂಡಿಗಳು ಬಿದ್ದ ರಸ್ತೆಯಲ್ಲಿಯೇ ಪರದಾಡುತ್ತ ಸಂಚರಿಸುತ್ತಿದ್ದ‌ ಚಿತ್ರಣ ಕಂಡು ಬಂತು.


ಹುಬ್ಬಳ್ಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದು

ಗುರುವಾರ ಬೆಳಿಗ್ಗೆ ಕೆಲ ಹೊತ್ತು ಮಳೆ ಸ್ವಲ್ಪ ‌ಕಡಿಮೆಯಿದ್ದ ಕಾರಣ ವ್ಯಾಪಾರಿಗಳು ‌ನಿತ್ಯದ ಕಾಯಕಕ್ಕೆ ಅಣಿಯಾದರು. ಮಳೆ‌ ಮತ್ತೆ ಜೋರಾದ ಕಾರಣ ವ್ಯಾಪಾರಕ್ಕೆ ‌ಜೋಡಿಸಿಟ್ಟುಕೊಂಡಿದ್ದ ಸಾಮಗ್ರಿಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿದ್ದರು. ದೇಶಪಾಂಡೆ‌ ನಗರ, ಕಿತ್ತೂರು ರಾಣಿ ಚನ್ನಮ್ಮ ‌ವೃತ್ತ, ರೈಲ್ವೆ ನಿಲ್ದಾಣದ ಸಮೀಪ ವ್ಯಾಪಾರಿಗಳು ರಸ್ತೆ ಬದಿ‌‌ ನಿಂತು ಮಾಸ್ಕ್ ಗಳನ್ನು ಮಾರಾಟ‌ ಮಾಡುತ್ತಿದ್ದರು.

ಹಸಿರಿನಿಂದ ಕಂಗೊಳಿಸುತ್ತಿರುವ ನೃಪತುಂಗ ಬೆಟ್ಟ, ಕಿಮ್ಸ್ ಆಸ್ಪತ್ರೆಯ ಹಿಂದಿನ ರಸ್ತೆ, ಉಣಕಲ್ ಪಾರ್ಕ್ ಬಳಿ‌ ಜನ ಜಿಟಿ ಜಿಟಿ ಮಳೆಯ ನಡುವೆಯೂ ಪೋಟೊ ತೆಗೆದುಕೊಂಡು ಸಂಭ್ರಮಿಸಿದರು.


ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಮಳೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ  ಮಳೆಯಾಗುತ್ತಿದೆ. ಶೃಂಗೇರಿ ಎನ್.ಆರ್.ಪುರ, ಕೊಪ್ಪ, ಕಳಸ, ಮೂಡಿಗೆರೆ ಭಾಗದಲ್ಲಿ ಬಿಟ್ಟುಬಿಟ್ಟು ಸಾಧಾರಣವಾಗಿ ಸುರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ.

ಕಾರವಾರದ ಅಮದಳ್ಳಿ ವೀರಗಣಪತಿ ದೇವಸ್ಥಾನದ ಬಳಿ ಹೆದ್ದಾರಿಯಲ್ಲಿ ನೀರು ನಿಂತಿರುವುದು.

ಕಾರವಾರದ ಅಮದಹಳ್ಳಿಯಲ್ಲಿ ಮನೆಯೊಳಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವುದು.

ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ಹರಿಯುತ್ತಿರುವ ವಿಡಿಯೊ. ವಾಹನ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಅಂಕೋಲಾ ತಾಲ್ಲೂಕಿನ ಅವರ್ಸಾದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು