ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ತ್ಯಾಜ್ಯದಿಂದ ನಿಸರ್ಗಸ್ನೇಹಿ ಇಟ್ಟಿಗೆ

ರಾಯಚೂರು ನಿರ್ಮಿತಿ ಕೇಂದ್ರದ ಅಂಗಸಂಸ್ಥೆ ಕ್ಯಾಸುಟೆಕ್‌ ಪ್ರಯೋಗ
Last Updated 15 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ರಾಯಚೂರು: ಸಿಮೆಂಟ್‌ಗೆ ಪರ್ಯಾಯವಾಗಿ ಕೈಗಾರಿಕಾ ತ್ಯಾಜ್ಯ ಬಳಸಿ ನಿಸರ್ಗಸ್ನೇಹಿ ‘ಜಿಯೋ ಪಾಲಿಮರ್‌ ಕಾಂಕ್ರಿಟ್‌’ (ಜಿಪಿಸಿ) ಬಳಸಿ ಇಟ್ಟಿಗೆ ತಯಾರಿಕೆ ತಂತ್ರಜ್ಞಾನವನ್ನು ರಾಯಚೂರು ‘ನಿರ್ಮಿತಿ ಕೇಂದ್ರ’ದ ಅಂಗಸಂಸ್ಥೆ ಕ್ಯಾಸುಟೆಕ್‌ ಅಭಿವೃದ್ಧಿ ಮಾಡಿದೆ.

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ತಮಿಳುನಾಡಿನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಅತ್ಯಾಧುನಿಕ ಕಾಂಕ್ರಿಟ್‌ ಸಂಶೋಧನಾ ಕೇಂದ್ರ ಹಾಗೂ ಕುಟ್ಟುವಾ ಸಿಲಿಕೆಟ್ಸ್‌ ಖಾಸಗಿ ಕಂಪೆನಿ ಸಹಯೋಗದಲ್ಲಿ ಈ ತಂತ್ರಜ್ಞಾನದ ಬಳಕೆ ಆರಂಭಿಸಲಾಗಿದೆ.

ಕಟ್ಟಡ ನಿರ್ಮಾಣ ಮಾಡುವುದಕ್ಕೆ ಬೇಕಾಗುವ ಇಟ್ಟಿಗೆಗಳು ಹಾಗೂ ಇನ್ನಿತರೆ ಪೂರ್ವಸಿದ್ಧ ಬಿಡಿಭಾಗಗಳನ್ನು ಜಿಯೋ ಪಾಲಿಮರ್‌ ಕಾಂಕ್ರಿಟ್‌ನಿಂದ ತಯಾರಿಸುವ ಕಾರ್ಯವನ್ನು ಕ್ಯಾಸುಟೆಕ್‌ ಈಗಾಗಲೇ ಮಾಡುತ್ತಿದೆ.

ಮಾಮೂಲಿ ಸಿಮೆಂಟ್‌ನಿಂದ ಕಟ್ಟುವ ಕಟ್ಟಡವು ಕ್ಯುರಿಂಗ್‌ ಮಾಡಲು 28 ದಿನಗಳು ಬೇಕಾಗುತ್ತದೆ. ಆದರೆ, ಜಿಪಿಸಿಯಿಂದ 24 ಗಂಟೆಯಲ್ಲಿ ಕ್ಯುರಿಂಗ್‌ ಆಗುತ್ತದೆ. ದಿನಕಳೆದಂತೆ ಇದರ ಬಾಳಿಕೆ ವೃದ್ಧಿಸುತ್ತದೆ. ಸಿಮೆಂಟ್‌ ಕಟ್ಟಡವು 100 ವರ್ಷ ಆಯುಷ್ಯದ್ದಾದರೆ, ಜಿಪಿಸಿ ಆಯುಷ್ಯ 150 ವರ್ಷ ಹೊಂದಿದೆ.

ಏನಿದು ಜಿಪಿಸಿ: ಕಲ್ಲಿದ್ದಲು ಅವಶೇಷ ಹಾರುಬೂದಿ ಶೇ 70 ರಷ್ಟು, ಉಕ್ಕಿನ ಕಾರ್ಖಾನೆಗಳಲ್ಲಿ ಸಿಗುವ ಅವಶೇಷ ಜಿಜಿಬಿಎಸ್‌ (ಗ್ರೌಂಡ್‌ ಗ್ರಾನ್ಯುಲೇಟೆಡ್‌ ಬ್ಲ್ಯಾಸ್ಟ್‌ ಫರ್ನಿಸ್‌ ಸ್ಲ್ಯಾಗ್‌) ಶೇ 25 ರಷ್ಟು ಹಾಗೂ ಎಂ–ಸ್ಯಾಂಡ್‌ ಮಿಶ್ರಣ ಮಾಡಲಾಗುತ್ತದೆ. ಇದರಲ್ಲಿ ನೀರಿನ ಬದಲು ಸೋಡಿಯಂ ಸಿಲಿಕೆಟ್‌ ಮತ್ತು ಸೋಡಿಯಂ ಹೈಡ್ರಾಕ್ಸೈಡ್‌ ರಾಸಾಯನಿಕ
ಬೆರೆಸಿದರೆ ಕಾಂಕ್ರಿಟ್‌ ತಯಾರಾಗುತ್ತದೆ.

‘ಸಿಮೆಂಟ್‌ ಬಳಸಿ ಮಾಡುವ ಎಲ್ಲ ಕೆಲಸಗಳನ್ನು ಜಿಪಿಸಿಯಿಂದಲೂ ಮಾಡಬಹುದು. ಸಿಮೆಂಟ್‌ ಮತ್ತು ನೀರಿಲ್ಲದೆ ಜಿಪಿಸಿಯಿಂದ ಕಟ್ಟಡ ಕಟ್ಟಡಬಹುದಾಗಿದೆ. ಸೇತುವೆ, ಬಹುಮಹಡಿ ಕಟ್ಟಡದಂತಹ ದೊಡ್ಡ ಯೋಜನೆಗಳಿಗೆ ಜಿಪಿಸಿ ಬಳಕೆ ಮಾಡಿದರೆ ಸಿಮೆಂಟ್‌ಗಿಂತಲೂ ಅಗ್ಗವಾಗುತ್ತದೆ. ಕ್ಯಾಸುಟೆಕ್‌ನಿಂದ ಸಿದ್ಧ ಶೌಚಾಲಯ, ಉದ್ಯಾನದೊಳಗೆ ಅಳವಡಿಸುವ ಚೇಯರ್‌, ಇಟ್ಟಿಗೆಗಳನ್ನು ಜಿಪಿಸಿಯಿಂದ ತಯಾರಿಸುವ ಕಾರ್ಯ ಆರಂಭವಾಗಿದೆ’ ಎಂದು ಕ್ಯಾಸುಟೆಕ್‌ ಸಹಾಯಕ ಎಂಜಿನಿಯರ್ ಸುರೇಂದ್ರ ವಿವರಿಸಿದರು.

ಕ್ಯಾಸುಟೆಕ್‌?

ಹಾರುಬೂದಿ ಬಳಕೆಯ ತಂತ್ರಜ್ಞಾನ ಮತ್ತು ಪರಿಸರ ಸಂರಕ್ಷಣಾ ಕೇಂದ್ರವು (ಸೆಂಟರ್‌ ಫಾರ್‌ ಆ್ಯಸ್‌ ಯುಟಿಲೈಜೇಶನ್‌ ಟೆಕ್ನಾಲಾಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಕಂಜರ್ವೇಶನ್‌-ಕ್ಯಾಸುಟೆಕ್‌).ನಿರ್ಮಿತಿ ಕೇಂದ್ರದ ಒಂದು ಭಾಗ. ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌)ವು ಇಂಡೋ–ನಾರ್ವಿಯನ್‌ ಸಹಯೊಗದಲ್ಲಿ 1999 ರಲ್ಲಿ ಈ ಕೇಂದ್ರವನ್ನು ಶಕ್ತಿನಗರದಲ್ಲಿ ಸ್ಥಾಪಿಸಲಾಗಿದೆ. ಆರ್‌ಟಿಪಿಎಸ್‌ ಪಕ್ಕದಲ್ಲೇ ಇದರ ಕಚೇರಿ ಇದೆ.

ವಾತಾವರಣಕ್ಕೆ ಸಿಮೆಂಟ್‌ ಬಳಕೆಯಿಂದ ಹಾನಿ. ಪಾಲಿಮರ್‌ ಸಿಮೆಂಟ್‌ ಪರಿಸರಸ್ನೇಹಿ.ಕಂಕರ್‌, ಮರಳಿನ ಜೊತೆ ಬೇಗನೆ ಹೊಂದಿಕೊಳ್ಳುತ್ತದೆ.‌
-ಶರಣಬಸಪ್ಪ ಪಟ್ಟೇದ
ಕ್ಯಾಸುಟೆಕ್‌ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT