ಭಾನುವಾರ, ಆಗಸ್ಟ್ 1, 2021
27 °C
ಚನ್ನಗಿರಿ: ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಅಂತ್ಯ ಸಂಸ್ಕಾರ

ದಾವಣಗೆರೆ: ಕೊರೊನಾ ಸೋಂಕಿತ ಮಹಿಳೆಯ ಶವ ಜೆಸಿಬಿಯಲ್ಲಿ ಸಾಗಿಸಿ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ(ದಾವಣಗೆರೆ): ಬಳ್ಳಾರಿಯಲ್ಲಿ ಅಂತ್ಯ ಸಂಸ್ಕಾರ ವೇಳೆ ಕೋವಿಡ್‌–19 ಸೋಂಕಿತರ ಶವಗಳನ್ನು ಗುಂಡಿಗೆ ಎಸೆದ ಪ್ರಕರಣ ವಿವಾದ ಸೃಷ್ಟಿಸಿರುವ ಬೆನ್ನಲೇ ಚನ್ನಗಿರಿ ತಾಲ್ಲೂಕಿನಲ್ಲಿ ಜೆಸಿಬಿ ಯಂತ್ರದಲ್ಲಿ ಮಹಿಳೆಯೊಬ್ಬರ ಮೃತ ದೇಹವನ್ನು ಕಸದ ರೀತಿ ಎತ್ತಿಕೊಂಡು ಹೋಗಿ ಮಣ್ಣು ಮುಚ್ಚಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೊ ಹರಿದಾಡುತ್ತಿದೆ.

ಚನ್ನಗಿರಿ ತಾಲ್ಲೂಕಿನ 56 ವರ್ಷದ ಮಹಿಳೆ ಜೂನ್ 17ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರಿಗೆ ಸೋಂಕು ತಗುಲಿರುವುದು ಅಂದೇ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಚನ್ನಗಿರಿಯ ಹೆದ್ದಾರಿಯ ಪಕ್ಕದಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು.

ಮಹಿಳೆ ಶವವನ್ನು ಶ್ರದ್ಧಾಂಜಲಿ ವಾಹನದಲ್ಲಿ ರುದ್ರಭೂಮಿಗೆ ತರಲಾಗಿದೆ. ಜೆಸಿಬಿ ಯಂತ್ರದ ಬಕೆಟ್‌ನಲ್ಲಿ ಶವವನ್ನು ಇಟ್ಟು ಶವ ಸಂಸ್ಕಾರ ಮಾಡುವ ಗುಂಡಿಗೆ ತಳ್ಳಿರುವ ಬಗ್ಗೆ ದೃಶ್ಯಗಳು ವಿಡಿಯೊದಲ್ಲಿವೆ. ಶವ ಸಂಸ್ಕಾರ ಮಾಡುವ ಮೂವರು ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರೂ ಶವವನ್ನು ಮುಟ್ಟಿಲ್ಲ. ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಸರಿಸಿದ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮಹಿಳೆಯ ಮೃತದೇಹವನ್ನು ದಫನ್ ಮಾಡುವಾಗ ಸಿಪಿಐ ಆರ್.ಆರ್. ಪಾಟೀಲ್ ಹಾಗೂ ತಹಶೀಲ್ದಾರ್ ಪುಟ್ಟರಾಜುಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು ಸೇರಿ ಹಲವು ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಇದ್ದರು. ಅವರ ಎದುರೇ ಈ ರೀತಿ ಅಮಾನವೀಯ ಶವವನ್ನು ದಫನ್‌ ಮಾಡಲಾಗಿದೆ.

ಅಧಿಕಾರಿಗಳಿಗೆ ನೋಟಿಸ್‌: ‘ವಿಡಿಯೊ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಜುಲೈ 3ರೊಳಗೆ ವಿವರಣೆ ನೀಡುವಂತೆ ಚನ್ನಗಿರಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಗೂ ಕೋವಿಡ್‌ ನೋಡಲ್‌ ಅಧಿಕಾರಿಗೆ ನೋಟಿಸ್‌ ನೀಡಿದ್ದೇನೆ. ಈ ಅವರಿಂದ ವಿವರಣೆ ಬಂದ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು