‘ನಿಮ್ಮಂತೆ ಎಂಪೈರ್‌ನಲ್ಲಿ ಊಟ ಮಾಡಿಲ್ಲ’

ಶುಕ್ರವಾರ, ಏಪ್ರಿಲ್ 26, 2019
24 °C
ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದಕ್ಕೆ ನೋಟಿಸ್‌ * ಇನ್‌ಸ್ಪೆಕ್ಟರ್‌ಗೆ ಕಾನ್‌ಸ್ಟೆಬಲ್‌ ಕೊಟ್ಟ ಉತ್ತರ ವೈರಲ್‌

‘ನಿಮ್ಮಂತೆ ಎಂಪೈರ್‌ನಲ್ಲಿ ಊಟ ಮಾಡಿಲ್ಲ’

Published:
Updated:

ಬೆಂಗಳೂರು: ಕರ್ತವ್ಯಕ್ಕೆ ತಡವಾಗಿ ಹಾಜರಾದ ಕಾರಣಕ್ಕೆ ಜಯನಗರ ಠಾಣೆಯ ಇನ್‌ಸ್ಪೆಕ್ಟರ್‌ ನೀಡಿದ್ದ ನೋಟಿಸ್‌ಗೆ ಕಾನ್‌ಸ್ಟೆಬಲ್ ಪಿ.ಶ್ರೀಧರ್ ಗೌಡ ಅವರು ಖಡಕ್ ಉತ್ತರ ನೀಡಿದ್ದು, ಆ ಉತ್ತರದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಕೆಲಸಕ್ಕೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ಶ್ರೀಧರ್ ಗೌಡ ಸೇರಿದಂತೆ ಐವರು ಸಿಬ್ಬಂದಿ, ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದರು. ಅದನ್ನು ಪ್ರಶ್ನಿಸಿದ್ದ ಇನ್‌ಸ್ಪೆಕ್ಟರ್, ತಡವಾಗಿದ್ದಕ್ಕೆ ಕಾರಣ ಕೇಳಿ ಐವರಿಗೂ ನೋಟಿಸ್‌ ನೀಡಿದ್ದರು.

ಆ ನೋಟಿಸ್‌ಗೆ ಏಪ್ರಿಲ್ 14ರಂದು ಉತ್ತರ ನೀಡಿರುವ ಶ್ರೀಧರ್, ಇನ್‌ಸ್ಪೆಕ್ಟರ್ ಅವರ ಕೆಲಸದ ವೈಖರಿಯನ್ನು ಬಿಚ್ಚಿಟ್ಟಿದ್ದಾರೆ. ಆ ಉತ್ತರದ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಾನು ನಿಮ್ಮ (ಇನ್‌ಸ್ಪೆಕ್ಟರ್) ರೀತಿಯಲ್ಲೇ ಬೆಳಿಗ್ಗೆ ‘ಸುಖಸಾಗರ‘ ಅಥವಾ ‘ಯುಡಿ‘ ಹೋಟೆಲ್‌ನಲ್ಲಿ ತಿಂಡಿ, ಮಧ್ಯಾಹ್ನ ಖಾನಾವಳಿಯಲ್ಲಿ ಊಟ ಹಾಗೂ ರಾತ್ರಿ ‘ಎಂಪೈರ್‌‘ನಲ್ಲಿ ಊಟ ಮಾಡಿ, ಮಿಲನೊದಲ್ಲಿ ಐಸ್‌ಕ್ರೀಂ ತಿಂದು, ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದ್ದಿದ್ದರೆ, ನಿತ್ಯವೂ ಬೆಳಿಗ್ಗೆ 8.30ಕ್ಕೆ ಅಲ್ಲ, 8ಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ’ ಎಂದು ಕಾನ್‌ಸ್ಟೆಬಲ್ ಉತ್ತರ ನೀಡಿದ್ದಾರೆ.

‘ನನಗೆ ವಯಸ್ಸಾದ ತಂದೆ- ತಾಯಿ ಇದ್ದಾರೆ. ಪೊಲೀಸ್ ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಪತ್ನಿ ಹಾಗೂ ಇಬ್ಬರು ಮಕ್ಕಳೂ ಇದ್ದಾರೆ. ಅವರ ಆಗುಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗಿರುತ್ತದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಇರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗೆ ಅಗೌರವ ತೋರಿದ್ದಕ್ಕೆ ಕಾನ್‌ಸ್ಟೆಬಲ್‌ ಅಮಾನತು 

ಇನ್‌ಸ್ಪೆಕ್ಟರ್ ಅವರಿಗೆ ಅಗೌರವ ತೋರುವ ರೀತಿಯಲ್ಲಿ ಬರೆದಿದ್ದ ಉತ್ತರದ ಪತ್ರ ವೈರಲ್ ಆಗುತ್ತಿದ್ದಂತೆ ಕಾನ್‌ಸ್ಟೆಬಲ್ ಶ್ರೀಧರ್ ಗೌಡ ಅವರನ್ನು ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ಅಮಾನತು ಮಾಡಿದ್ದಾರೆ.

ಆ ಸಂಬಂಧ ಸೋಮವಾರ ಆದೇಶ ಹೊರಡಿಸಿರುವ ಅಣ್ಣಾಮಲೈ, ‘ಏಪ್ರಿಲ್ 11ರಂದು ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ನೀವು (ಶ್ರೀಧರ್ ಗೌಡ), ಇನ್‌ಸ್ಪೆಕ್ಟರ್‌ ಅವರು ನೀಡಿದ್ದ ನೋಟಿಸ್‌ಗೆ ಸೂಕ್ತ ಉತ್ತರ ನೀಡದೇ ಅಗೌರವ ತೋರಿದ್ದೀರಿ. ಜೊತೆಗೆ, ಉತ್ತರದ ಪ್ರತಿಯನ್ನು ಮಾಧ್ಯಮದವರಿಗೆ ಕೊಟ್ಟಿದ್ದೀರಿ. ಅದರಿಂದ ಇಲಾಖೆಯ ಘನತೆಗೆ ಧಕ್ಕೆ ಬಂದಿದ್ದು, ಅದಕ್ಕೆ ನೀವೇ ಹೊಣೆ. ಹೀಗಾಗಿ, ಇಲಾಖಾ ಶಿಸ್ತಿನ ಕ್ರಮವನ್ನು ಬಾಕಿ ಇರಿಸಿಕೊಂಡು ಅಮಾನತು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅಣ್ಣಾಮಲೈ, ‘ಘಟನೆ ಬಗ್ಗೆ ಹಾಗೂ ಕಾನ್‌ಸ್ಟೆಬಲ್ ಅವರ ಹಳೇ ಪ್ರಕರಣಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿಯೇ ಅಮಾನತು ಮಾಡಲಾಗಿದೆ’ ಎಂದು ಹೇಳಿದರು.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !