ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೆಸ್ಸೆಸ್‌ನಿಂದ ದನಿ ಅಡಗಿಸುವ ಕಾರ್ಯ: ಸಿದ್ದರಾಮಯ್ಯ

ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆಗೆ ಖಂಡನೆ– ಪ್ರಗತಿಪರರು, ಸಾಹಿತಿಗಳ ಸಭೆ
Last Updated 1 ಮಾರ್ಚ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಕಾರ್ಯವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ. ಬಿಜೆಪಿ ನಾಯಕರಿಂದ ವಿವಾದಿತ ಹೇಳಿಕೆ ಕೊಡಿಸುವ ಹಾಗೂ ಹಿಂಸಾಚಾರ ಮಾಡಿಸುವ ಮೂಲಕ ದೇಶದ ಗಂಭೀರ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಲುನಗರದಲ್ಲಿ ಪ್ರಗತಿಪರರು, ಸಾಹಿತಿಗಳು, ರಾಜಕೀಯ ಪಕ್ಷಗಳ ಮುಖಂಡರು ಸೇರಿಭಾನುವಾರ ಹಮ್ಮಿಕೊಂಡಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧವೇ ಬಿಜೆಪಿಯವರು ಕ್ರಮ ಕೈಗೊಳ್ಳಲಿಲ್ಲ. ಇನ್ನು, ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಅನಂತಕುಮಾರ್‌ ಹೆಗಡೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಜೆಪಿ ಹೇಳಿತು. ಈಗ, ಯತ್ನಾಳ್‌ ಹೇಳಿಕೆಯನ್ನೂ ಕೂಡ ಅವರ ವೈಯಕ್ತಿಕ ಅಭಿಮತ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ’ ಎಂದರು.

ಹಿರಿಯ ವಕೀಲ ರವಿವರ್ಮ ಕುಮಾರ್, ‘ದೊರೆಸ್ವಾಮಿ ಪತ್ರಕರ್ತರಾಗಿದ್ದಾಗ, 1948ರ ಜ.30ರಂದು ಗಾಂಧಿಯವರ ಹತ್ಯೆ ಮಾಡಿದ್ದ ನಾಥೂರಾಂ ಗೋಡ್ಸೆ, ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಉಪಸ್ಥಿತನಿದ್ದ ಎಂದು ವರದಿ ಮಾಡಿದ್ದರು. ಆಗಿನಿಂದ ಆರ್‌ಎಸ್‌ಎಸ್‌, ಬಿಜೆಪಿಗೆ ದೊರೆಸ್ವಾಮಿಯವರನ್ನು ಕಂಡರಾಗುವುದಿಲ್ಲ’ ಎಂದರು.

ಜಿ.ಎನ್. ನಾಗರಾಜ, ‘ಮೋದಿಯನ್ನು ಮುಗಿಸಿರಿ ಎಂಬುದಾಗಿ ದೊರೆಸ್ವಾಮಿ ಹೇಳಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಪ್ರತಿಭಟನೆಗಳಿಗೆ ಹೆದರಿರುವ ಕೇಂದ್ರ ಸರ್ಕಾರ, ಅದರ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ’ ಎಂದರು.

‘ದೊರೆಸ್ವಾಮಿಯವರು ಬಿಜೆಪಿಯನ್ನು ಮಾತ್ರ ಟೀಕಿಸಿಲ್ಲ. ಕಾಂಗ್ರೆಸ್‌ನನರಸಿಂಹ ರಾವ್, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಕೆಂಗಲ್ ಹನುಮಂತಯ್ಯ ಅವರನ್ನೂ ಟೀಕಿಸಿದ್ದರು’ ಎಂದು ನೆನಪಿಸಿದರು.

ಕಾಂಗ್ರೆಸ್‌ ವಕ್ತಾರ ವಿ.ಆರ್. ಸುದರ್ಶನ್‌, ‘ಯತ್ನಾಳ್‌ರನ್ನು ಮುಂದಿನ ಬಜೆಟ್‌ ಅಧಿವೇಶನದಿಂದ ಹೊರಗೆ ಇಡಬೇಕು. ಅಲ್ಲದೆ, ಶಾಸಕರ ನಡವಳಿಕೆ ಬಗ್ಗೆ ಮಾರ್ಗದರ್ಶನ ನೀಡಲು ನೈತಿಕ ಸಮಿತಿ ರಚಿಸಬೇಕು. ಸದನದೊಳಗಷ್ಟೇ ಅಲ್ಲದೆ, ಸದನದ ಹೊರಗೆ ಶಾಸಕರು ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಇದರಲ್ಲಿ ನಿಯಮ ರೂಪಿಸಬೇಕು’ ಎಂದರು.

ನಿಮ್ಮ ಪ್ರಧಾನಿ ಪರಮಾತ್ಮನ ಸ್ವರೂಪನೇ?: ಗೋವಿಂದರಾವ್
‘ಪ್ರಧಾನಿ ವಿರುದ್ಧ ದೊರೆಸ್ವಾಮಿ ಮಾತನಾಡುವುದು ಸರಿಯೇ ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಾರೆ. ನಿಮ್ಮ ಪ್ರಧಾನಿ ಏನು ಪರಮಾತ್ಮನ ಸ್ವರೂಪನೇ’ ಎಂದು ಚಿಂತಕ ಜಿ.ಕೆ. ಗೋವಿಂದರಾವ್ ಪ್ರಶ್ನಿಸಿದರು.

‘ಮೊದಲ ಪ್ರಧಾನಿ ಜವಹಾರಲಾಲ್‌ ನೆಹರೂ ವಿರುದ್ಧ ಸಿ. ರಾಜಗೋಪಾಲಚಾರಿ, ಆಚಾರ್ಯ ಕೃಪಲಾನಿ ಮಾತನಾಡಿದ್ದರು. ಆದರೂ, ನೆಹರೂ ಅವರ ಬಗ್ಗೆ ಗೌರವ ಹೊಂದಿದ್ದರು’ ಎಂದರು.

‘ಯತ್ನಾಳ್‌ ಅವರ ಹೇಳಿಕೆಯನ್ನು ದೊರೆಸ್ವಾಮಿಯವರು ನಿರ್ಲಕ್ಷಿಸಿದರೂ, ನಾನು ಹೇಗೆ ದೊರೆಸ್ವಾಮಿ ಬಾಯಿ ಮುಚ್ಚಿಸಿದೆ ನೋಡಿ ಎಂದು ಹೇಳಿಕೊಂಡು ತಿರುಗಾಡುವ ವ್ಯಕ್ತಿತ್ವ ಯತ್ನಾಳ್‌ ಅವರದ್ದು’ ಎಂದರು.

‘ಯತ್ನಾಳ್ ಹೇಳಿಕೆ ಕಾನೂನುಬಾಹಿರವಲ್ಲ’
‘ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್‌ ಯಾವುದೇ ಕಾನೂನುಬಾಹಿರ ಅಥವಾ ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಯತ್ನಾಳ್ ಹೇಳಿಕೆ ಮುಂದಿಟ್ಟುಕೊಂಡು ವಿಧಾನಮಂಡಲ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. 60 ದಿನಗಳು ಕಲಾಪ ನಡೆಯಲೇ ಬೇಕು. ಅಲ್ಲಿ ಎಲ್ಲವೂ ಚರ್ಚೆಯಾಗಲಿ’ ಎಂದರು.

**

ಸ್ವಾತಂತ್ರ್ಯ ಹೋರಾಟ ನಡೆಸಿದ ಕಾಂಗ್ರೆಸ್‌ ಪಕ್ಷದಲ್ಲಿದ್ದ ಎಸ್.ಎಂ ಕೃಷ್ಣ, ಶ್ರೀನಿವಾಸ ಪ್ರಸಾದ್‌, ವಿಶ್ವನಾಥ್‌ ಈ ಬಗ್ಗೆ ಮೌನವಾಗಿರುವುದು ಅವರ ನೈತಿಕ ಶಕ್ತಿ ಕುಸಿದಿರುವುದರ ಸಂಕೇತ.
-ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT