ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಬ್ಯಾಕ್‌ ಶೋಭಾ, ಯತ್ನಾಳ– ಜಿಗಜಿಣಗಿ ಜಗಳ: ಶೆಟ್ಟರ್ ಪ್ರತಿಕ್ರಿಯೆ ಏನು?

ಪಕ್ಷ ದೊಡ್ಡದಾಗಿ ಬೆಳೆದಾಗ ಜಗಳ ಸಹಜ
Last Updated 24 ಫೆಬ್ರುವರಿ 2019, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಕ್ಷ ದೊಡ್ಡದಾಗಿ ಬೆಳೆದಾಗ ಒಳಜಗಳ ಸಹಜ’ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಜಗಳವಾಡಿದ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಸುವುದನ್ನು ವಿರೋಧಿಸಿ ಆ ಕ್ಷೇತ್ರದ ಕಾರ್ಯಕರ್ತರು ಆರಂಭಿಸಿರುವ ‘ಗೋಬ್ಯಾಕ್ ಶೋಭಾ’ ಹೋರಾಟದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ನಮ್ಮ ಪಕ್ಷದ ಒಳಜಗಳದ ಹಿಂದೆ ವಿರೋಧ ಪಕ್ಷದವರ ಕುತಂತ್ರವೂ ಇರಬಹುದು. ಈ ವಿಷಯದಲ್ಲಿ ಅಪಪ್ರಚಾರವೂ ನಡೆಯುತ್ತಿದೆ. ಆದರೆ ಈ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ರಾಜ್ಯದಲ್ಲಿ 22 ಕ್ಷೇತ್ರ ಗೆಲ್ಲುತ್ತೇವೆ. ಮೈತ್ರಿ ಸರ್ಕಾರದ ದುರಾಡಳಿತವೂ ನಮಗೆ ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆಪರೇಷನ್ ಆಡಿಯೊ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಮೊದಲ ಆರೋಪಿ ಆಗುತ್ತಾರೆ. ಏಕೆಂದರೆ ಅವರು ನಾಯಕರ ಮಾತುಗಳನ್ನು ಕಾನ್ಫರೆನ್ಸ್ ಕಾಲ್‌ ಮೂಲಕ ಕದ್ದಾಲಿಕೆ ಮಾಡಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಿದ್ದರು. ಎಸ್‌ಐಟಿ ರಚನೆಗೆ ಒತ್ತಡ ಹೇರಿದವರು ಸಿದ್ದರಾಮಯ್ಯ. ಕುಮಾರಸ್ವಾಮಿ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಅವರದ್ದು. ಎಸ್‌ಐಟಿಯಿಂದ ಬಿಎಸ್‌ವೈಗೆ ಏನೂ ತೊಂದರೆ ಆಗದು’ ಎಂದರು.

‘ಮಹಾಮೈತ್ರಿ ಕೇವಲ ಪೇಪರ್‌ನಲ್ಲಿದೆಯೇ ಹೊರತು ವಾಸ್ತವದಲ್ಲಿ ಇಲ್ಲ. ಒಂದೇ ವೇದಿಕೆಯಲ್ಲಿ ಕೈ ಹಿಡಿದುಕೊಂಡು ಪೋಸ್ ನೀಡಿದ್ದ ನಾಯಕರು, ಅವರ ರಾಜ್ಯಗಳಲ್ಲಿ ಒಬ್ಬರ ವಿರುದ್ಧ ಒಬ್ಬರು ಸೆಣೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಪ್ರಿಯಾಂಕಾ ಗಾಂಧಿ ಇಂದಿರಾ ಗಾಂಧಿ ಅವರಂತೆ ಕಾಣುತ್ತಾರೆ ಎಂಬ ಕಾರಣಕ್ಕೆ ಯಾರೂ ಮತ ಹಾಕುವುದಿಲ್ಲ. ಇಂದಿರಾ ಗಾಂಧಿಯವರನ್ನೇ ಸೋಲಿಸಲಾಗಿತ್ತು. ಕಾಂಗ್ರೆಸ್‌ಗೆ ನೆಹರೂ ಕುಟುಂಬವನ್ನು ಬಿಟ್ಟರೆ ಗತಿ ಇಲ್ಲ’ ಎಂದು ಹೇಳಿದರು.

‘ಯಾವುದೇ ಆಧಾರ ಇಲ್ಲದಿದ್ದರೂ ರಫೇಲ್ ಖರೀದಿ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ. ಆದರೆ ಅವರ ಆರೋಪವನ್ನು ಜನರು ನಂಬುವುದಿಲ್ಲ’ ಎಂದರು.

ಮುನ್ನೆಚ್ಚರಿಕೆ ಕ್ರಮದ ಕೊರತೆ: ಬೆಂಗಳೂರಿನಲ್ಲಿ ನಡೆದ ಏರ್‌ ಶೋ ವೇಳೆ 300ಕ್ಕೂ ಅಧಿಕ ಕಾರುಗಳು ಭಸ್ಮವಾಗಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ಅದಕ್ಕೆ ಕಾರಣ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT