ಶಿವರಾಜ್‌, ಪುನೀತ್‌, ಯಶ್‌, ವಿಜಯ್‌ ಮನೆಯಿಂದ ದಾಖಲೆಗಳ ವಶ

7
ಐ.ಟಿ ದಾಳಿ: ಮುಂದುವರಿದ ಶೋಧ

ಶಿವರಾಜ್‌, ಪುನೀತ್‌, ಯಶ್‌, ವಿಜಯ್‌ ಮನೆಯಿಂದ ದಾಖಲೆಗಳ ವಶ

Published:
Updated:

ಬೆಂಗಳೂರು: ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಯಶ್‌ ಮತ್ತು ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಮನೆಗಳಲ್ಲಿ ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯನ್ನು ಶನಿವಾರ ಮುಕ್ತಾಯಗೊಳಿಸಿದ್ದಾರೆ.

ನಟರಾದ ಸುದೀಪ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್‌. ಮನೋಹರ್‌ ಹಾಗೂ ಜಯಣ್ಣ ಅವರ ಮನೆಯಲ್ಲಿ ಐ.ಟಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ. ನಟರು ಹಾಗೂ ನಿರ್ಮಾಪಕರ ಮನೆಗಳಿಂದ ಮಹತ್ವದ ದಾಖಲೆಗಳು, ಚಿನ್ನಾಭರಣ ಮತ್ತು ನಗದು ಸಿಕ್ಕಿವೆ. ಸದ್ಯಕ್ಕೆ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಗುರುವಾರ ಬೆಳಗಿನ ಜಾವ ಸುಮಾರು 200 ಅಧಿಕಾರಿಗಳಿದ್ದ 30 ತಂಡ ತಾರಾ ವರ್ಚಸ್ಸಿನ ನಟರು ಹಾಗೂ ಹೆಸರಾಂತ ನಿರ್ಮಾಪಕರ ಮನೆಗಳ ಮೇಲೆ ದಾಳಿ ಮಾಡಿತ್ತು. ಎರಡು ದಿನಗಳ ಸತತವಾಗಿ ಎಲ್ಲರ ಮನೆಗಳನ್ನು ಜಾಲಾಡಿದ ಬಳಿಕ ಅನೇಕರನ್ನು ನಿರಂತ
ರವಾಗಿ ಪ್ರಶ್ನಿಸಿ ಮಾಹಿತಿ ಪಡೆಯಲಾಯಿತು ಎಂದೂ ಮೂಲಗಳು ಹೇಳಿವೆ.

ನಟರು ಹಾಗೂ ನಿರ್ಮಾಪಕರು ಕೊಟ್ಟಿರುವ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಈ ಹೇಳಿಕೆಗಳನ್ನು ವಶಪಡಿಸಿಕೊಂಡಿರುವ ದಾಖಲೆಗಳ ಜೊತೆ ಹೋಲಿಕೆ ಮಾಡಿ ವಿಶ್ಲೇಷಣೆ ಮಾಡಲಾಗುತ್ತದೆ. ಹೆಚ್ಚಿನ ವಿಚಾರಣೆ ಅಗತ್ಯವಾದರೆ ನೋಟಿಸ್‌ ನೀಡಿ ಕರೆಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ನಟರು ಹೊಂದಿರುವ ಆಸ್ತಿಪಾಸ್ತಿ, ಸಿನಿಮಾಗಳಿಗೆ ಪಡೆದಿರುವ ಸಂಭಾವನೆ, ಆದಾಯ ತೆರಿಗೆ ಮತ್ತು ಸರಕು ಮತ್ತು ಸೇವಾ ತೆರಿಗೆ ಪಾವತಿ, ಹೂಡಿಕೆ ಮತ್ತು ಠೇವಣಿಗೆ ಸಂಬಂಧಿಸಿದ ದಾಖಲೆಗಳೂ ಸೇರಿವೆ.

ಕನ್ನಡದ ದೊಡ್ಡ ಬಜೆಟ್‌ ಸಿನಿಮಾಗಳಿಗೆ ಕಪ್ಪು ಹಣ ಹೂಡಿಕೆಯಾಗಿದೆ. ಅದರಿಂದ ಬಂದಿರುವ ಆದಾಯದ ಮಾಹಿತಿಯನ್ನು ಸರಿಯಾಗಿ ಪಾವತಿಸದ ಬಗ್ಗೆ ಅಧಿಕೃತ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಜಿಎಫ್‌, ದಿ ವಿಲನ್‌ ಹಾಗೂ ನಟಸಾರ್ವಭೌಮ ಸಿನಿಮಾಗಳಿಗೆ ಭಾರಿ ಹಣ ಹೂಡಲಾಗಿದೆ. ಕೆಜಿಎಫ್‌ ₹ 150 ಕೋಟಿ ಆದಾಯ ಗಳಿಸಿದೆ ಎಂದು ಹೇಳಲಾಗುತ್ತಿದೆ.

ದಾಳಿಗೆ ಕಾರಣ ಗೊತ್ತಿಲ್ಲ: ಶಿವರಾಜ್

‘ನನ್ನ ಮನೆಯ ಮೇಲೆ ಐ.ಟಿ ದಾಳಿ ಆಗಿರುವುದಕ್ಕೆ ಕಾರಣ ಗೊತ್ತಿಲ್ಲ. ಹೆಚ್ಚು ಕಡಿಮೆ ಸರಿಯಾದ ಪ್ರಮಾಣದಲ್ಲಿ ತೆರಿಗೆ ಕಟ್ಟಿರುತ್ತೇವೆ’ ಎಂದು ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಹೇಳಿದರು.

‘ಆದಾಯ ತೆರಿಗೆ ಅಧಿಕಾರಿಗಳು ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ತಮ್ಮ ಪತ್ನಿ ಗೀತಾ ಚುನಾವಣೆಗೆ ನಿಂತಿದ್ದರಿಂದ ಅವರ ವಿಚಾರಣೆ ಮಾಡಿದ್ದಾರೆ. ಪುನಃ ವಿಚಾರಣೆಗೆ ಕರೆದರೆ ಹೋಗುತ್ತೇವೆ’ ಎಂದೂ ಶಿವರಾಜ್‌ ಕುಮಾರ್‌ ತಿಳಿಸಿದರು.

‘ಈ ದಾಳಿಯಿಂದ ಮನಸಿಗೆ ಬೇಸರವಾಗಿದ್ದು ನಿಜ. ಅಭಿಮಾನಿಗಳಿಗೂ ಆತಂಕವಾಗಿತ್ತು. ಎರಡು ದಿನ ಬೆಳಿಗ್ಗೆ ವಾಯುವಿಹಾರಕ್ಕೆ ಹೊಗಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಪತ್ನಿ ಜೊತೆ ಸಿನಿಮಾ ನೋಡುತ್ತಿದ್ದೆ. ಕೆಲವೊಮ್ಮೆ ಡ್ರೈವ್‌ ಹೋಗ್ತಿದ್ವಿ. ಅದಕ್ಕೂ ಅವಕಾಶ ಆಗಲಿಲ್ಲ’ ಎಂದರು.

‘ದೊಡ್ಡ ನಟರಲ್ವೇ? ಅದಕ್ಕೇ ಗಮನಸೆಳೆದಿದೆ’

‘ಯಶ್, ಪುನೀತ್, ಸುದೀಪ್ ಅವರ ಸಿನಿಮಾಗಳನ್ನು ನೋಡಿರುತ್ತೀರಿ. ದೊಡ್ಡ ನಟರು ಎಂಬ ಕಾರಣಕ್ಕೆ ಐ.ಟಿ ದಾಳಿ ಗಮನ ಸೆಳೆಯುತ್ತಿದೆ ಅಷ್ಟೇ. ಆದಾಯ ಹೆಚ್ಚಾಗಿರಬಹುದೆಂಬ ಊಹೆ‌ ಮೇಲೆ ಐಟಿ ದಾಳಿ ನಡೆಯುತ್ತದೆ’ ಎಂದು ರಮೇಶ್‌ ಅರವಿಂದ್‌ ಹೇಳಿದರು.

‘ಇದು ಐ.ಟಿ ಅಧಿಕಾರಿಗಳು ನಿರಂತವಾಗಿ ನಡೆಸುವ ಪ್ರಕ್ರಿಯೆ. ಎಲ್ಲರೂ ಆದಾಯ ಕಟ್ಟಿ ಎಂಬ ಸಂದೇಶ ಕೊಡಲು ನಟರ ನಿವಾಸದ ಮೇಲೆ ದಾಳಿ ಮಾಡಿರಬಹುದೇನೋ,  ಇದರಲ್ಲಿ ರಾಜಕೀಯ ಇದೆ ಅಂತ ನನಗೆ ಅನ್ನಿಸುವುದಿಲ್ಲ’ ಎಂದು ಅವರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !