ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳಿಲ್ಲ: ಸಿಎಂ ಕುಮಾರಸ್ವಾಮಿ

ರಾಹುಲ್‌ ಗಾಂಧಿ ಅಭಿನಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
Last Updated 30 ಆಗಸ್ಟ್ 2018, 19:56 IST
ಅಕ್ಷರ ಗಾತ್ರ

ನವದೆಹಲಿ: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದ್ದು, ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಸರ್ಕಾರ 100 ದಿನ ಪೂರೈಸಿರುವ ಕಾರಣ ಗುರುವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಗೊಂದಲಗಳೇ ಇಲ್ಲ ಎಂದ ಮೇಲೆ ನಿವಾರಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸರ್ಕಾರ ಐದು ವರ್ಷಗಳ ಪೂರ್ಣ ಅವಧಿ ಪೂರೈಸಲಿದೆ ಎಂದು ಸ್ಪಷ್ಟಪಡಿಸಿದರು.

ಡಿನೋಟಿಫಿಕೇಷನ್‌ ಸೇರಿದಂತೆ ವಿವಿಧ ಅಕ್ರಮ ವ್ಯವಹಾರಗಳಿಗೆ ಆಸ್ಪದ ದೊರೆತಿಲ್ಲ ಎಂಬ ಕಾರಣದಿಂದ ಬಿಜೆಪಿ ಮುಖಂಡರು ಗೊಂದಲಕ್ಕೆ ಒಳಗಾಗಿದ್ದಾರೆ. ಅಕ್ರಮಗಳಿಗೆ ಅವಕಾಶ ಇಲ್ಲದ್ದರಿಂದಲೇ ಸರ್ಕಾರ ಇದುವರೆಗೆ ‘ಟೇಕ್‌ ಆಫ್‌’ ಆಗಿಲ್ಲ ಎಂಬ ವದಂತಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ₹ 45,000 ಕೋಟಿ ಮೊತ್ತದ ಸಾಲ ಮನ್ನಾದಂತಹ ಮಹತ್ವದ ನಿರ್ಧಾರ ಕೈಗೊಂಡರೂ ಮೈತ್ರಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರು, ಅಭದ್ರ ಸ್ಥಿತಿ ಇದೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗೊಂದಲ ಸೃಷ್ಟಿಸಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ ಎಂದು ಅವರು ಮೂದಲಿಸಿದರು.

ಸಂಪುಟ ವಿಸ್ತರಿಸಲು ಮನವಿ:

‘ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ, ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ರಾಹುಲ್ ಗಾಂಧಿ ಅವರ ಬಳಿ ಮನವಿ ಮಾಡಿದ್ದೇನೆ’ ಎಂದ ಅವರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವುದಾಗಿ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಹಿರಿಯ ಮುಖಂಡರಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜಯಿಸಿ ಮತ್ತೆ ಮುಖ್ಯಮಂತ್ರಿ ಆಗುವುದಾಗಿ ಅವರು ಹೇಳಿಕೆ ನೀಡಿದ್ದರಲ್ಲಿ ತಪ್ಪಿಲ್ಲ. ಸಚಿವ ಆರ್‌.ವಿ. ದೇಶಪಾಂಡೆ ಅವರೂ ಮುಖ್ಯಮಂತ್ರಿ ಆಗುವ ಅಪೇಕ್ಷೆ ಹೊಂದಿರಬಹುದು. ಅದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದು, ತಮ್ಮ ಪಕ್ಕದಲ್ಲೇ ಇದ್ದ ಸಚಿವ ದೇಶಪಾಂಡೆ ಅವರಲ್ಲಿ ಆ ಆಕಾಂಕ್ಷೆ ಇರಬಹುದು ಎಂದು ಕುಮಾರಸ್ವಾಮಿ ಉದಾಹರಿಸಿದರು.

ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ಮುನ್ನಡೆಯಲು ಸಿದ್ದರಾಮಯ್ಯ ಅವರ ನೆರವು ಬೇಕು. ಅದಕ್ಕೆ ಪೂರಕವಾದ ಸಹಕಾರ, ನೆರವನ್ನು ಅವರು ನೀಡಲಿದ್ದಾರೆ ಸರ್ಕಾರ ಐದು ವರ್ಷಗಳ ಅವಧಿ ಪೂರೈಸಲಿದೆ’ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿದ್ದು, ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಗಿದೆ. ಇದಕ್ಕೂ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಹುಲ್‌ ಜೊತೆ ಕೇವಲ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗಿದ್ದು, ಬೇರೆ ಯಾವುದೇ ವಿಷಯಗಳನ್ನು ಚರ್ಚಿಸಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಅವರ ಬಯಕೆಯೂ ಆಗಿದೆ’ ಎಂದು ಅವರು ಹೇಳಿದರು.

‘ರಾಜ್ಯದ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಲು ಸಹಕರಿಸಿದ ನಾಡಿನ ಜನತೆಗೂ ಅಭಿನಂದನೆ ಸಲ್ಲಿಸಿದ್ದೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.

ಸುಗ್ರೀವಾಜ್ಞೆ: ರಾಷ್ಟ್ರಪತಿಗೆ ಮನವಿ

ನವದೆಹಲಿ: ಖಾಸಗಿ ಲೇವಾದೇವಿಯವರಿಂದ ಜನಸಾಮಾನ್ಯರು ಪಡೆದ ಸಾಲವನ್ನು ಮನ್ನಾ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಋಣ ಪರಿಹಾರ ಕಾಯ್ದೆ ಜಾರಿಗೊಳಿಸುತ್ತಿದೆ. ಈ ಕುರಿತ ಸುಗ್ರೀವಾಜ್ಞೆಗೆ ಅಂಕಿತ ಹಾಕಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಕೋರಿದರು.

ಇದಕ್ಕೂ ಮುನ್ನ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಜಿತೇಂದ್ರ ಸಿಂಗ್‌ ಅವರನ್ನೂ ಭೇಟಿ ಮಾಡಿದ ಮುಖ್ಯಮಂತ್ರಿ, ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT