ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು: ಜಿ.ಟಿ ದೇವೇಗೌಡ

ಶುಕ್ರವಾರ, ಜೂಲೈ 19, 2019
24 °C
ಪತ್ರಿಕಾ ದಿನಾಚರಣೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ಸಲಹೆ

ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು: ಜಿ.ಟಿ ದೇವೇಗೌಡ

Published:
Updated:
Prajavani

ಮೈಸೂರು: ‘ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮ ಸೇರಿದಂತೆ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ತೊಡೆದು ಹಾಕುವ ಶಕ್ತಿ ಮಾಧ್ಯಮಗಳಿಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣವಾಗಿ ಇರಬೇಕೆಂಬುದು ನನ್ನ ಅಭಿಪ್ರಾಯ. ಆದರೆ, ಜವಾಬ್ದಾರಿಯೂ ಇರಬೇಕು. ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ವಿಷಯಾಧಾರಿತ, ಸತ್ಯದಿಂದ ಕೂಡಿದ ವರದಿಗಳನ್ನು ಪ್ರಕಟಿಸಸಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಣ ನೀಡುವಲ್ಲಿ ಪತ್ರಿಕೆಗಳು ಕೂಡ ಪ್ರಮುಖ ಪಾತ್ರ ನಿಭಾಯಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಮಾಡುತ್ತವೆ. ರೈತರಿಗೆ ಮಾಹಿತಿ ಸಿಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಗೊತ್ತಾಗುತ್ತದೆ. ಸರ್ಕಾರವನ್ನು ಸದಾ ಎಚ್ಚರಿಸುತ್ತಲೇ ಇರುತ್ತವೆ’ ಎಂದು ಶ್ಲಾಘಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ ಮಾತನಾಡಿ, ‘ಪತ್ರಿಕೋದ್ಯಮ ಇಂದು ಆದರ್ಶ ವೃತ್ತಿಯಾಗಿ ಉಳಿದಿಲ್ಲ. ಹಣದ ಬೆನ್ನಟ್ಟಿದೆ. ಹೀಗಾಗಿ, ಮಾಧ್ಯಮಗಳ ವಿರುದ್ಧ ಬೆರಳುಗಳು ಚಾಚಿಕೊಂಡಿವೆ. ತಾನೇ ಹೆಣೆದ ಬಲೆಯಲ್ಲಿ ಸಿಲುಕಿಕೊಂಡಿದೆ’ ಎಂದರು.

‘ಎಲೆಕ್ಟ್ರಾನಿಕ್‌ ಮಾಧ್ಯಮಗಳು ರೋಚಕತೆ ಬೆನ್ನು ಹತ್ತಿವೆ. ಪಕ್ಷಪಾತದ ಆರೋಪ ಎದುರಿಸುತ್ತಿವೆ. ರಚನಾತ್ಮಕವಾಗಿ ಟೀಕೆ ಮಾಡಿದರೆ ಸಂವಿಧಾನ ನಮ್ಮ ನೆರವಿಗೆ ಬರುತ್ತದೆ. ಹೀಗಾಗಿ, ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು. ಇಲ್ಲದಿದ್ದರೆ ಅಗಾಧ ಶಕ್ತಿಯನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ’ ಎಂದು ಎಚ್ಚರಿಸಿದರು.

‘ಒಮ್ಮೆ ಧಕ್ಕೆಯಾದರೆ ನಮ್ಮ ವೃತ್ತಿಗೆ ಯಾವುದೇ ಬೆಲೆ ಇರುವುದಿಲ್ಲ. ಆತ್ಮಶೋಧನೆ ಮಾಡಿಕೊಂಡರೆ ಮಾತ್ರ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ‍’ ಎಂದು ಕಿವಿಮಾತು ಹೇಳಿದರು.

ಪ್ರಾಧ್ಯಾಪಕಿ ಡಾ.ಉಷಾರಾಣಿ, ‘ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳು ನಡೆಯಬೇಕಿದೆ. ಅದು ಸಾಧ್ಯವಾಗದಿದ್ದರೆ ಪತ್ರಿಕೋದ್ಯಮ ನಡೆಸಲು ಆಗಲ್ಲ. ಈ ವಿಚಾರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ’ ಎಂದು ತಿಳಿಸಿದರು.

‘ಈಗಿನದ್ದು ಇಂಟರ್‌ನೆಟ್‌ ಪತ್ರಿಕೋದ್ಯಮ. ಸೈಬರ್‌ ಲೋಕದಲ್ಲಿ ನಾವು ಕೇವಲ ಬಳಕೆದಾರರಾಗಿದ್ದೇವೆ. ಆದರೆ, ಅಸ್ತಿತ್ವ ಹೊಂದಿಲ್ಲ. ಹೀಗಾಗಿ, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ’ ಎಂದರು.

‘ಪತ್ರಕರ್ತರನ್ನು ಜಾಹೀರಾತು ಸಂಗ್ರಹಕಾರರಾಗಿ ಮಾಲೀಕರು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಪತ್ರಕರ್ತರ ಪರವಾಗಿ ಸಮಾಜ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದೊಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ ಛಾಯಾಗ್ರಾಹಕಿ ಬಿ.ಆರ್‌.ಸವಿತಾ (ವರ್ಷದ ಛಾಯಾಗ್ರಾಹಕಿ), ಪತ್ರಕರ್ತರಾದ ಎಂ.ಟಿ.ಮಹದೇವ್‌ (ಜೀವಮಾನ ಸಾಧನೆ), ಬಿ.ವೈ.ಸಾಹಿತ್ಯ (ವರ್ಷದ ಸಾಧನೆ), ಎಂ.ನಾರಾಯಣ (ವರ್ಷದ ಗ್ರಾಮಾಂತರ ಪತ್ರಕರ್ತ), ಸೋಮಶೇಖರ ಚಿಕ್ಕಮರಳಿ (ವರ್ಷದ ಹಿರಿಯ ವರದಿಗಾರ–ದೃಶ್ಯ ಮಾಧ್ಯಮ), ರಾಮು (ವರ್ಷದ ಹಿರಿಯ ಛಾಯಾಗ್ರಾಹಕ–ದೃಶ್ಯ ಮಾಧ್ಯಮ), ಎಚ್‌.ಕೆ.ಗುರುಪ್ರಸಾದ್‌ (ವರ್ಷದ ವರದಿಗಾರ), ಎಸ್‌.ಆರ್‌.ಮಧುಸೂದನ್‌ (ವರ್ಷದ ಛಾಯಾಗ್ರಾಹಕ), ಕೆ.ಪಿ.ನಾಗರಾಜ್‌ (ಉತ್ತಮ ವರದಿಗಾರಿಕೆ–ದೃಶ್ಯ ಮಾಧ್ಯಮ), ಕಾರ್ತಿಕ್‌ (ಉತ್ತಮ ಛಾಯಾಗ್ರಹಣ–ದೃಶ್ಯ ಮಾಧ್ಯಮ) ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಮ್‌, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ಇದ್ದರು.

ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿದ ಬಿಜೆಪಿ ಶಾಸಕ!

‘ರಾಜಕಾರಣಿಗಳು ಒತ್ತಡದಿಂದ ಏನೋ ಮಾತನಾಡಿರುತ್ತಾರೆ. ಮಾಧ್ಯಮಗಳು ಅದನ್ನೇ ಪದೇಪದೇ ತೋರಿಸುತ್ತವೆ. ಏಕೆ ವೋಟು ಹಾಕಿಲ್ಲ ಎಂದು ಜನರಲ್ಲಿ ನಾನೂ ಕೇಳಿರುತ್ತೇನೆ. ಏಕೆಂದರೆ ಕೆಲಸ ಮಾಡಿರುತ್ತೇನೆ. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತ್ತೀಚಿಗಿನ ಹೇಳಿಕೆಯನ್ನು ಬಿಜೆಪಿ ಶಾಸಕ ಹರ್ಷವರ್ಧನ್‌ ಸಮರ್ಥಿಸಿಕೊಂಡರು.

‘ಸುದ್ದಿ ವಾಹಿನಿಗಳ ಸಂಖ್ಯೆ ಹೆಚ್ಚಿದಂತೆ ಗುಣಮಟ್ಟ ತಗ್ಗುತ್ತಿದೆ. ಟಿಆರ್‌ಪಿಗಾಗಿ ಏನೇನೋ ಸುದ್ದಿ ಕೊಡುತ್ತಿದ್ದಾರೆ. ಉಪ್ಪುಖಾರ ಹಾಕಬೇಡಿ. ವಾಸ್ತವವನ್ನು ತಿಳಿಸಿ’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !